ಬರೀ ಪದವಿ ನೀಡುವುದಲ್ಲ, ಬದುಕು ಕಟ್ಟಿಕೊಡುವುದೇ ಶಿಕ್ಷಣ
ಮೈಸೂರು

ಬರೀ ಪದವಿ ನೀಡುವುದಲ್ಲ, ಬದುಕು ಕಟ್ಟಿಕೊಡುವುದೇ ಶಿಕ್ಷಣ

January 6, 2022

ಮೈಸೂರು, ಜ.5(ಜಿಎ)- ಪದವಿ ನೀಡುವುದು ಶಿಕ್ಷಣವಲ್ಲ. ಬದಲಿಗೆ ಬದುಕನ್ನು ಕಟ್ಟಿಕೊಡುವುದೇ ನಿಜವಾದ ಶಿಕ್ಷಣ ಎಂದು ಮೈಸೂರು ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಅಭಿಪ್ರಾಯಪಟ್ಟರು.

ನಗರದ ಲಕ್ಷ್ಮೀಪುರಂನ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಕಳೆದ 38 ದಿನಗಳ ಕಾಲ ಜ್ಞಾನಬುತ್ತಿ ಸಂಸ್ಥೆ ವತಿಯಿಂದ ನಡೆದ ‘ಕಾಲೇಜು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರ’ದ ಸಮಾರೋಪದಲ್ಲಿ ಮಾತ ನಾಡಿದ ಅವರು, ಪ್ರಸ್ತುತ ಶಿಕ್ಷಣ ವ್ಯವಸ್ಥೆ ಅನೇಕ ಬದಲಾವಣೆಗಳಾಗಿವೆ. ನಾವು ಶಿಕ್ಷಣ ಪಡೆಯುವಾಗ ಒಮ್ಮೆ ಕಲಿತರೆ ಸಾಕು, ಅದು ಸುಮಾರು ವರ್ಷಗಳ ಕಾಲ ಪ್ರಯೋಜನಕ್ಕೆ ಬರುತ್ತಿತ್ತು. ಆದರೆ 2005ರ ನಂತರ ಬಂದ ಇಂಟರ್‍ನೆಟ್ ನಿಂದಾಗಿ ಪ್ರತಿಯೊಂದು ವಿಷಯದ ಮಾಹಿತಿಯು ಅಂಗೈನಲ್ಲಿ ದೊರೆಯುತ್ತಿದೆ. ಶಿಕ್ಷಕರಾಗಬೇಕು ಎಂದರೆ ಮೊದಲು ಅದರ ಬಗ್ಗೆ ಒಲವಿರಬೇಕು. ಏಕೆಂದರೆ ಬೇರೆ ಬೇರೆ ವೃತ್ತಿಗಳಿಗೆ ಪರ್ಯಾಯ ವ್ಯಕ್ತಿಗಳು ಇರುವಂತೆ ಶಿಕ್ಷಕರಿಗೆ ಇರುವುದಿಲ್ಲ. ಅವರ ಪಾಠವನ್ನು ಅವರೇ ಮಾಡಬೇಕು. ಆದರೆ, ಇತ್ತೀಚೆಗೆ ಶಿಕ್ಷಕರಾಗುವವರ ಸಂಖ್ಯೆ ಕಡಿಮೆ ಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆರಿಯರ್ ಹಬ್: ವಿಧಿ ಇಲ್ಲದೆ ಹಲವರು ಅತಿಥಿ ಉಪನ್ಯಾಸಕರಾಗಿ ಬರುತ್ತಿದ್ದಾರೆ. ನಾನು ಕುಲಪತಿಯಾದ ಆರಂಭದಲ್ಲಿ ಪ್ರತಿದಿನ ನಮ್ಮ ಕಚೇರಿಗೆ ಸುಮಾರು 30-40 ಜನ ಎಂ.ಎ., ಬಿ.ಎಸ್ಸಿಯಾಗಿದೆ ನಮಗೆ ವಿವಿಯಲ್ಲಿ ಕೆಲಸಕೊಡಿ ಎಂದು ಕೇಳಿಕೊಂಡು ಬರುತ್ತಿದ್ದರು. ಅವರನ್ನು ನೋಡಿ ನನಗೆ ಬೇಸರವಾಯಿತು. ಈ ಹಿನ್ನೆಲೆ ಕೆಲವು ತಜ್ಞರ ಒಳಗೊಂಡಂತೆ ಮೈಸೂರು ವಿವಿಯಲ್ಲಿ ಕೆರಿಯರ್ ಹಬ್ ಅನ್ನು ಆರಂಭಿಸಲು ಯೋಚಿಸಲಾಗಿದೆ. ಇದರ ಮೂಲಕ ಯವುದೇ ವಿಷಯ ದವರಾದರೂ ಅವರ ಜೀವನವನ್ನು ರೂಪಿಕೊಳ್ಳಬಹುದಾಗಿದೆ. ಇದರಿಂದ 1500 ದಿಂದ 2000 ಜನರಿಗೆ ಕೆಲಸ ನೀಡಲು ಕೆರಿಯರ್ ಹಬ್ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಎನ್‍ಇಪಿ ಸಹಕಾರಿಯಾಗಲಿದೆ: ಅಮೇರಿಕ ಸೇರಿದಂತೆ ಅನೇಕ ದೇಶಗಳ ಶಿಕ್ಷಣ ನೀತಿಯನ್ನು ಮೆಚ್ಚಿ ನಮ್ಮ ದೇಶ ದಿಂದ ಹಲವಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಲಕ್ಷಾಂತರ ರೂ. ಖರ್ಚು ಮಾಡಿಕೊಂಡು ಹೋಗುತ್ತಿ ದ್ದಾರೆ. ಕೇಂದ್ರ ಸರ್ಕಾರ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ)ಯೊಳಗೆ ವಿದೇಶಿ ಶಿಕ್ಷಣ ಮಾದರಿಯಂತೆ ಎಲ್ಲವನ್ನು ಅಳವಡಿಸಲಾಗಿದೆ. ಇದರಿಂದ ನಿಮ್ಮ ಕೌಶಲ್ಯತೆ ಹೆಚ್ಚುತ್ತದೆ ಮತ್ತು ಉನ್ನತ ಶಿಕ್ಷಣಕ್ಕೂ ಹೆಚ್ಚು ಸಹಕಾರಿಯಾಗಲಿದೆ ಎಂದರು.

