ಮೈಷುಗರ್ ಮತ್ತೆ ಆರಂಭ
ಮಂಡ್ಯ

ಮೈಷುಗರ್ ಮತ್ತೆ ಆರಂಭ

August 12, 2022

ಮಂಡ್ಯ, ಆ.11- ಕಳೆದ ನಾಲ್ಕು ವರ್ಷ ಗಳಿಂದ ಸ್ಥಗಿತಗೊಂಡಿದ್ದ ದೇಶದ ಮೊದಲ ಸರ್ಕಾರಿ ಕಾರ್ಖಾನೆ ಎಂಬ ಹೆಗ್ಗಳಿಕೆ ಪಡೆ ದಿರುವ ಮೈಷುಗರ್ ಸಕ್ಕರೆ ಕಾರ್ಖಾನೆ ಗುರುವಾರದಿಂದ ಪುನರಾರಂಭಗೊಂಡಿದೆ.

ಬೆಳಗ್ಗೆಯಿಂದಲೇ ಕಾರ್ಖಾನೆಯ ಆವರಣದಲ್ಲಿ ಹೋಮ-ಹವನ, ಸತ್ಯನಾರಾಯಣ ಪೂಜೆ ಸೇರಿದಂತೆ ವಿಶೇಷ ಪೂಜೆಗಳು ಜರುಗಿದವು. 11.35ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ರೇಷ್ಮೆ ಹಾಗೂ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಶಾಸಕ ಎಂ.ಶ್ರೀನಿವಾಸ್ ಅವರು ಬಾಯ್ಲರ್‍ಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಚಾಲನೆ ನೀಡಿದರು.

ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಜಿಲ್ಲೆಯ ಎಲ್ಲ ರೈತಮುಖಂಡರು, ಜನಪ್ರತಿನಿಧಿಗಳು ಮೈಷುಗರ್ ಕಾರ್ಖಾನೆಯನ್ನು ಉಳಿಸ ಬೇಕು ಎಂಬ ಕೂಗು ಇತ್ತು. ಅದರಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯ ದಲ್ಲಿಯೇ ಆರಂಭಿಸಿದ್ದಾರೆ ಎಂದರು.

ಇಂದು ಸಾಂಕೇತಿಕವಾಗಿ ಪೂಜೆ ಮಾಡಿ ಬಾಯ್ಲರ್‍ಗೆ ಅಗ್ನಿಸ್ಪರ್ಶ ಮಾಡಲಾಗಿದೆ. ಇನ್ನು 10-12 ದಿನಗಳಲ್ಲಿ ಮುಖ್ಯ ಮಂತ್ರಿಗಳೇ ಕಬ್ಬು ಅರೆಯುವಿಕೆಗೆ ವಿಧ್ಯುಕ್ತ ವಾಗಿ ಚಾಲನೆ ನೀಡಲಿದ್ದಾರೆ. ಇದರಿಂದ ಜಿಲ್ಲೆಯ ರೈತರ ಪರವಾಗಿ ಕಾರ್ಖಾನೆ ಉಳಿಸಿ ಕೊಳ್ಳುವ ಕೆಲಸ ಮಾಡಿದ್ದಾರೆ ಎಂದರು.

ಸಚಿವ ಕೆ.ಸಿ.ನಾರಾಯಣಗೌಡ ಮಾತ ನಾಡಿ, ಹಿಂದಿನ ಎರಡು ಸರ್ಕಾರಗಳು ಕಾರ್ಖಾನೆಯನ್ನು ಆರಂಭಿಸಿರಲಿಲ್ಲ. ನಂತರ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಖಾನೆಯನ್ನು ಆರಂಭಿಸಲು ಮುನ್ನುಡಿ ಬರೆದಿದ್ದರು. ನಂತರ ಒ ಅಂಡ್ ಎಂಗೆ ವಹಿಸಲು ಕ್ರಮ ವಹಿಸಲಾಗಿತ್ತು. ಆದರೆ ಇದಕ್ಕೆ ರೈತ ಮುಖಂಡರ ಒತ್ತಾಯದ ಮೇರೆಗೆ ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆ ಸಲು ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಯಲಿದೆ. ರೈತರು, ಕಾರ್ಮಿಕರು ಕಾರ್ಖಾನೆ ಉತ್ತಮ ವಾಗಿ ನಡೆಯಬೇಕಾದರೆ ಸಂಪೂರ್ಣ ಸಹಕಾರ ನೀಡಬೇಕು ಎಂದರು.

ಈ ವೇಳೆ ಸಂಸದೆ ಸುಮಲತಾ ಅಂಬರೀಷ್, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾಧಿ ಕಾರಿ ಎಸ್.ಅಶ್ವತಿ, ಮೈಷುಗರ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಅಪ್ಪಾ ಸಾಹೇಬ್ ಪಾಟೀಲ್, ಪ್ರಧಾನ ವ್ಯವಸ್ಥಾಪಕ ಬಿ.ಸಿ.ಶಿವಾನಂದಮೂರ್ತಿ, ರೈತ ನಾಯಕಿ ಸುನಂದಾ ಜಯರಾಂ, ಸಾತನೂರು ವೇಣುಗೋಪಾಲ್, ಕೃಷ್ಣ ಶಂಭೂನಹಳ್ಳಿ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಮುಖಂಡರು ಹಾಜರಿದ್ದರು.

Translate »