ಸುತ್ತೂರು ಮಠದಲ್ಲಿ ಸಚಿವರಿಂದ `ಎಜು ಕೌಶಲ್’ ಆ್ಯಪ್ ಬಿಡುಗಡೆ
ಮೈಸೂರು

ಸುತ್ತೂರು ಮಠದಲ್ಲಿ ಸಚಿವರಿಂದ `ಎಜು ಕೌಶಲ್’ ಆ್ಯಪ್ ಬಿಡುಗಡೆ

May 29, 2020

ಮೈಸೂರು, ಮೇ 28(ಆರ್‍ಕೆಬಿ)- ಪ್ರಾಥ ಮಿಕ ಹಂತದ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಕೌಶಲಗಳನ್ನು ಅಭಿವೃದ್ಧಿಪಡಿಸುವ `ಎಜು ಕೌಶಲ ಆ್ಯಪ್’ (EDU KAUSHAL APP) ಅನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಚಾಮುಂಡಿಬೆಟ್ಟದ ಪಾದದಲ್ಲಿರುವ ಸುತ್ತೂರು ಮಠದಲ್ಲಿ ಬಿಡುಗಡೆ ಗೊಳಿಸಿದರು.

ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದ ಸಚಿವರು, ಬಳಿಕ ಆ್ಯಪ್ ಬಿಡುಗಡೆಗೊಳಿಸಿ ದರು. ಮೈಸೂರಿನ ಎವಿಕೆ ರಿಸೋರ್ಸ್ ಸೆಂಟರ್ ಎಸ್‍ಜೆಸಿಇ-ಸ್ಟೆಪ್‍ನಲ್ಲಿ `ಎಜು ಕೌಶಲ್ ಆ್ಯಪ್’ ಅಭಿವೃದ್ಧಿಪಡಿಸಿದೆ. 1ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳ ಶೈಕ್ಷ ಣಿಕ ಕಾರ್ಯಕ್ಷಮತೆ ಅಭಿವೃದ್ಧಿಗಾಗಿ ಅವರ ಪಠ್ಯ ಪುಸ್ತಕವನ್ನು ಆಧರಿಸಿ ಸ್ವತಂತ್ರವಾಗಿ ಶೈಕ್ಷಣಿಕ ಕೌಶಲಗಳನ್ನು ಡಿಜಿಟಲ್ ಮೀಡಿಯಾ (ಸ್ಮಾರ್ಟ್ ಫೋನ್, ಟ್ಯಾಬ್) ಮೂಲಕ ಅಭಿವೃದ್ಧಿಪಡಿಸುವುದು.

ಶೈಕ್ಷ ಣಿಕ ಪ್ರಗತಿಗಾಗಿ ಬೇಕಾಗಿರುವ ಶೈಕ್ಷಣಿಕ ಕೌಶಲಗಳಾದ ಕೇಳುವ, ಮಾತನಾಡುವ, ಓದುವ ಮತ್ತು ಬರೆಯುವ ಕೌಶಲಗಳನ್ನು ಅಭಿವೃದ್ಧಿಪಡಿಸುವುದು, ಎಜು ಕೌಶಲ್ ಆ್ಯಪ್ ಬಳಸಿ, ಕರ್ನಾಟಕ ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಶಾಲೆಗಳಲ್ಲಿ ಮಕ್ಕಳ ಶೈಕ್ಷ ಣಿಕ ಕೌಶಲವನ್ನು ಸುಲಭವಾಗಿ ಕಲಿಯಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ಕಲಿಕೆಗಾಗಿ ಅವಶ್ಯವಿರುವ ಆಡಿಯೋ, ವಿಜುಯಲ್ ಗಳನ್ನು ಆ್ಯಪ್‍ನಲ್ಲಿ ಸಂಯೋಜಿಸಲಾಗಿದೆ. ಎಜು ಕೌಶಲ್ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಮಕ್ಕಳು ಪಾಠಗಳನ್ನು ಮತ್ತು ಪ್ರಶ್ನೋತ್ತರ ಗಳನ್ನು ಕಲಿಯಲು, ಪಾಠಗಳ ಅಭ್ಯಾಸ ಮತ್ತು ಸ್ವಮೌಲ್ಯಮಾಪನ ಮಾಡಿಕೊಳ್ಳಲು ಸಹಕಾರಿಯಾಗಲಿದೆ.

ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ, ಜೆಎಸ್‍ಎಸ್ ಮಹಾ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜು ನಾಥ್, ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರ್‍ಮಠ್, ಎವಿಕೆ ರಿಸೋರ್ಸ್ ಸೆಂಟರ್ ಸಿಇಓ ಕೆ.ಚಿಟ್ಟಿಬಾಬು, ಅಭಿವೃದ್ಧಿ ಅಧಿಕಾರಿ ಪಿ.ಶ್ರುತಿ, ವ್ಯಾಪಾರ ಅಭಿವೃದ್ಧಿ ಅಧಿಕಾರಿ ಅನೂಪ್ ಕೌಶಿಕ್, ಎಸ್‍ಜೆಸಿಇ-ಸ್ಟೆಪ್ ಚೀಫ್ ಎಕ್ಸಿಕ್ಯುಟಿವ್ ಶಿವಶಂಕರ್ ಇನ್ನಿತರರು ಉಪಸ್ಥಿತರಿದ್ದರು.

Translate »