ಮುಡಾ ಕಾರ್ಯಾಚರಣೆ: ಆರು ಎಕರೆ ಪ್ರದೇಶದಲ್ಲಿ ತಲೆಯೆತ್ತಿದ್ದ 4 ಅನಧಿಕೃತ ಬಡಾವಣೆ ತೆರವು
ಮೈಸೂರು

ಮುಡಾ ಕಾರ್ಯಾಚರಣೆ: ಆರು ಎಕರೆ ಪ್ರದೇಶದಲ್ಲಿ ತಲೆಯೆತ್ತಿದ್ದ 4 ಅನಧಿಕೃತ ಬಡಾವಣೆ ತೆರವು

August 28, 2022

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಈ ರೀತಿಯ 40ಕ್ಕೂ ಹೆಚ್ಚು ಅನಧಿಕೃತ ಬಡಾವಣೆಗಳಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮುಡಾ ಕಾರ್ಯದರ್ಶಿ ಡಾ.ಎನ್.ಸಿ.ವೆಂಕಟರಾಜು, ಇಂಜಿನಿಯರ್‍ಗಳು ಕ್ಷೇತ್ರ ಪರಿವೀಕ್ಷಣೆ ಸಂದರ್ಭದಲ್ಲಿ ನಿರ್ಮಾಣ ಹಂತದ ಬಡಾವಣೆಗಳ ಮೇಲೆ ನಿಗಾ ವಹಿಸುತ್ತಾರೆ. ಏನಾದರೂ ವ್ಯತ್ಯಾಸಗಳು ಕಂಡು ಬಂದರೆ ಭೂ ಮಾಲೀಕರು ಅಥವಾ ಬಡಾವಣೆ ನಿರ್ಮಾಣ ಮಾಡುವವರ ಗಮನಕ್ಕೆ ತಂದು ಸರಿಪಡಿಸಿ ಕೊಳ್ಳುವಂತೆ ಸೂಚನೆ ನೀಡುತ್ತಾರೆ. ನಿವೇಶನ ಖರೀದಿದಾರರ ಮಾಹಿತಿ ತಿಳಿದರೆ ಅವರಿಗೂ ತಿಳುವಳಿಕೆ ನೀಡುತ್ತಾರೆ. ಆದರೂ ನಿಯಮಬಾಹಿರವಾಗಿ ನಿರ್ಮಾಣ ಮುಂದುವರೆಸಿದರೆ ಅಂತಹ ಪ್ರಕರಣಗಳ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುತ್ತಾರೆ. ಹೀಗೆ ಅನಧಿಕೃತವಾಗಿ 42 ಬಡಾವಣೆಗಳು ನಿರ್ಮಾಣವಾಗುತ್ತಿವೆ ಎಂಬ ಮಾಹಿತಿ ಇದೆ. ಈ ಬಗ್ಗೆ ಪರಿಶೀಲನೆ ನಡೆಸಿ ಅನಧಿಕೃತವಾಗಿದ್ದರೆ ಹಂತ ಹಂತವಾಗಿ ನೆಲಸಮಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಮೈಸೂರು, ಆ.27(ಆರ್‍ಕೆ, ಎಸ್‍ಬಿಡಿ)- ಮೈಸೂರಿ ನಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ನಾಲ್ಕು ಬಡಾವಣೆಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಶನಿವಾರ ತೆರವುಗೊಳಿಸಿದೆ.

