ಪ್ರತೀದಿನ ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ
ಮೈಸೂರು

ಪ್ರತೀದಿನ ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ

April 28, 2021

ಮೈಸೂರು, ಏ. 27(ಆರ್‍ಕೆ)- ವ್ಯಾಪಕ ವಾಗಿ ಹರಡುತ್ತಿರುವ ಡೆಡ್ಲಿ ಕೊರೊನಾ ವೈರಸ್ ಎರಡನೇ ಅಲೆ ನಿಯಂತ್ರಿಸಲು ಇಂದು ರಾತ್ರಿ 9ರಿಂದ ಮೇ 12ರ ಬೆಳಗ್ಗೆ 6 ಗಂಟೆವರೆಗೆ ರಾಜ್ಯಾದ್ಯಂತ ಕೊರೊನಾ ಕಫ್ರ್ಯೂ ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಕೊರೊನಾ ಕಫ್ರ್ಯೂ ವೇಳೆ ಅಗತ್ಯ ಸೇವೆ, ಸರಕು ಹೊರತುಪಡಿಸಿ ಉಳಿದೆಲ್ಲಾ ವಾಣಿಜ್ಯ ವಹಿವಾಟು, ಸಾರಿಗೆ, ಮನರಂಜನೆ, ಸಭೆ-ಸಮಾರಂಭಗಳು ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಕಾರಣ ಜನಸಂದಣಿ, ವಾಹನ ಸಂಚಾರವಿಲ್ಲದೇ ಬಿಕೋ ಪರಿ ಸ್ಥಿತಿ ನೆಲೆಸಲಿದೆ. ಆದರೆ, ಪ್ರತೀದಿನ ಬೆಳಗ್ಗೆ 6ರಿಂದ 10 ಗಂಟೆವರೆಗೆ ದಿನಸಿ, ಹಣ್ಣು, ಹಾಲು, ತರಕಾರಿ, ದಿನಸಿ, ಮದ್ಯ, ಮೀನು, ಮಾಂಸದಂತಹ
ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ಗ್ರಾಹಕರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಪಾಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆ ವೇಳೆ ಜನರು ಗುಂಪು ಸೇರುವುದನ್ನು ತಪ್ಪಿಸಲು ಪೊಲೀಸರು ಪೆಟ್ರೋಲಿಂಗ್ ಮಾಡಿ ಗರುಡ ಮತ್ತು ಪಿಸಿಆರ್ ವಾಹನಗಳಲ್ಲಿ ಪಬ್ಲಿಕ್ ಅಡ್ರೆಸ್ಸಿಂಗ್ ಸಿಸ್ಟಂ ಮೂಲಕ ತಿಳುವಳಿಕೆ ನೀಡುವರಲ್ಲದೆ, ಅಂಗಡಿ ಮಾಲೀಕರಿಗೂ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚನೆ ನೀಡುವರು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಕೊರೊನಾ ಕಫ್ರ್ಯೂ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮೈಸೂರು ನಗರದಾದ್ಯಂತ ಎಲ್ಲಾ ಸರ್ಕಲ್, ಜಂಕ್ಷನ್, ರಸ್ತೆಗಳಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಸ್ಥಳದಲ್ಲಿ ಆಯಾ ಠಾಣಾ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಮೆಡಿಕಲ್ ಸ್ಟೋರ್, ಆಸ್ಪತ್ರೆ, ಸರ್ಕಾರಿ ಕಚೇರಿ, ವಿದ್ಯುತ್, ಕುಡಿಯುವ ನೀರು ಪೂರೈಕೆ, ಸ್ವಚ್ಛತೆ, ಒಳಚರಂಡಿ ಕಾರ್ಯ ನಿರ್ವಹಿಸುವವರಿಗೆ ಯಾವುದೇ ನಿರ್ಬಂಧವಿಲ್ಲ. ಅನಗತ್ಯವಾಗಿ ಓಡಾಡುವವರನ್ನು ತಡೆದು, ವಿಚಾರಿಸಿ ತಿಳುವಳಿಕೆ ನೀಡಿ ಕಳುಹಿಸಿ ಎಂದು ಕರ್ತವ್ಯನಿರತ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು. 55 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿಯನ್ನು ಕೊರೊನಾ ಕಫ್ರ್ಯೂ ಬಂದೋಬಸ್ತ್ ಕರ್ತವ್ಯದಿಂದ ದೂರವಿರಿಸಿ, ಉಳಿದ ಸಿಟಿ ಸಿವಿಲ್, ಸಂಚಾರ, ಮಹಿಳಾ ಪೊಲೀಸ್, ಸಿಎಆರ್, ಕೆಎಸ್‍ಆರ್‍ಪಿ ತುಕಡಿಗಳ ಸಿಬ್ಬಂದಿಯನ್ನು ನಿಯೋಜಿಸಿ ಯಶಸ್ವಿಯಾಗಿ ಕಫ್ರ್ಯೂ ಆದೇಶವನ್ನು ಜಾರಿಗೊಳಿಸಲು ಜಿಲ್ಲಾಡಳಿತದೊಂದಿಗೆ ಸಹಕಾರ ನೀಡುತ್ತಿರುವುದಾಗಿಯೂ ಡಾ. ಚಂದ್ರಗುಪ್ತ ತಿಳಿಸಿದರು.

