ವಾರಾಂತ್ಯ ಕಫ್ರ್ಯೂ: ಕಟ್ಟುನಿಟ್ಟಿನ ಜಾರಿ
ಮೈಸೂರು

ವಾರಾಂತ್ಯ ಕಫ್ರ್ಯೂ: ಕಟ್ಟುನಿಟ್ಟಿನ ಜಾರಿ

January 6, 2022

ಮೈಸೂರು, ಜ.5(ಆರ್‍ಕೆ)-ಕೊರೊನಾ ಸೋಂಕು ಹರಡದಂತೆ ತಡೆಯಲೆಂದು ಸರ್ಕಾರ ಹೊರಡಿಸಿರುವ ವಾರಾಂತ್ಯ ಹಾಗೂ ರಾತ್ರಿ ಕಫ್ರ್ಯೂ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ಅಧಿಕಾರಿಗಳಿಗೆ ಇಂದಿಲ್ಲಿ ತಾಕೀತು ಮಾಡಿದ್ದಾರೆ.

ಮೈಸೂರಿನ ನಜರ್‍ಬಾದಿನಲ್ಲಿರುವ ತಮ್ಮ ಕಚೇರಿ ಸಭಾಂಗಣದಲ್ಲಿ ಕಾನೂನು-ಸುವ್ಯವಸ್ಥೆ, ಅಪರಾಧ, ಸಂಚಾರ, ಸಿಎಆರ್ ಡಿಸಿಪಿಗಳು, ಕೆಎಸ್‍ಆರ್‍ಪಿ ಮೌಂಟೆಡ್ ಘಟಕದ ಕಮಾಂಡೆಂಟ್, ಎಲ್ಲಾ ಉಪ ವಿಭಾಗ, ಸಂಚಾರ ವಿಭಾಗದ ಎಸಿಪಿಗಳು, ಎಲ್ಲಾ ಪೊಲೀಸ್ ಠಾಣೆಗಳ ಇನ್ಸ್‍ಪೆಕ್ಟರ್‍ಗಳೊಂದಿಗೆ ಸಭೆ ನಡೆಸಿದ ಅವರು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ವಿಧಿಸಿರುವ ರಾತ್ರಿ ಕಫ್ರ್ಯೂ ಮತ್ತು ವೀಕೆಂಡ್ ಕಫ್ರ್ಯೂ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿದರು. ಈ ಕುರಿತು ಸರ್ಕಾರದ ಮುಖ್ಯ ಕಾರ್ಯ ದರ್ಶಿಗಳು ಹೊರಡಿಸಿರುವ ಆದೇಶದಲ್ಲಿ ನೀಡಿರುವ ಮಾರ್ಗಸೂಚಿಗಳನ್ನು ಯಥಾ ವತ್ತಾಗಿ ಜಾರಿಗೊಳಿಸುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆಯುಕ್ತ ನಿರ್ದೇಶನ ನೀಡಿದರು. ವಾರಾಂತ್ಯ ಕಫ್ರ್ಯೂ ವೇಳೆ ಅವಕಾಶ ನೀಡಿರುವ ಚಟುವಟಿಕೆಗಳಲ್ಲಿ ಶೇ.50ರಷ್ಟು ನಿಯಮ ಪಾಲಿಸಲಾಗುತ್ತಿದೆಯೇ, ಮದುವೆ, ಶುಭ ಸಮಾರಂಭಗಳಲ್ಲಿ ಅವಕಾಶ ಮಿತಿ ಕಾಯ್ದು ಕೊಳ್ಳಲಾಗಿದೆಯೇ ಎಂಬುದನ್ನು ರ್ಯಾಂಡಮ್ ಆಗಿ ಭೇಟಿ ನೀಡಿ ಪರಿಶೀಲಿಸಿ, ವಿಡಿಯೋ ಮಾಡಬೇಕು. ಮಿತಿ ಮೀರಿದ್ದರೆ ಪ್ರಕರಣ ದಾಖಲಿಸಬೇಕೆಂದು ಡಾ. ಚಂದ್ರಗುಪ್ತ ಅವರು ತಾಕೀತು ಮಾಡಿದರು. ಮಾಸ್ಕ್ ಧರಿಸದಿರುವವರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿ, ನಿರ್ಲಕ್ಷ್ಯತೆ ತೋರುವವರ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಪ್ರಯಾಣದ ದಾಖಲಾತಿ ಇಲ್ಲದೇ ಅನಗತ್ಯವಾಗಿ ಓಡಾಡುವವರ ವಿರುದ್ಧ ಕಾನೂನು ಕ್ರಮ ವಹಿಸಿ, ಅಂತಹವರ ವಾಹನಗಳನ್ನು ಜಪ್ತಿ ಮಾಡಿ ಎಂದ ಆಯುಕ್ತ, ರಾತ್ರಿ ಕಫ್ರ್ಯೂ ಮತ್ತು ವಾರಾಂತ್ಯ ಕಫ್ರ್ಯೂ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚನೆ ನೀಡಿದರು. ಅಧಿಕಾರಿಗಳು ನಿರಂತರ ಗಸ್ತಿನಲ್ಲಿದ್ದು, ಮಾರ್ಗಸೂಚಿಯಲ್ಲಿ ತಿಳಿಸಿರುವ ಸಮಯದ ನಂತರವೂ ತೆರೆದು ವ್ಯಾಪಾರ ಮಾಡುವ ಅಂಗಡಿ, ವಾಣಿಜ್ಯ ಕೇಂದ್ರಗಳು, ಪಬ್, ಕ್ಲಬ್, ಬಾರ್, ಹೋಟೆಲ್, ರೆಸ್ಟೋರೆಂಟ್, ಸಿನೆಮಾ ಮಂದಿರಗಳಂತಹ ಉದ್ಯಮಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು ಎಂದ ಅವರು, ಅದೇ ರೀತಿ ಪೊಲೀಸರೂ ಸಹ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಅಗತ್ಯ ಮುಂಜಾಗ್ರತೆ ವಹಿಸಬೇಕೆಂದು ಸಲಹೆ ನೀಡಿದರು. ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ, ಎಸಿಪಿಗಳಾದ ಶಶಿಧರ್, ಎಂ.ಶಿವಶಂಕರ್, ಪೂರ್ಣಚಂದ್ರ ತೇಜಸ್ವಿ, ಸಂಚಾರ ವಿಭಾಗದ ಎಸಿಪಿ ಎಸ್.ಇ.ಗಂಗಾಧರ ಸ್ವಾಮಿ ಹಾಗೂ ಕಾನೂನು-ಸುವ್ಯವಸ್ಥೆ ಮತ್ತು ಸಂಚಾರ ಠಾಣೆಗಳ ಇನ್ಸ್‍ಪೆಕ್ಟರ್‍ಗಳು ಸಭೆಯಲ್ಲಿ ಹಾಜರಿದ್ದರು.

Translate »