ಜ್ಞಾನಬುತ್ತಿ ಸಂಸ್ಥೆ ಸುದೀರ್ಘವಾಗಿ ಹಲವಾರು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಾವುದೇ ಪ್ರತಿಫಲ ಬಯ ಸದೆ ತರಬೇತಿ ಶಿಬಿರಗಳನ್ನು ನಡೆಸು ತ್ತಾರೆ. ಈ ಬಾರಿ ನೀವುಗಳು ತರಬೇತಿ ಪಡೆದಿದ್ದು, ಮುಂಬರುವ ಪರೀಕ್ಷೆಯಲ್ಲಿ ಉತ್ತಮವಾಗಿ ಅಂಕಗಳನ್ನು ಗಳಿಸುವಂತೆ ಶುಭಕೋರಿದರು. ಇದೇ ವೇಳೆ ಹೆಚ್.ನರ ಸಿಂಹಯ್ಯ ರಾಜ್ಯ ಪ್ರಶಸ್ತಿ ಪಡೆದಿರುವ ವೈ.ಎನ್.ಶಂಕರೇಗೌಡ ಅವರನ್ನು ಅಭಿನಂದಿಸಿ, ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ, ಮೈಸೂರು ವಿವಿ ಹಿರಿಯ ಪ್ರಾಧ್ಯಾಪಕ ಪ್ರೊ. ಎ. ಬಾಲಸುಬ್ರಹ್ಮಣ್ಯಂ, ಜ್ಞಾನಬುತ್ತಿ ಕಾರ್ಯ ದರ್ಶಿ ಹೆಚ್. ಬಾಲಕೃಷ್ಣ, ಜೈನಹಳ್ಳಿ ಸತ್ಯ ನಾರಾಯಣ್ ಗೌಡ ಉಪಸ್ಥಿತರಿದ್ದರು.

Translate »