ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭ
ಮೈಸೂರು

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭ

July 6, 2018
  •  ಪ್ರಾಥಮಿಕ ಶಾಲಾ ಆವರಣಕ್ಕೆ ಅಂಗನವಾಡಿ ಕೇಂದ್ರ ಸ್ಥಳಾಂತರ
  • ಹಂಪಿಯಲ್ಲಿ ಪ್ರವಾಸೋದ್ಯಮ, ಶಿವಮೊಗ್ಗದಲ್ಲಿ ತಾಯ್ನಾಡು ಭದ್ರತಾ ವಿವಿ ಸ್ಥಾಪನೆ

ಬೆಂಗಳೂರು: ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾಧ್ಯಮ ತರಗತಿಗಳ ಜೊತೆಗೆ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಮಕ್ಕಳನ್ನು ನಮ್ಮ ಶಾಲೆಗಳಿಗೆ ಆಕರ್ಷಿಸುವ ಉದ್ದೇಶದಿಂದ ಇಂತಹ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ಆರಂಭಿಕವಾಗಿ ಒಂದು ಸಾವಿರ ಶಾಲೆಗಳಲ್ಲಿ ಇಂತಹ ಪ್ರಯೋಗ ಮಾಡಲಾಗುವುದು. ಇದಕ್ಕಾಗಿ ಅಗತ್ಯ ಸಿಬ್ಬಂದಿ ಮತ್ತು ಮೂಲ ಸೌಕರ್ಯ ಕಲ್ಪಿಸುವುದಾಗಿ ತಿಳಿಸಿದ್ದಾರೆ.

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಕಟ್ಟಡಗಳ ದುರಸ್ತಿಗಾಗಿ 150 ಕೋಟಿ ರೂ. ಮೀಸಲಿಟ್ಟಿರುವ ಮುಖ್ಯಮಂತ್ರಿಯವರು ರಾಜ್ಯದ 48 ಸಾವಿರ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಮತ್ತು ಮಕ್ಕಳ ಹಾಜರಾತಿಯ ನಿಗಾ ವಹಿಸಲು ಬಯೋಮೆಟ್ರಿಕ್ ಸಾಧನ ಅಳವಡಿಸುವುದಾಗಿ ತಿಳಿಸಿದ್ದಾರೆ.

ಮುಂದಿನ ಮೂರು ವರ್ಷಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದ್ದು, ಇದಕ್ಕಾಗಿ ಐದು ಕೋಟಿ ರೂ. ತೆಗೆದಿಟ್ಟಿದ್ದಾರೆ. 4100 ಅಂಗನವಾಡಿ ಕೇಂದ್ರಗಳನ್ನು ಪ್ರಾಥಮಿಕ ಶಾಲೆಗಳ ಆವರಣಕ್ಕೆ ಸ್ಥಳಾಂತರಿಸಿ, ಬಾಲ ಸ್ನೇಹಿ ಕೇಂದ್ರಗಳನ್ನಾಗಿ ಬಲವರ್ಧಿಸಲಾಗುವುದು. ಹಂತ ಹಂತವಾಗಿ ಕಾರ್ಯಸಾಧ್ಯತೆ ಅನುಸಾರ ಬೇರೆ ಸರ್ಕಾರಿ ಶಾಲೆಗಳಲ್ಲಿ ಸಹ ಎಲ್‍ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸುವುದಾಗಿ ಹೇಳಿದ್ದಾರೆ.

ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಮತ್ತು ದಾಖಲಾತಿ ಕಡಿಮೆ ಇರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಹತ್ತಿರದ ಶಾಲೆಯೊಂದಿಗೆ ವಿಲೀನಗೊಳಿಸಲಾಗುವುದು. ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಡಿಮೆ ದಾಖಲಾತಿ ಹೊಂದಿರುವ 28847 ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಗುರುತಿಸಲಾಗಿದೆ. ಈ ಶಾಲೆಗಳನ್ನು ಹತ್ತಿರದ 8530 ಸರ್ಕಾರಿ ಶಾಲೆಗಳೊಂದಿಗೆ ವಿಲೀನಗೊಳಿಸಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಾಗಿ ಹೇಳಿದ್ದಾರೆ.

