ವಿದ್ಯುತ್ ಅವಘಡ: ಇಬ್ಬರ ದಾರುಣ ಸಾವು
ಮೈಸೂರು

ವಿದ್ಯುತ್ ಅವಘಡ: ಇಬ್ಬರ ದಾರುಣ ಸಾವು

July 10, 2022

ಶ್ರೀರಂಗಪಟ್ಟಣ, ಜು.೯-ಕ್ರಷರ್‌ಗೆ ವಿದ್ಯುತ್ ಸಂಪರ್ಕ ಹೊಂದಿದ್ದ ಕಂಬ ಬದಲಿಸುವ ವೇಳೆ ವಿದ್ಯುತ್ ಸ್ಪರ್ಶವಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಕೆಆರ್‌ಎಸ್-ಇಲವಾಲ ರಸ್ತೆಯ ಬಸ್ತಿಪುರ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಇಲವಾಲ ಗ್ರಾಮದ ಗೋವಿಂದ ಎಂಬುವರ ಪುತ್ರ ಉಮೇಶ್ ಕುಮಾರ್(೩೫) ಮತ್ತು ಶಂಕರಾ ಚಾರಿ(೫೫) ವಿದ್ಯುತ್ ಅವಘಡದಲ್ಲಿ ಮೃತಪಟ್ಟವರು.

ಬಸ್ತೀಪುರ ಗ್ರಾಮದಲ್ಲಿರುವ ಪಿಕೆಕೆಆರ್ ಕ್ರಷರ್‌ನ ಕಾರ್ಮಿಕ ಉಮೇಶ್, ಪಕ್ಕದ ಪ್ಲಾಂಟ್‌ನ ಶಂಕರಾಚಾರಿ ಹಾಗೂ ಇತರೆ ನಾಲ್ವರೊಂದಿಗೆ ಸೇರಿ ಇಂದು ಮಧ್ಯಾಹ್ನ ವಿದ್ಯುತ್ ಕಂಬ ಬದಲಾಯಿಸುವ ಕೆಲಸದಲ್ಲಿ ನಿರತರಾಗಿದ್ದರು. ಸದರಿ ವಿದ್ಯುತ್ ಕಂಬದ ಮೇಲೆ ೧೧ ಕೆವಿ ವಿದ್ಯುತ್ ಲೈನ್ ಹಾದು ಹೋಗಿತ್ತು. ಕಂಬವನ್ನು ಕ್ರೇನ್ ಮೂಲಕ ಮೇಲಕ್ಕೆತ್ತಿ ಗುಂಡಿಗೆ ಇಳಿಸುವ ವೇಳೆ ಕಂಬದ ಮೇಲೆ ಅಳವಡಿಸಿದ್ದ ಕಬ್ಬಿಣದ ಪೈಪಿಗೆ ವಿದ್ಯುತ್ ತಂತಿ ತಗುಲಿದೆ ಎನ್ನಲಾಗಿದ್ದು, ಈ ವೇಳೆ ಗುಂಡಿಯೊಳಗೆ ಸಮರ್ಪಕ ವಾಗಿ ಇಳಿಸುವ ಸಲುವಾಗಿ ಉಮೇಶ ಮತ್ತು ಶಂಕರಾಚಾರಿ ಕಂಬವನ್ನು ಮುಟ್ಟಿದಾಗ ವಿದ್ಯುತ್ ಸ್ಪರ್ಶವಾಗಿ ಇಬ್ಬರೂ ಗುಂಡಿಯೊಳಗೆ ಬಿದ್ದು ಸಾವನ್ನಪ್ಪಿದ್ದಾರೆ.

ವಿದ್ಯುತ್ ಕಂಬ ಬದಲಾಯಿಸುವ ಕೆಲಸದ ಬಗ್ಗೆ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇರದ ಕಾರಣ ಈ ಮಾರ್ಗದಲ್ಲಿ ವಿದ್ಯುತ್ ಕಡಿತಗೊಳಿಸದೇ ಇದ್ದದ್ದೇ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗಿದೆ.

ಈ ಸಂಬAಧ ಮೃತ ಉಮೇಶ್‌ಕುಮಾರ್ ತಂದೆ ಗೋವಿಂದ ನೀಡಿದ ದೂರಿನ ಮೇರೆಗೆ ಪಿಕೆಕೆಆರ್ ಕ್ರಶರ್ ಮಾಲೀಕ ಕೃಷ್ಣರಾಜು, ಕ್ರೇನ್ ಮಾಲೀಕ, ಜೆಸಿಬಿ ಮಾಲೀಕ ಮತ್ತು ಮಂಡ್ಯ ವಿಭಾಗದ ಕೆಇಬಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕೆಆರ್‌ಎಸ್ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Translate »