ಮೈಸೂರು, ಮೇ 28(ಆರ್‍ಕೆ)-ಕೋವಿಡ್-19 ಲಾಕ್‍ಡೌನ್ ನಿರ್ಬಂಧದಿಂದಾಗಿ ಬಂದ್ ಆಗಿರುವ ದೇವಾಲಯಗಳನ್ನು ತೆರೆಯುವ ಕುರಿತಂತೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಕೊರೊನಾ ವೈರಸ್ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತೆ ವಹಿಸಿ ಕೇಂದ್ರ ಸರ್ಕಾರದ ಮಾರ್ಗ ಸೂಚಿಗಳನ್ವಯ ರಾಜ್ಯಾದ್ಯಂತ ಮುಜರಾಯಿ ವ್ಯಾಪ್ತಿಯು ಸೇರಿದಂತೆ ಎಲ್ಲಾ ದೇವಸ್ಥಾನಗಳನ್ನು ತೆರೆದು, ಪೂಜಾ ಕೈಂಕರ್ಯ ಮತ್ತು ಭಕ್ತಾದಿಗಳ ದರ್ಶನಕ್ಕೆ ಅವಕಾಶ ಕಲ್ಪಿಸುವ ಸಂಬಂಧ ಸರ್ಕಾರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದೆ.
ಲಾಕ್‍ಡೌನ್ ನಿರ್ಬಂಧ ತೆರವುಗೊಳಿಸಿದ ನಂತರ ಯಾವ ದೇವಾಲಯಗಳನ್ನು ಜೂನ್ 1ರಿಂದ ತೆರೆಯಬಹುದು, ಯಾವ ದೇವಸ್ಥಾನಗಳನ್ನು ಜೂನ್ 15ರ ನಂತರ ತೆರೆಯುವುದು ಸೂಕ್ತ ಎಂಬುದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಹನವಾದ ಚರ್ಚೆ ನಡೆಯುತ್ತಿದೆ. ದೇವಸ್ಥಾನಗಳನ್ನು ತೆರೆಯಲು ಆದೇಶ ಹೊರ ಬಿದ್ದಲ್ಲಿ ಮಾರ್ಗಸೂಚಿಗಳನ್ನು ಅನುಸರಿಸಿ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯ, ಉತ್ತನಹಳ್ಳಿಯ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನ, ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನ ಹಾಗೂ ಅರಮನೆ ಆವರಣದ ಎಲ್ಲಾ ಮುಜರಾಯಿ ದೇವಸ್ಥಾನಗಳನ್ನು ತೆರೆದು ಪೂಜಾ ಕೈಂಕರ್ಯ ಆರಂಭಿಸುವ ಕುರಿ ತಂತೆ ಇಂದು ಮುಜರಾಯಿ ಇಲಾಖೆ ಅಧಿಕಾರಿಗಳು ಆಯಾ ದೇವಸ್ಥಾನಗಳ ಅರ್ಚಕರು ಮತ್ತು ಸಿಬ್ಬಂದಿ ಗಳೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂಬಂಧ `ಮೈಸೂರು ಮಿತ್ರ’ನಿಗೆ ಪ್ರತಿ ಕ್ರಿಯಿಸಿರುವ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇ ಶ್ವರಿ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಎನ್.ಎಸ್.ಯತಿರಾಜ್ ಸಂಪತ್‍ಕುಮಾರನ್ ಅವರು, ಸರ್ಕಾರ ಇನ್ನೂ ದೇವಸ್ಥಾನ ತೆರೆಯುವ ಬಗ್ಗೆ ಆದೇಶ ಹೊರಡಿಸಿಲ್ಲ. ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿರುವುದರಿಂದ ಎಚ್ಚೆತ್ತು ನಾವು ದೇವಸ್ಥಾನದ ಅರ್ಚಕರು, ಸಿಬ್ಬಂದಿಗಳೊಂದಿಗೆ ಇಂದು ಸಮಾಲೋಚನೆ ನಡೆಸಿದ್ದೇವೆ ಎಂದರು.
ಒಂದು ವೇಳೆ ಸರ್ಕಾರ ನಿರ್ದೇಶನ ನೀಡಿದಲ್ಲಿ ಯಾವ ರೀತಿಯ ಕ್ರಮ ವಹಿಸಬೇಕು, ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲು ಕೋವಿಡ್-19 ನಿಯಮಗಳನ್ನು ಪಾಲಿಸುವ ಸಂಬಂಧ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಿದ್ದೇವೆ ಎಂದು ಅವರು ನುಡಿದರು.