ಮೈಸೂರಿನ ಸಾತಗಳ್ಳಿ ಗ್ರಾಮದ ಸರ್ವೆ ನಂ. 65, 27/3, 2/3 ಹಾಗೂ ದೇವನೂರು ಗ್ರಾಮದ ಸರ್ವೆ ನಂ. 25ರಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದ್ದ ಬಡಾವಣೆಗಳನ್ನು ಉದಯಗಿರಿ ಠಾಣೆ ಪೊಲೀಸರ ಬಂದೋಬಸ್ತ್‍ನೊಂದಿಗೆ ಮುಡಾ ಅಧಿಕಾರಿಗಳು ಈ ಮಹಾ ಕಾರ್ಯಾ ಚರಣೆ ನಡೆಸುವÀ ಮೂಲಕ ಸರ್ಕಾರದ ಕಣ್ಣಿಗೆ ಮಣ್ಣೆರೆಚುವ ಹಾಗೂ ನಿವೇಶನ ಖರೀದಿದಾರರಿಗೆ ಅನ್ಯಾಯ ಮಾಡುವವರಿಗೆ ಖಡಕ್ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಆಗದೆ, ಮುಡಾದಿಂದ ನಕ್ಷೆ ಅನುಮೋದನೆಯನ್ನೂ ಪಡೆಯದೆ ಅನಧಿಕೃತವಾಗಿ ಬಡಾವಣೆ ನಿರ್ಮಿಸಿ, ನಿವೇಶನಗಳನ್ನು ರಚಿಸಲಾಗಿತ್ತು. ಅಲ್ಲದೇ ಸಾತಗಳ್ಳಿ ಗ್ರಾಮದಲ್ಲಿ ಸಾರ್ವಜನಿಕ ರಸ್ತೆ ಜಾಗದಲ್ಲಿ ಅನಧಿಕೃತವಾಗಿ ಶೆಡ್‍ಗಳನ್ನೂ ನಿರ್ಮಿಸಲಾಗಿತ್ತು. ಈ ಸಂಬಂಧ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದ ಮುಡಾ ಆಯುಕ್ತ ಜಿ.ಟಿ.ದಿನೇಶ್‍ಕುಮಾರ್, ಶನಿವಾರ ಬೆಳಗ್ಗೆ 6ರಿಂದ 11 ಗಂಟೆವರೆಗೆ ಅಧಿಕಾರಿ ಗಳೊಂದಿಗೆ ಕಾರ್ಯಾಚರಣೆ ನಡೆಸಿ, ಅನಧಿಕೃತ ಬಡಾವಣೆಗಳ ನಿರ್ಮಾಣಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿದರಲ್ಲದೆ, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದ್ದ ರಸ್ತೆಯಲ್ಲಿನ ನಿರ್ಮಾಣ ಗಳನ್ನೂ ಧ್ವಂಸಗೊಳಿಸಿದರು. ಮುಡಾ ಕಾರ್ಯ ದರ್ಶಿ ಡಾ.ಎನ್.ಸಿ.ವೆಂಕಟರಾಜು, ಎಕ್ಸಿಕ್ಯೂಟಿವ್ ಇಂಜಿನಿಯರ್‍ಗಳಾದ ಮೋಹನ್, ಸುನಿಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂಬಂಧ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಮುಡಾ ಕಾರ್ಯದರ್ಶಿ ಡಾ.ಎನ್.ಸಿ. ವೆಂಕಟರಾಜು, ಕರ್ನಾಟಕ ನಗರಾಭಿವೃದ್ಧಿ ಕಾಯ್ದೆ (ಏUಆಂ ಂಛಿಣ) ಅನ್ವಯ ಭೂಪರಿವರ್ತನೆ ಸೇರಿ ದಂತೆ ನಿಯಮಬದ್ಧವಾಗಿ ಬಡಾವಣೆ ನಿರ್ಮಾಣ ಮಾಡಬೇಕು. ಮುಡಾಗೆ ಅರ್ಜಿ ಹಾಕಿ, ಅನುಮೋದನೆ ಪಡೆದು ನಿಯಮಾನುಸಾರ ಬಡಾವಣೆಯ ಒಟ್ಟು ವಿಸ್ತೀರ್ಣದ ಶೇ.56ರಷ್ಟು ಪ್ರದೇಶದಲ್ಲಿ ನಿವೇಶನ ರಚಿಸಿ ಹಂಚಿಕೆ ಮಾಡಬೇಕು. ಇನ್ನುಳಿದ ಜಾಗವನ್ನು ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಡಬೇಕು ಎಂದು ತಿಳಿಸಿದ್ದಾರೆ.

ಆದರೆ ಸಾರ್ವಜನಿಕ ಉಪಯೋಗಕ್ಕೆ ಬಿಡಬೇಕಾದ ಜಾಗದಲ್ಲೂ ನಿವೇಶನ ರಚನೆ ಮಾಡಿ ಹಂಚುವ ಹಾಗೂ ಅನುಮೋದನೆ ಶುಲ್ಕ ಪಾವತಿಯಿಂದ ತಪ್ಪಿಸಿಕೊಳ್ಳುವ ದುರುದ್ದೇಶದಿಂದ ರೆವಿನ್ಯೂ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಿ, ನಿವೇಶನ ಮಾರಾಟ ಮಾಡುತ್ತಾರೆ. ಹೀಗೆ ಅನಧಿಕೃತವಾಗಿ ಸುಮಾರು 6 ಎಕರೆ ಜಾಗದಲ್ಲಿ ಬಡಾವಣೆ ನಿರ್ಮಿಸಲಾಗಿತ್ತು. ರಸ್ತೆ, ವಿದ್ಯುತ್ ಕಂಬ, ನಿವೇಶನ ವಿಭಜನೆ ಮಾಡಲಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಅಲ್ಲದೆ ಕ್ಷೇತ್ರ ಪರಿವೀಕ್ಷಣೆ ಸಂದರ್ಭದಲ್ಲಿ ನಮ್ಮ ಇಂಜಿನಿಯರ್‍ಗಳು ಗುರುತಿಸಿದ್ದರು. ನಿಯಮಬದ್ಧವಾಗಿ ಬಡಾವಣೆ ನಿರ್ಮಿಸುವಂತೆ ತಿಳಿ ಹೇಳಿದ್ದರು. ಆದರೂ ನಿರ್ಮಾಣ ಕಾರ್ಯ ಮುಂದುವರೆಸಿದ್ದ ಕಾರಣ ಇಂದು ಕಾರ್ಯಾಚರಣೆ ನಡೆಸಿ, ನೆಲಸಮಗೊಳಿಸಲಾಯಿತು ಎಂದರು.