ಇಂದು ರಾತ್ರಿಯಿಂದ ಕೊರೊನಾ ಕಫ್ರ್ಯೂ ಜಾರಿಯಾಗಲಿದೆ ಎಂದು ತಿಳಿಯುತ್ತಿದ್ದಂತೆಯೇ ಮದ್ಯ ಪ್ರಿಯರು ಇಂದು ಬೆಳಗ್ಗೆಯಿಂದಲೇ ಮದ್ಯದಂಗಡಿ, ಎಂಆರ್‍ಪಿ, ಎಂಎಸ್‍ಐಎಲ್ ಮಳಿಗೆ, ಟ್ರೂ ಸ್ಪಿರಿಟ್, ಕ್ಲಬ್, ರೆಸ್ಟೋರೆಂಟ್‍ಗಳಲ್ಲಿ ಕೇಸ್‍ಗಟ್ಟಲೇ ಲಿಕ್ಕರ್ ಖರೀದಿಸಿ ಶೇಖರಣೆ ಮಾಡಿಕೊಳ್ಳುತ್ತಿದ್ದುದು ಕಂಡುಬಂದಿತು.

ಸ್ಕೂಟರ್, ಕಾರ್‍ಗಳಲ್ಲಿ ಬಂದು ಯುವಕ, ಯುವತಿಯರು ಬ್ಯಾಗ್, ಚೀಲಗಳಲ್ಲಿ ಮದ್ಯದ ಬಾಟಲಿಗಳನ್ನು ತುಂಬಿಕೊಂಡು ಹೋಗುತ್ತಿದ್ದರು. ರಾತ್ರಿ 9 ಗಂಟೆವರೆಗೆ ತೆರೆದಿದ್ದರೂ, ನಾಳೆ (ಏ. 28)ಯಿಂದಲೂ ಪ್ರತೀದಿನ ಬೆಳಗ್ಗೆ 6ರಿಂದ 10 ಗಂಟೆವರೆಗೆ ಮದ್ಯ ಖರೀದಿಗೆ ಅವಕಾಶವಿದ್ದಾಗ್ಯೂ ಯುವ ಸಮೂಹ ಲಿಕ್ಕರ್ ಖರೀದಿಗೆ ಮುಗಿಬೀಳುತ್ತಿದ್ದುದು ಅಚ್ಚರಿ ಮೂಡಿಸಿತು. ಅದೇ ರೀತಿ ಹಣ್ಣು, ತರಕಾರಿ, ದಿನಸಿ, ಹಾಲು-ಮೊಸರು, ಮಾಂಸ ಖರೀದಿಯೂ ಇಂದು ಜೋರಾಗಿಯೇ ಇತ್ತು. ದೇವರಾಜ, ಮಂಡಿ, ವಾಣಿವಿಲಾಸ ಮಾರುಕಟ್ಟೆ, ಎಂಜಿ ರಸ್ತೆಯ ತರಕಾರಿ ಮಾರುಕಟ್ಟೆ, ಬಂಡೀಪಾಳ್ಯದ ಎಪಿಎಂಸಿ ಮಾರುಕಟ್ಟೆಯಲ್ಲೂ ದಿನಸಿ ವ್ಯಾಪಾರ ಹೆಚ್ಚಾಗಿತ್ತು.

