ಮೈಸೂರು ಅರಮನೆ ಅಂಗಳದಲ್ಲೀಗ ಗಜಪಡೆ ದರ್ಬಾರ್
ಮೈಸೂರು

ಮೈಸೂರು ಅರಮನೆ ಅಂಗಳದಲ್ಲೀಗ ಗಜಪಡೆ ದರ್ಬಾರ್

August 11, 2022

ಮೈಸೂರು,ಆ.10(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೂರು ದಿನದ ಹಿಂದಷ್ಟೇ ಮೈಸೂರಿಗೆ ಆಗಮಿಸಿ ಅಶೋಕಪುರಂನ ಅರಣ್ಯ ಭವನದಲ್ಲಿ ಬೀಡುಬಿಟ್ಟಿದ್ದ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಬುಧವಾರ ಕನ್ಯಾ ಲಗ್ನದಲ್ಲಿ ಅರಮನೆ ಆವರಣ ಪ್ರವೇಶಿಸಿದವು.
ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಬೆಳಗ್ಗೆ 9.20ರಿಂದ 10ರೊಳಗೆ ಸಲ್ಲುವ ಕನ್ಯಾ ಲಗ್ನದ ಶುಭ ಮುಹೂರ್ತದಲ್ಲಿ ಜಿಲ್ಲಾಡಳಿತ ಹಾಗೂ ಅರಮನೆ ಮಂಡಳಿ ವತಿಯಿಂದ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುವ ಮೂಲಕ ಗಜಪಡೆಯನ್ನು ಬರಮಾಡಿ ಕೊಳ್ಳಲಾಯಿತು. ಗಜಪಡೆ ಬೆಳಗ್ಗೆ 8.20ರಷ್ಟರಲ್ಲೇ ಜಯ ಮಾರ್ತಾಂಡ ದ್ವಾರದ ಬಳಿ ಆಗಮಿಸಿದ್ದವು. ಅರಮನೆಯ ಬಿಡದಿ ಬ್ಲಾಕ್‍ನಲ್ಲಿ ಅರ್ಚಕ ಎಸ್.ವಿ.ಪ್ರಹ್ಲಾದ್‍ರಾವ್ ನೇತೃತ್ವ ದಲ್ಲಿ 8.30ರಿಂದ 8.40ರೊಳಗೆ ಗಣಪತಿ ಪೂಜೆ ನೆರವೇರಿಸಿ, ಪೂರ್ಣ ಕುಂಭ ಹಸ್ತಾಂತರ ಮಾಡಲಾಯಿತು. ಗಜಪಡೆಗೆ ಪೂಜೆ ನಂತರ ದ್ವಾರಪಾಲಕ, ಪಾದ ಪೂಜೆ ಮಾಡಲಾಯಿತು. ಈ ವೇಳೆ ಗಣ್ಯರಿಂದಲೂ ಸಂಕಲ್ಪ ಸೇವೆ ನಡೆಯಿತು. ಬಳಿಕ ಚಾಮರಸೇವೆಯೊಂದಿಗೆ ಮುತ್ತೈದೆಯರಿಂದ ಆರತಿ ಬೆಳಗಿಸಿ, ಬೂದುಗುಂಬಳ ಕಾಯಿ ಒಡೆಯಲಾಯಿತು. ಅಂತಿಮವಾಗಿ ಪುಷ್ಪಾರ್ಚನೆ ಮಾಡಿ ಜಯ ಮಾರ್ತಾಂಡ ದ್ವಾರ ದಾಟಿಸಿದ ನಂತರ ಪೊಲೀಸ್ ಇಲಾಖೆ ವತಿಯಿಂದ ಗಜಪಡೆಗೆ `ಗಾರ್ಡ್ ಆಫ್ ಹಾನರ್’ ಗೌರವ ನೀಡಲಾಯಿತು.