ಖರೀದಿಸುವಾಗ ಎಚ್ಚರ: ಅನಧಿಕೃತ ಬಡಾವಣೆ ಎಂದು ಗುರುತಿಸಿದರೆ ಅದರಲ್ಲಿ ಬಡಾವಣೆ ನಿರ್ಮಾಣ ಮಾಡಿದವರೊಂದಿಗೆ ನಿವೇಶನ ಖರೀದಿ ಮಾಡಿದವರೂ ಪಾಲುದಾರರಾಗುತ್ತಾರೆ. ನಿವೇಶನ ಖರೀದಿ ಮಾಡುವ ಮುನ್ನ ಆ ಪ್ರದೇಶದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಭೂಪರಿವರ್ತನೆ, ಮುಡಾ ಅನುಮೋದನೆ ಇನ್ನಿತರ ಅಂಶಗಳ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ನಿರ್ಲಕ್ಷ್ಯದಿಂದ ನಿವೇಶನ ಖರೀದಿಸಿದರೆ ನಷ್ಟ ಅನುಭವಿಸಬೇಕಾ ಗುತ್ತದೆ. ಬಡಾವಣೆ ನಿರ್ಮಿಸಿ, ನಿವೇಶನ ಮಾರಿ ಹೋದವರು ಮತ್ತೆ ಬರುವುದಿಲ್ಲ. ಹಾಗಾಗಿ ಈ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.

ಸಾರ್ವಜನಿಕರಿಗೆ ಮಹಾಮೋಸ: ಮೈಸೂರಿನ ಸುತ್ತಲೂ ನಾಯಿ ಕೊಡೆಗಳಂತೆ ಬಡಾವಣೆಗಳು ಎದ್ದಿವೆ. ರೆವಿನ್ಯೂ ಜಾಗದಲ್ಲಿ ಮನಸ್ಸೋಇಚ್ಛೆ ಬಡಾವಣೆ ನಿರ್ಮಿಸಿ, ಭಾರೀ ಬೆಲೆಗೆ ನಿವೇಶನ ಬಿಕರಿ ಮಾಡಲಾಗುತ್ತಿದೆ. ಮೊದಲು ಖರೀದಿದಾರರನ್ನು ಹುಡುಕಿ ಅವರಿಂದ ಮುಂಗಡ ಪಡೆದು ನಂತರ ಬಡಾವಣೆ ನಿರ್ಮಾಣ ಆರಂಭಿಸಲಾ ಗುತ್ತದೆ. ಬಳಿಕ ಕಂತುಗಳಲ್ಲಿ ಹಣ ಪಡೆದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗು ತ್ತದೆ. ಇದರ ನಡುವೆ ಅಗ್ರಿಮೆಂಟ್ ಮಾಡಿಕೊಟ್ಟು ಖರೀದಿದಾರರ ವಿಶ್ವಾಸ ಕಾಯ್ದು ಕೊಳ್ಳಲಾಗುತ್ತದೆ. ಹೀಗೆ ಸಾರ್ವಜನಿಕರು ಹಣ ನೀಡಿ ಅನಧಿಕೃತ ಬಡಾವಣೆಗಳಲ್ಲೂ ನಿವೇಶನ ಖರೀದಿಸಿರುವ ಸಾಧ್ಯತೆ ಇದೆ. ಮುಡಾ ಅಧಿಕಾರಿಗಳು ಇಂದು ನೆಲಸಮ ಗೊಳಿಸಿದ ಬಡಾವಣೆಗಳಲ್ಲೂ ಅದೆಷ್ಟೋ ಜನ ನಿವೇಶನ ಖರೀದಿಸಿರಬಹುದು. ಆದರೆ ಮನೆ ಕಟ್ಟುವ ಅವರ ಕನಸು ಇಂದೇ ನೆಲಸಮವಾದಂತಾಗುತ್ತದೆ.

ಸಾರ್ವಜನಿಕರು ಸ್ಥಳೀಯ ಯೋಜನಾಪ್ರದೇಶ ಸರಹದ್ದಿನಲ್ಲಿ ನಿವೇಶನ ಖರೀದಿಸುವ ಮುನ್ನ ಆ ಬಡಾವಣೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ಅನುಮೋದನೆಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಹಾಗೂ ಅನಧಿಕೃತವಾಗಿ ಬಡಾವಣೆಗಳು ನಿರ್ಮಾಣವಾಗುತ್ತಿದ್ದರೆ ತಕ್ಷಣ ಮುಡಾಗೆ ಮಾಹಿತಿ ನೀಡಬೇಕೆಂದು ಆಯುಕ್ತ ಜಿ.ಟಿ.ದಿನೇಶ್‍ಕುಮಾರ್ ಸಹ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Translate »