ಮಡಿಕೇರಿ ಸಂತೆ ರದ್ದಾದರೂ ವ್ಯಾಪಾರ ಜೋರು
ಕೊಡಗು

ಮಡಿಕೇರಿ ಸಂತೆ ರದ್ದಾದರೂ ವ್ಯಾಪಾರ ಜೋರು

May 1, 2021

ಮಡಿಕೇರಿ, ಏ.30- ಕೊಡಗು ಜಿಲ್ಲೆಯಲ್ಲಿ ಕೋವಿಡ್ ವೈರಸ್ ಹರಡುವುದನ್ನು ತಡೆಯಲು ಎಲ್ಲಾ ರೀತಿಯ ಸಂತೆಗಳನ್ನು ರದ್ದು ಮಾಡಲಾಗಿದೆ. ಆದರೆ ಶುಕ್ರವಾರ ದಿನ ಮಡಿಕೇರಿಯ ನೂತನ ಮಾರುಕಟ್ಟೆಯಲ್ಲಿ ಸಂತೆ ವ್ಯಾಪಾರ ಎಂದಿನಂತೆ ನಡೆಯುತ್ತಿದ್ದ ಸಂದರ್ಭ ಪೊಲೀಸರು ಸ್ಥಳಕ್ಕಾಗಮಿಸಿ ವರ್ತಕರು ಮತ್ತು ಗ್ರಾಹಕ ರನ್ನು ಚದುರಿಸುವ ಮೂಲಕ ಮಾರುಕಟ್ಟೆಯನ್ನು ಬಂದ್ ಮಾಡಿ ಸಿದರು. ಸಾರ್ವಜನಿಕರು ಕೂಡ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಸಾಮಾಜಿಕ ಅಂತರವನ್ನು ಮರೆತು ಮುಗಿ ಬಿದ್ದು ತರಕಾರಿಗಳನ್ನು ಖರೀದಿಸುತ್ತಿದ್ದುದು ಕಂಡು ಬಂತು.
ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅನುಮತಿ ನೀಡಿದ್ದ ಅವಕಾಶವನ್ನು ಬಳಸಿಕೊಂಡ ವ್ಯಾಪಾರಸ್ಥರು ಮತ್ತು ಗ್ರಾಹಕರು ಮಾರುಕಟ್ಟೆಗೆ ಆಗಮಿಸಿ ಎಂದಿನಂತೆ ಖರೀದಿಯಲ್ಲಿ ತೊಡಗಿದ್ದರು. ಹೀಗಾಗಿ ಮಹಾನಗರಗಳಲ್ಲಿ ಕಂಡು ಬರುತ್ತಿದ್ದ ಜನ ಜಂಗುಳಿ ಮಡಿಕೇರಿ ಮಾರುಕಟ್ಟೆಯಲ್ಲೂ ಕಂಡು ಬಂತು. ಕೆಲವರು ಮಾಸ್ಕ್ ಕೂಡ ಧರಿಸದೇ ವ್ಯಾಪಾರ ವಹಿವಾಟು ಮಾಡುತ್ತಿದ್ದು, ಪೊಲೀಸರು ಲಾಠಿ ರುಚಿ ತೋರಿಸುವ ಮೂಲಕ ಎಚ್ಚರಿಕೆ ನೀಡಿದರು. ಗುಂಪು ಗುಂಪಾಗಿ ಸೇರಿದ್ದ ಜನರನ್ನು ಕೂಡ ಪೊಲೀಸರು ಎಚ್ಚರಿಕೆ ಸಂದೇಶಗಳನ್ನು ನೀಡಿ ಚದುರಿಸಿದರು. ಪೊಲೀಸರ ಭಯದಿಂದ ಕೆಲವರು ಖಾಲಿ ಕೈಯಲ್ಲಿ ಮನೆಗಳ ಹಾದಿ ಹಿಡಿದರು. ವರ್ತಕರು ವ್ಯಾಪಾರವನ್ನು ಮೊಟಕುಗೊಳಿಸಿ ವಸ್ತುಗಳನ್ನು ಗಂಟು ಮೂಟೆ ಕಟ್ಟಿದರು.

ಸಂತೆ ದಿನವಾದ ಹಿನ್ನಲೆಯಲ್ಲಿ ನಗರದಲ್ಲಿ ವಾಹನಗಳ ಓಡಾಟ ಕೂಡ ಕಂಡು ಬಂತು. ಜನರಲ್ ತಿಮ್ಮಯ್ಯ ವೃತ್ತ, ಇಂದಿರಾ ಗಾಂಧಿ ವೃತ್ತ, ಮಾರುಕಟ್ಟೆ ಆವರಣ ಮತ್ತಿತ್ತರ ಕಡೆಗಳಲ್ಲಿ ಪೊಲೀಸರು ನಾಕಾಬಂಧಿ ವಿಧಿಸುವ ಮೂಲಕ ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದರು. ವಾಹನಗಳನ್ನು ಪರಿಶೀಲಿಸಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ವಾಹನ ಚಾಲಕರು ಮತ್ತು ಸವಾರರಿಗೆ ಪೊಲೀಸರು ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಿದರು. ಕೋವಿಡ್ ನಿಯಮ ಗಳನ್ನು ಉಲ್ಲಂಘಿಸಿದರೆ, ಶಿಸ್ತು ಕಾನೂನು ಕ್ರಮ ಸಹಿತ ವಾಹನಗಳನ್ನು ಮುಟ್ಟುಗೋಲು ಹಾಕುವುದಾಗಿ ಎಚ್ಚರಿಸಿದರು. ಸಂಚಾರಿ ಪೊಲೀಸರು ಕೂಡ ಅನಗತ್ಯವಾಗಿ ತಿರುಗಾಡುತ್ತಿದ್ದ ವಾಹನಗಳಿಗೆ ದಂಡ ವಿಧಿಸಿದರು. ಎಂದಿನಂತೆ ಅಗತ್ಯ ವಸ್ತುಗಳ ಮಳಿಗೆ 10 ಗಂಟೆಯವರೆಗೆ ತೆರೆದಿತ್ತು. ಸರಕಾರಿ ಕಚೇರಿಗಳು, ಬ್ಯಾಂಕ್‍ಗಳು, ಎಟಿಎಂ ಕೇಂದ್ರಗಳು, ಪೆಟ್ರೋಲ್ ಬಂಕ್‍ಗಳು ತೆರೆದಿದ್ದವು.

Translate »