ಗಜಪಡೆಗೆ ಪಂಚಫಲ ಸಮರ್ಪಣೆ: ಪೂಜೆ ನೆರ ವೇರಿದ ಬಳಿಕ ಅಂಬಾರಿ ಹೊರುವ ಅಭಿಮನ್ಯು, ಅರ್ಜುನ, ಧನಂಜಯ, ಗೋಪಾಲಸ್ವಾಮಿ, ಮಹೇಂದ್ರ, ಭೀಮ, ಕಾವೇರಿ, ಚೈತ್ರ ಹಾಗೂ ಲಕ್ಷ್ಮೀ ಆನೆಗಳಿಗೆ ಅರ್ಚಕ ಎಸ್.ವಿ.ಪ್ರಹ್ಲಾದ್‍ರಾವ್, ಬೆಲ್ಲ, ಕಬ್ಬು, ಮೋದಕ, ಕಡುಬು, ಪಂಚಕಜ್ಜಾಯ, ಎಲೆ, ಅಡಿಕೆಗಳನ್ನು ಇಟ್ಟು ಪೂಜೆ ಸಲ್ಲಿಸಿದ ನಂತರ ಪಂಚಫಲ ನೀಡಿದರು. ಗಪಪಡೆ ಅರಮನೆ ಪ್ರವೇಶ ಕಾರ್ಯಕ್ರಮದಲ್ಲಿ ವಿವಿಧ ಕಲಾ ತಂಡಗಳು ಸಾಥ್ ನೀಡಿದವು. ದ್ವಾರದ ಬಳಿ ಪೂರ್ಣಕುಂಭ ಸ್ವಾಗತ, ಮಂಗಳ ವಾದ್ಯ, ನಾದಸ್ವರದೊಂದಿಗೆ ಅರಮನೆಯತ್ತ ಆನೆಗಳು ಹೆಜ್ಜೆ ಹಾಕಿದವು. ಗಜಪಡೆಗೆ ಅಶ್ವರೋಹಿ ಪಡೆ, ಪೆÇಲೀಸ್ ಬ್ಯಾಂಡ್ ಸಾಥ್ ನೀಡಿತು. ಬಳಿಕ ಸಂಪ್ರದಾಯದಂತೆ ಅರಮನೆ ಮಂಡಳಿಯಿಂದ ಪೂಜೆ ಸಲ್ಲಿಸಲಾಯಿತು. ದಸರಾ ಮಹೋತ್ಸವದ ಚಟುವಟಿಕೆಯಲ್ಲಿ ತೊಡಗುವ ಅಧಿಕಾರಿಗಳಿಗೆ ಮಂಡಳಿ ವತಿಯಿಂದ ಶಾಲು ಹೊದಿಸಿ ಗೌರವ ಸಲ್ಲಿಸಲಾಯಿತು. ಮಾವುತರು, ಕಾವಾಡಿಗಳಿಗೆ ದಿನನಿತ್ಯದ ಪದಾರ್ಥಗಳು ಸೇರಿ ಇನ್ನಿತರ ವಸ್ತುಗಳನ್ನು ಒಳಗೊಂಡ ಕಿಟ್‍ಅನ್ನು ಸಚಿವ ಸೋಮಶೇಖರ್ ವಿತರಿಸಿದರು.

ಬಳಿಕ ಅರಮನೆ ಮುಂಭಾಗದ ಪ್ರಾಂಗಣದಲ್ಲಿ ದಸರಾ ಆನೆಗಳ ಮಾವುತ, ಕಾವಾಡಿಗಳಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು. ಈ ವೇಳೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಂಪ್ರದಾಯದಂತೆ ದಸರಾ ಮಹೋತ್ಸವವನ್ನು ನಡೆಸಿಕೊಡು ವಂತೆ ಫಲತಾಂಬೂಲ ನೀಡಲಾಯಿತು. ಪೂಜೆಯ ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಎಲ್.ನಾಗೇಂದ್ರ ಸೇರಿದಂತೆ ಇತರೆ ಜನಪ್ರತಿನಿಧಿಗಳು ಪುಷ್ಪಾರ್ಚನೆ ನೆರವೇರಿಸುವುದರೊಂದಿಗೆ ಗಜಪಡೆಯನ್ನು ಬರ ಮಾಡಿಕೊಂಡರು. ಈ ಸಂದರ್ಭದಲ್ಲಿ ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ, ಹಂಗಾಮಿ ಉಪ ಮೇಯರ್ ಅನ್ವರ್‍ಬೇಗ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ರಘು ಕೌಟಿಲ್ಯ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‍ಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಕಾಡಾ ಅಧ್ಯಕ್ಷ ನಿಜಗುಣರಾಜು, ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಜಗತ್ ರಾಮ್, ಜಿ¯್ಲÁಧಿಕಾರಿ ಡಾ.ಬಗಾದಿ ಗೌತಮ್, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಎಸ್ಪಿ ಆರ್.ಚೇತನ್, ಸಿಎಫ್ ಡಾ.ಮಾಲತಿ ಪ್ರಿಯಾ, ಡಿಸಿಎಫ್‍ಗಳಾದ ಡಾ.ವಿ.ಕರಿಕಾಳನ್, ಕಮಲಾ ಕರಿಕಾಳನ್, ಮುಡಾ ಆಯುಕ್ತ ಜಿ.ಟಿ.ದಿನೇಶ್ ಕುಮಾರ್, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ ಇತರರಿದ್ದರು.

