ರಾಮಮಂದಿರ ಕುರಿತ ಈಶ್ವರಪ್ಪ ಹೇಳಿಕೆಗೆ ಭಾರತೀಯ  ಹೊಸ ಕಾಂಗ್ರೆಸ್ ಪಕ್ಷ ಖಂಡನೆ
ಮೈಸೂರು

ರಾಮಮಂದಿರ ಕುರಿತ ಈಶ್ವರಪ್ಪ ಹೇಳಿಕೆಗೆ ಭಾರತೀಯ ಹೊಸ ಕಾಂಗ್ರೆಸ್ ಪಕ್ಷ ಖಂಡನೆ

December 6, 2018

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅಡ್ಡಿಪಡಿಸಿದರೂ ಅಯೋಧ್ಯೆ ಯಲ್ಲಿ ರಾಮಮಂದಿರ ನಿರ್ಮಾಣ ನಿಲ್ಲದು ಎಂಬ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪನವರ ಹೇಳಿಕೆಯನ್ನು ಭಾರತೀಯ ಹೊಸ ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಯೂಬ್‍ಖಾನ್ ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಚುನಾವಣೆ ಬಂದಾಗ ಮಾತ್ರ ಬಿಜೆಪಿಯವರಿಗೆ ರಾಮಮಂದಿರದ ನೆನಪಾಗುತ್ತದೆ. ರಾಮಮಂದಿರ ನಿರ್ಮಾಣ ವಿಷಯದಲ್ಲಿ ಬಿಜೆಪಿ ಕೇವಲ ಸುಳ್ಳು ಆಶ್ವಾಸನೆಗಳನ್ನು ನೀಡಿ ದೇಶದ ಜನತೆಗೆ ದ್ರೋಹ ಬಗೆಯುತ್ತಿದೆ ಎಂದು ಆರೋಪಿಸಿದರು.
ಚುನಾವಣೆ ಬರುತ್ತಿದ್ದಂತೆ ಮಂದಿರ ವಿಷಯವನ್ನು ಚುನಾವಣಾ ವಸ್ತುವಾಗಿಸಿ ಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗುತ್ತಿರುವ ಬಿಜೆಪಿಯ ಬಗ್ಗೆ ಜನತೆ ಜಾಗೃತರಾಗಿದ್ದು, ಅವರ ಆಟ ಈ ಬಾರಿ ನಡೆಯುವುದಿಲ್ಲ ಎಂದು ಹೇಳಿದರು.

ಗೋಮಾಂಸ ರಫ್ತು: ಕೇಂದ್ರ ಬಿಜೆಪಿ ಆಡಳಿತದಲ್ಲಿಯೇ ಗೋಹತ್ಯೆ ನಿರಂತರವಾಗಿ ನಡೆದಿದ್ದು, 20 ಸಾವಿರ ಮೆಟ್ರಿಕ್ ಟನ್‍ಗಿಂತಲೂ ಹೆಚ್ಚಿನ ಗೋಮಾಂಸ ವಿದೇಶಗಳಿಗೆ ರಫ್ತಾಗಿದೆ. ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಎಷ್ಟು ಕಂಪನಿಗಳಿಗೆ ಗೋಮಾಂಸ ರಫ್ತು ಮಾಡಲಾಗಿದೆ ಎಂಬುದನ್ನು ಸಂಸದ ಪ್ರತಾಪಸಿಂಹ ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು. ಕೇರಳ ಹಾಗೂ ಹೊರ ರಾಜ್ಯಗಳಿಂದ ಮೈಸೂರು ಮತ್ತು ಕೊಡಗು ಭಾಗಕ್ಕೆ ಬರುತ್ತಿರುವ ತ್ಯಾಜ್ಯವನ್ನು ಕೂಡಲೇ ತಡೆಗಟ್ಟಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆಯೂ ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸೈಯ್ಯದ್ ಅಮಾನುಲ್ಲಾ, ಎನ್.ಆರ್.ರಘು ಉಪಸ್ಥಿತರಿದ್ದರು.

Translate »