ಸರ್ಕಾರಿ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳಿಗೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಇತರೆ ದುರಸ್ತಿ ಕಾರ್ಯಗಳಿಗೆ ವಿಶೇಷ ಪ್ಯಾಕೇಜ್ ಮೂಲಕ 250 ಕೋಟಿ ರೂ. ಮೀಸಲಿರಿಸಿದ್ದಾರೆ. ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳು ವೃತ್ತಿ ಪೂರಕ ಶಿಕ್ಷಣಗಳನ್ನು ನೀಡುತ್ತಿಲ್ಲವಾಗಿ ಪದವೀಧರರನ್ನು ನೇರವಾಗಿ ಉದ್ಯೋಗಕ್ಕೆ ತೆಗೆದುಕೊಳ್ಳಲು ತೊಂದರೆಯಾಗಿದೆ.
ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಿಂದ ಹೊರತಾದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದೇನೆ.

ಕೌಶಲ್ಯವೇ ಬುನಾದಿಯಾದ ಹೊಸ ವಿಶ್ವವಿದ್ಯಾಲಯಗಳನ್ನು ತುಮಕೂರು, ಶಿವಮೊಗ್ಗ ಹಾಗೂ ಹಂಪಿಗಳಲ್ಲಿ ಸ್ಥಾಪಿಸುವುದಾಗಿ ಹೇಳಿದ್ದಾರೆ. ಕ್ರೀಡೆ ಮತ್ತು ಅಂಗಸಾಧನೆಗೆ ಸಂಬಂಧಿಸಿದ ವಿಶ್ವವಿದ್ಯಾಲಯವನ್ನು ಖಾಸಗಿ ಸಹಭಾಗಿತ್ವದಲ್ಲಿ ತುಮಕೂರಿನಲ್ಲಿ ಪ್ರಾರಂಭಿಸಲಾಗುವುದು. ಅಂಗ ಸಾಧನೆಗಳಿಗೆ ಬೇಕಾಗುವಂತಹ ಉಪಕರಣ ಮತ್ತು ಇತರೆ ವಸ್ತುಗಳನ್ನು ತಯಾರು ಮಾಡುವ ಕ್ಲಸ್ಟರ್ ಅನ್ನು ಸಹ ಸೇರಿಸಲಾಗಿದೆ. ಇದಕ್ಕಾಗಿ ಮೂರು ಕೋಟಿ ರೂ. ನಿಗದಿಪಡಿಸಲಾಗಿದೆ.

ಭದ್ರತೆಯ ಪರಿಕಲ್ಪನೆಯಲ್ಲಿ ಬದಲಾವಣೆಗಳಾಗಿದ್ದು, ಸೈಬರ್ ಕ್ರೈಮ್ ಇದರಲ್ಲಿ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ತಾಯ್ನಾಡು ಭದ್ರತಾ ವಿಶ್ವವಿದ್ಯಾಲಯವನ್ನು ಖಾಸಗಿ ಸಹಭಾಗಿತ್ವದಲ್ಲಿ ಶಿವಮೊಗ್ಗದಲ್ಲಿ ಆರಂಭಿಸುವುದಾಗಿ ಹೇಳಿದ್ದಾರೆ.
ಪ್ರವಾಸೋದ್ಯಮವನ್ನು ಲಾಭದಾಯಕವಾಗಿಸುವ ವ್ಯವಹಾರ ಜ್ಞಾನವಿರಬೇಕು. ಸರ್ಕಾರವು ಪ್ರವಾಸಿ ತಾಣಗಳಲ್ಲಿ ರಸ್ತೆ, ಶೌಚಾಲಯ ಇತ್ಯಾದಿ ಮೂಲಸೌಕರ್ಯ ಕಲ್ಪಿಸುವುದು ಮತ್ತು ಮಾನವ ಸಂಪನ್ಮೂಲ ಸೃಜಿಸಲು ಅಗತ್ಯ ತರಬೇತಿಗಾಗಿ ಪ್ರವಾಸೋದ್ಯಮ ವಿಶ್ವವಿದ್ಯಾಲಯವನ್ನು ಹಂಪಿಯಲ್ಲಿ ಆರಂಭಿಸುವುದಾಗಿ ಪ್ರಕಟಿಸಿದ್ದಾರೆ.

Translate »