ಶ್ವಾನದಳದೊಂದಿಗೆ ಮುಂಜಾನೆ ಕ್ಷಿಪ್ರ ಕಾರ್ಯಾಚರಣೆ
ಮೈಸೂರು

ಶ್ವಾನದಳದೊಂದಿಗೆ ಮುಂಜಾನೆ ಕ್ಷಿಪ್ರ ಕಾರ್ಯಾಚರಣೆ

January 24, 2023

ಮೈಸೂರು, ಜ.23(ಆರ್‍ಕೆ)- ಮೈಸೂರು ನಗರವನ್ನು ಗಾಂಜಾ ಮುಕ್ತಗೊಳಿಸಲು ಪಣ ತೊಟ್ಟಿರುವ ಪೊಲೀಸರು, ಪೆಡ್ಲರ್ ಗಳ ವಿರುದ್ಧ ಸಮರ ಸಾರಿದ್ದಾರೆ.
ನಗರ ಪೊಲೀಸ್ ಆಯುಕ್ತ ಬಿ. ರಮೇಶ್ ನಿರ್ದೇಶನದಂತೆ ಇಂದು ಬೆಳ್ಳಂಬೆಳಗ್ಗೆ ಕೊರೆಯುವ ಚಳಿಯಲ್ಲಿ 30 ಅಧಿಕಾರಿಗಳ ನೇತೃತ್ವದ ತಂಡ ಶ್ವಾನದಳ ಸಿಬ್ಬಂದಿ ಯೊಂದಿಗೆ ಮೈಸೂರು ನಗರದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಪೆಡ್ಲರ್ ಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿತು. ಈ ವೇಳೆ 500 ಗ್ರಾಂನಷ್ಟು ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, 12 ಮಂದಿ ಪೆಡ್ಲರ್‍ಗಳನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನು ಮೇಟಗಳ್ಳಿ ಠಾಣೆಗೆ ಕರೆತಂದು ಎಚ್ಚರಿಕೆ ಪಾಠ ನೀಡಿ, ಕಳುಹಿಸಿದರು.

ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ. ಮುತ್ತುರಾಜ್ ನೇತೃತ್ವದಲ್ಲಿ ರಚಿಸ ಲಾಗಿದ್ದ 30 ಪೊಲೀಸ್ ಅಧಿಕಾರಿಗಳ ತಂಡಗಳು ಮುಂಜಾನೆ 4 ಗಂಟೆಗೆ ಈ ಹಿಂದೆ ಗಾಂಜಾ ಪ್ರಕರಣದಲ್ಲಿ ಬಂಧಿತ ರಾಗಿ ಬಿಡುಗಡೆ ಹೊಂದಿರುವ ಪೆಡ್ಲರ್ ಗಳ ಮನೆ ಮೇಲೆ ದಾಳಿ ನಡೆಸಿತು. ಗಾಢ ನಿದ್ರೆಯಲ್ಲಿದ್ದಾಗ ಬಾಗಿಲು ತಟ್ಟಿದ ಪೊಲೀಸ ರನ್ನು ಕಂಡು ಪೆಡ್ಲರ್‍ಗಳ ಮನೆಯವರು ಬೆಚ್ಚಿಬಿದ್ದರು. ಪೊಲೀಸರು ಮನೆಯವರಿಗೆ ಗಾಂಜಾ ವಿರುದ್ಧದ ಕಾರ್ಯಾಚರಣೆ ಬಗ್ಗೆ ತಿಳಿಸಿ, ಶೋಧ ಕಾರ್ಯ ಆರಂಭಿಸಿದರು. ವಾಸನೆ ಹಿಡಿದ ಶ್ವಾನಗಳು ಮನೆಯಲ್ಲಿ ಅಡಗಿಸಿಟ್ಟಿದ್ದ ಗಾಂಜಾವನ್ನು ಪತ್ತೆ ಮಾಡಿ ದವು. ಈ ಸಂದರ್ಭ ಒಟ್ಟು 12 ಮಂದಿಯನ್ನು ವಶಕ್ಕೆ ಪಡೆದ ಕಾರ್ಯಾಚರಣೆ ತಂಡದವರು, ಮೇಟಗಳ್ಳಿ ಠಾಣೆಗೆ ಕರೆ ತಂದು ಖಡಕ್ ಎಚ್ಚರಿಕೆ ನೀಡಿದರು. ಇಂದು ಪತ್ತೆಯಾದ ಗಾಂಜಾ ಎಲ್ಲಿಂದ ಬಂತು, ಯಾರಿಗೆ ಎಲ್ಲಿ ಮಾರಾಟ ಮಾಡಲು ತರಲಾಗಿದೆ ಎಂಬಿತ್ಯಾದಿ ಮಾಹಿತಿ ಕಲೆ ಹಾಕಿದರು. ಗಾಂಜಾ, ಡ್ರಗ್ಸ್, ಮಾದಕ ವಸ್ತುಗಳನ್ನು ಹೊಂದಿದ್ದರೆ, ಮಾರಾಟ ಮಾಡಿದರೆ ಅಥವಾ ದಂಧೆ ನಡೆಸುವವರೊಂದಿಗೆ ಸಂಪರ್ಕ ಹೊಂದಿದ್ದರೆ, ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇವೆ ಎಂದು ಡಿಸಿಪಿ ಎಂ.ಮುತ್ತುರಾಜ್ ಪೆಡ್ಲರ್‍ಗಳಿಗೆ ಎಚ್ಚರಿಕೆ ನೀಡಿದರು. ಕಾರ್ಯಾಚರಣೆಯಲ್ಲಿ ಎಸಿಪಿಗಳಾದ ಎಂ.ಎನ್. ಶಶಿಧರ್, ಎಂ. ಶಿವಶಂಕರ್, ಎಸ್.ಇ. ಗಂಗಾಧರಸ್ವಾಮಿ, ಸಿಸಿಬಿ ಎಸಿಪಿ ಸಿ.ಕೆ. ಅಶ್ವಥ್‍ನಾರಾಯಣ, ಎಲ್ಲಾ ಠಾಣೆಗಳ ಇನ್‍ಸ್ಪೆಕ್ಟರ್, ಸಬ್‍ಇನ್ಸ್‍ಪೆಕ್ಟರ್‍ಗಳು ಪಾಲ್ಗೊಂಡಿದ್ದರು. ಇತ್ತೀಚೆಗಷ್ಟೇ ಮನೆಗಳಿಗೆ ದಾಳಿ ಮಾಡಿ ರೌಡಿಗಳನ್ನು ಕರೆತಂದು ಡ್ರಿಲ್ ಮಾಡಿ ಬಾಲ ಬಿಚ್ಚದಂತೆ ಎಚ್ಚರಿಕೆ ನೀಡಿದ್ದ ಪೊಲೀಸ್ ಆಯುಕ್ತ ಬಿ. ರಮೇಶ್ ಇದೀಗ ಗಾಂಜಾ ಪೆಡ್ಲರ್‍ಗಳಿಗೂ ಶಾಕ್ ನೀಡಿ, ದಂಧೆಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಈ ಹಿಂದೆ ಗಾಂಜಾ ಪ್ರಕರಣಗಳಲ್ಲಿ ಭಾಗಿಯಾಗಿದ್ದವರ ಚಲನ-ವಲನದ ಬಗ್ಗೆ ನಿಗಾ ವಹಿಸುತ್ತಿರುವ ಖಾಕಿ ಪಡೆ, ಅವರ ಸಹಚರರಿಗೂ ಎಚ್ಚರಿಕೆ ನೀಡುತ್ತಿದೆ. ಕಾಲೇಜುಗಳು, ಲಿಕ್ಕರ್ ಶಾಪ್‍ಗಳು, ಹಾಸ್ಟೆಲ್‍ಗಳು, ಪೇಯಿಂಗ್ ಗೆಸ್ಟ್‍ಗಳ ಸುತ್ತಮುತ್ತಲ ಅಂಗಡಿ-ಮುಂಗಟ್ಟುಗಳಲ್ಲಿ ಗಾಂಜಾ, ಅಫೀಮು ಮತ್ತು ಬರುವ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಸಂಶಯದ ಹಿನ್ನೆಲೆಯಲ್ಲಿ ಆಯಾಯ ಠಾಣೆಗಳ ಮಫ್ತಿ ಪೊಲೀಸರು ಸೂಕ್ಷ್ಮವಾಗಿ ನಿಗಾ ವಹಿಸಿದ್ದಾರೆ.

Translate »