ಅರಣ್ಯ ಇಲಾಖೆಯಿಂದ ಬೀಳ್ಕೊಡುಗೆ: ಅಶೋಕಪುರಂನ ಅರಣ್ಯ ಭವನದಲ್ಲಿ ಆ.7ರ ಸಂಜೆಯಿಂದ ಬೀಡು ಬಿಟ್ಟಿದ್ದ ಗಜಪಡೆಗೆ ಸಂಪ್ರದಾಯದಂತೆ ಬುಧವಾರ ಬೆಳಗ್ಗೆ 6.25 ರಿಂದ 7.20ರವರೆಗೆ ಅರಣ್ಯ ಇಲಾಖೆ ವತಿಯಿಂದ ಪೂಜೆ ಸಲ್ಲಿಸಿ ಬೀಳ್ಕೊ ಡಲಾಯಿತು. ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಜಗತ್ ರಾಮ್, ಸಿಎಫ್ ಡಾ.ಮಾಲತಿ ಪ್ರಿಯಾ, ಡಿಸಿಎಫ್‍ಗಳಾದ ಡಾ.ವಿ.ಕರಿಕಾಳನ್, ಕೆ.ಕಮಲಾ ಕರಿಕಾಳನ್ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಪೂಜೆ ಸಲ್ಲಿಸಿದ ಬಳಿಕ ಬೀಳ್ಕೊಟ್ಟರು.

ಎರಡು ವರ್ಷಗಳ ನಂತರ ಹಳೆಯ ಮೆರುಗನ್ನು ಮರುಗಳಿಸುವಂತೆ ಆನೆಗಳ ಪಯಣ ನಡೆಯಿತು. ಕೊರೊನಾ ಹಿನ್ನೆಲೆಯಲ್ಲಿ 2020ರಲ್ಲಿ ಅರಣ್ಯ ಭವನದಿಂದ ಲಾರಿಗಳ ಮೂಲಕವೇ ಅರಮನೆ ಆವರಣಕ್ಕೆ ಆನೆಗಳನ್ನು ಕರೆತರಲಾಗಿತ್ತು. ಕಳೆದ ವರ್ಷ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ನಿರ್ಬಂಧಿಸಿ ಆನೆಗಳನ್ನು ಯಾವುದೇ ಆಡಂಬರವಿಲ್ಲದೆ ಅರಮನೆಗೆ ಕರೆತರಲಾಗಿತ್ತು. ಆದರೆ ಈ ಬಾರಿ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿರುವುದರಿಂದ ಅರಣ್ಯ ಭವನದಿಂದ ಅರಮನೆಗೆ ಗಜಪಡೆಯನ್ನು ಸಂಭ್ರಮದಿಂದಲೇ ಕರೆತರಲಾಯಿತು.

