ಕೊಡಗಲ್ಲಿ ಮಳೆ ಕಡಿಮೆಯಾದರೂ ತಪ್ಪದ ಭೂ ಕುಸಿತ
ಕೊಡಗು

ಕೊಡಗಲ್ಲಿ ಮಳೆ ಕಡಿಮೆಯಾದರೂ ತಪ್ಪದ ಭೂ ಕುಸಿತ

August 12, 2022

ಮಡಿಕೇರಿ,ಆ.11- ಕೊಡಗು ಜಿಲ್ಲೆಯಲ್ಲಿ ಮಳೆಯ ತೀವ್ರತೆ ಕಳೆದ 2 ದಿನಗಳಿಂದ ಇಳಿಕೆ ಕಂಡಿದೆ. ಆದರೆ ಮತ್ತೆ ಮಳೆ ಬಿರುಸು ಪಡೆಯುವ ಎಲ್ಲಾ ಸಾಧ್ಯತೆ ಇರುವ ಹಿನ್ನೆಲೆ ಯಲ್ಲಿ ಜಿಲ್ಲೆಯಾದ್ಯಂತ ಶುಕ್ರವಾರ ಬೆಳಗಿನ 8.30ರವರೆಗೆ `ಆರೆಂಜ್ ಅಲರ್ಟ್’ ಘೋಷಣೆ ಮಾಡಲಾಗಿದೆ. ಈ ಅವಧಿಯಲ್ಲಿ 115.6 ಮಿ.ಮೀ.ನಿಂದ 204.4 ಮಿ.ಮೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದೀಗ ಮಳೆ ಕಡಿಮೆಯಾದ ಕಾರಣ ನದಿಗಳಲ್ಲಿ ಕೂಡ ನೀರಿನ ಮಟ್ಟ ಪ್ರವಾಹ ಸ್ಥಿತಿಯಿಂದ ಇಳಿಕೆ ಕಂಡಿದೆ. ಆದರೆ ತಗ್ಗು ಪ್ರದೇಶಗಳಲ್ಲಿ ಪ್ರವಾಹ ನೀರು ನಿಂತಿದ್ದು, ಬೆಳೆಗಳಿಗೆ ಹಾನಿಯಾಗುವ ಲಕ್ಷಣಗಳು ಕಂಡು ಬರುತ್ತಿದೆ. ಮಳೆ ಇಳಿಕೆ ಕಂಡಿದ್ದರೂ ಶೀತ ಹವಾಮಾನ ಮತ್ತು ಭಾರೀ ಗಾಳಿಗೆ ಹಾನಿಗಳಾದ ಬಗ್ಗೆ ವರದಿಯಾಗಿದೆ.

ಭೂ ಕುಸಿತ: ಮಳೆ ಇಳಿಕೆಯಾದರೂ ಕೂಡ ಅಲ್ಲಲ್ಲಿ ಭೂ ಕುಸಿತ ಘಟಿಸಿದ ಬಗ್ಗೆ ವರದಿಯಾಗಿದೆ. ನೆನ್ನೆ ದಿನ ಸೋಮವಾರ ಪೇಟೆ ತಾಲೂಕಿನ ಹರಪಳ್ಳಿ ಗ್ರಾಮದಲ್ಲಿ ಭಾರೀ ಭೂಕುಸಿತ ಸಂಭವಿಸಿತ್ತು. ಈ ಘಟನೆಯ ನಡುವೆಯೇ ಗುರುವಾರ ಬೆಳಗಿನ ಜಾವ ಅತಿಯಾದ ಮಳೆಗೆ ಕೊಡ್ಲಿಪೇಟೆ ವ್ಯಾಪ್ತಿಯ ಊರುಗುತ್ತಿ ಗ್ರಾಮದಲ್ಲಿ ಕಾಫಿ ತೋಟದ ಒಳಗೆ ಭೂ ಕುಸಿತ ಸಂಭವಿಸಿದೆ. ಅಲ್ಲಿನ ನಿವಾಸಿ ಸುಮಿತ್ರ ವೆಂಕಟೇಶ್ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಭೂ ಕುಸಿತ ಸಂಭವಿಸಿ ಅಂದಾಜು ಅರ್ಧ ಎಕರೆ ಕಾಫಿ ತೋಟ ಕೊಚ್ಚಿ ಹೋಗಿದೆ. ಕಾಫಿ, ಕರಿಮೆಣಸು ಸೇರಿದಂತೆ ಕೃಷಿ ಫಸಲಿಗೆ ಹಾನಿಯಾಗಿದೆ.

ರಸ್ತೆಗೆ ಹಾನಿ:ಮಂಚಳ್ಳಿ-ಕುಟ್ಟ ಸಂಪರ್ಕ ರಸ್ತೆಯ ಪೂಜೆಕಲ್ಲು ಎಂಬಲ್ಲಿ ಭೂ ಕುಸಿ ಯುವ ಹಂತಕ್ಕೆ ತಲುಪಿದ್ದು, ರಸ್ತೆಗೆ ಹಾನಿ ಯಾಗುವ ಸಾಧ್ಯತೆ ಕಂಡು ಬಂದಿದೆ. ರಸ್ತೆ ಬದಿಯ ಮಣ್ಣು ಗುಡ್ಡೆಯಲ್ಲಿ ಭಾರೀ ಬಿರುಕು ಮೂಡಿದ್ದು ಕುಸಿಯುವ ಸಾಧ್ಯತೆಗಳಿದೆ. ರಸ್ತೆಯ ಕೆಳ ಭಾಗದಲ್ಲಿ ಕಾಫಿ ತೋಟವಿದ್ದು, ಭೂ ಕುಸಿತದಿಂದ ತೋಟಕ್ಕೂ ಹಾನಿಯಾ ಗಲಿದೆ. ಸ್ಥಳದಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಿ ವಾಹನ ಸವಾರರಿಗೆ ಅಪಾಯದ ಮುನ್ಸೂ ಚನೆ ನೀಡಲಾಗಿದೆ. ಬಿರುನಾಣಿ-ಹುದಿಕೇರಿ ಸಂಪರ್ಕ ರಸ್ತೆಗೆ ಭೂ ಕುಸಿತದಿಂದ ಹಾನಿ ಯಾಗಿದೆ. ಪೆÇನ್ನಂಪೇಟೆ ತಹಶೀಲ್ದಾರ್ ಪ್ರಶಾಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆ ಮುಂದುವರೆದಲ್ಲಿ 20 ಅಡಿ ದೂರದಲ್ಲಿರುವ ಮನೆ ಹಾಗೂ ಸಮೀಪದಲ್ಲಿರುವ ರಸ್ತೆಗೆ ಹಾನಿಯಾಗುವ ಅಪಾಯ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು. ಮಾತ್ರವಲ್ಲದೇ ಪೆÇರಾಡು ಗ್ರಾಮದ ಮಲಕೆ-ಎತ್ತುಕಡವು ಸಂಪರ್ಕ ರಸ್ತೆಗೆ ಕೂಡ ಭೂ ಕುಸಿತದಿಂದ ಹಾನಿ ಯಾಗಿದೆ. ರಸ್ತೆಯ ದುರಸ್ತಿಗೆ ಜಿಲ್ಲಾಡಳಿತಕ್ಕೆ ವರದಿ ನೀಡುವುದಾಗಿ ಈ ತಹಸೀಲ್ದಾರ್ ಪ್ರಶಾಂತ್ ತಿಳಿಸಿದ್ದಾರೆ.

Translate »