ನಂತರ ಅರಣ್ಯ ಭವನದಿಂದ ಹೊರಟ ಆನೆಗಳು ಕಾಲ್ನಡಿಗೆಯಲ್ಲಿ ಅಶೋಕಪುರಂ ರಸ್ತೆ, ಬ¯್ಲÁಳ್ ವೃತ್ತ, ಜೆಎಲ್‍ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್‍ಹೌಸ್, ಬಿಎನ್ ರಸ್ತೆ ಮೂಲಕ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಬಂದವು. ಇದೇ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಮಹೇಂದ್ರ ಆನೆ ವಾಹನಗಳ ಸದ್ದಿಗೆ ಬೆಚ್ಚದೆ ಶಾಂತ ರೀತಿಯ¯್ಲÉ ಹೆಜ್ಜೆ ಹಾಕಿ ಗಮನ ಸೆಳೆಯಿತು. ಮಾರ್ಗದುದ್ದಕ್ಕೂ ಬಿಗಿ ಪೆÇಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಆನೆಗಳ ಗಾಂಭಿರ್ಯವನ್ನು ದಾರಿಹೋಕರು, ಸಾರ್ವಜನಿಕರು ಕಣ್ತುಂಬಿಕೊಂಡರು. ನೂರಾರು ಮಂದಿ ಮೊಬೈಲ್‍ನಲ್ಲಿ ಆನೆಗಳ ಚಿತ್ರವನ್ನು ಸೆÉರೆ ಹಿಡಿದು ಸಂಭ್ರಮಿಸಿದರು.

ನಾಳೆ ತೂಕ ಪಾಲನೆ: ಸಂಪ್ರದಾಯದಂತೆ ಅರಮನೆಗೆ ಬಂದ ಮರು ದಿನವೇ ತೂಕ ಮಾಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆ.11ರಂದು 9ಕ್ಕೆ ಧನ್ವಂತ್ರಿ ರಸ್ತೆಯಲ್ಲಿರುವ ತೂಕ ಮಾಡುವ ಕೇಂದ್ರದಲ್ಲಿ ಆನೆಗಳಿಗೆ ತಪಾಸಣೆ ಮಾಡಿಸಲಾಗುತ್ತದೆ. ಇನ್ನೆರಡು ದಿನದ ನಂತರ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಆನೆಗಳಿಗೆ ತಾಲೀಮು ನಡೆಸಲಾಗುತ್ತದೆ. ಹಂತ ಹಂತವಾಗಿ ಬಾರ ಹೊರುವ, ಮರದ ಅಂಬಾರಿ ಹೊರುವ ತಾಲೀಮು ನಡೆಸಲಾಗುತ್ತದೆ.
ಅಭಿಮನ್ಯು ಪ್ರತ್ಯೇಕ ವಾಸ್ತವ್ಯ: ಅರಮನೆ ಅಂಗಳದಲ್ಲಿ ನಿರ್ಮಿಸಿರುವ ಮೂರು ಶೆಡ್‍ಗಳಲ್ಲಿ 9 ದಸರೆ ಆನೆಗಳು ವಾಸ್ತವ್ಯ ಹೂಡಿವೆ. ಈ ಪೈಕಿ ಕ್ಯಾಪ್ಟನ್ ಅಭಿಮನ್ಯು ಮತ್ತು ಚೈತ್ರ ಆನೆ ಒಂದು ಶೆಡ್‍ನಲ್ಲಿವೆ. ಮತ್ತೊಂದು ದೊಡ್ಡ ಶೆಡ್‍ನಲ್ಲಿ ಮಾಸ್ಟರ್ ಅರ್ಜುನ, ಗೋಪಾಲಸ್ವಾಮಿ, ಮಹೇಂದ್ರ, ಭೀಮ, ಹಾಗೂ ಲಕ್ಷ್ಮೀ ಆನೆಗಳು ಬೀಡುಬಿಟ್ಟಿವೆ. ಕೋಟೆ ಆಂಜನೇಯಸ್ವಾಮಿ ದೇವಾಲಯದ ಸಮೀಪದ ಶೆಡ್‍ನಲ್ಲಿ ಧನಂಜಯ ಮತ್ತು ಕಾವೇರಿ ಆನೆಯಲ್ಲಿ ಕಟ್ಟಿ ಹಾಕಲಾಗಿದೆ.

Translate »