ಹೋಟೆಲ್, ರೆಸ್ಟೋರೆಂಟ್, ಬೇಕರಿಗಳಲ್ಲಿ ಪಾರ್ಸಲ್‍ಗೆ ಅವಕಾಶವಿದ್ದುದರಿಂದ ತಿಂಡಿ-ಊಟ ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿತ್ತಾದರೂ, ಕೊರೊನಾ ಕಫ್ರ್ಯೂ ಇರುವುದರಿಂದ ಗ್ರಾಹಕರು ನಿರೀಕ್ಷಿತ ಪ್ರಮಾಣದಲ್ಲಿ ಬರುವುದಿಲ್ಲ ಎಂದು ಮೈಸೂರಿನ ಕೆಲ ಹೋಟೆಲ್‍ಗಳನ್ನು ಬುಧವಾರದಿಂದ ಆದೇಶ ತೆರವಾಗುವವರೆಗೆ ಬಂದ್ ಮಾಡಲು ಮಾಲೀಕರು ನಿರ್ಧರಿಸಿ ಸಿಬ್ಬಂದಿಗಳನ್ನು ಅವರವರ ಊರುಗಳಿಗೆ ಇಂದು ಸಂಜೆ ಕಳುಹಿಸಿದರು. ಕೊರೊನಾ ಕಫ್ರ್ಯೂ ಜಾರಿ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ 9 ಗಂಟೆಯಿಂದಲೇ ಬಸ್, ಆಟೋ, ಟ್ಯಾಕ್ಸಿ, ಓಲಾ, ಊಬರ್‍ಗಳಂತಹ ವಾಹನ ಸಂಚಾರ ಸಾರಿಗೆಯೂ ಬಂದ್ ಆಗುವುದರಿಂದ ಮೈಸೂರಿನಲ್ಲಿ ವಾಸವಾಗಿದ್ದವರು ಇಂದು ಬೆಳಗ್ಗೆಯಿಂದಲೇ ಗಂಟು-ಮೂಟೆ ಕಟ್ಟಿಕೊಂಡು ತಂತಮ್ಮ ಗ್ರಾಮಗಳಿಗೆ ಹೋಗುತ್ತಿದ್ದುದು ಸಾಮಾನ್ಯವಾಗಿತ್ತು. ಗ್ರಾಮಾಂತರ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಮೈಸೂರಿನಿಂದ ಹೊರ ಜಿಲ್ಲೆಯ ಊರುಗಳಿಗೆ ಹೋಗಲು ಪ್ರಯಾಣಿಕರು ವಾಹನಕ್ಕಾಗಿ ಕಾಯುತ್ತಿದ್ದರಲ್ಲದೇ, ಸ್ವಂತ ವಾಹನಗಳಲ್ಲಿಯೂ ನಗರವಾಸಿಗಳು ಮಕ್ಕಳು-ಮರಿಗಳೊಂದಿಗೆ ಹಿಂದಿರುಗಿದುದು ಇಂದು ಕಂಡುಬಂದಿತು. ಆರ್‍ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳುವವರು, ಕೊರೊನಾ ಲಸಿಕೆ ಪಡೆಯುವವರು, ಆಸ್ಪತ್ರೆ, ಡಯೋಗ್ನೋಸ್ಟಿಕ್ ಸೆಂಟರ್‍ಗಳಿಗೆ ಹೋಗುವ ರೋಗಿಗಳು ಹಾಗೂ ಅವರ ಅಟೆಂಡರ್ ಒಬ್ಬರು ಹೋಗಲು ಅವಕಾಶ ಮಾಡಿಕೊಡ ಲಾಗುವುದು. ಆದರೆ ಅವರು ಆ ಉದ್ದೇಶಕ್ಕೆ ಪೂರಕ ಮಾಹಿತಿ ನೀಡಬೇಕಷ್ಟೆ. ಔಷಧಿ ಅಂಗಡಿ, ಆಸ್ಪತ್ರೆ, ಪೆಟ್ರೋಲ್ ಬಂಕ್, ರಕ್ತನಿಧಿ ಕೇಂದ್ರ, ಬ್ಯಾಂಕ್, ವಿಮಾ ಕಚೇರಿ, ಸರ್ಕಾರಿ ಕಚೇರಿ ಸರಕು ಸಾಗಣೆ ವಾಹನ, ಆಹಾರ ಪದಾರ್ಥಗಳ ಹೋಂ ಡೆಲಿವರಿ, ಹೋಟೆಲ್‍ನಲ್ಲಿ ಪಾರ್ಸಲ್ ಸೇವೆ ಹೊರತುಪಡಿಸಿ ಉಳಿದಂತೆ ಎಲ್ಲಾ ಬಗೆಯ ಅಂಗಡಿ, ವಾಣಿಜ್ಯ ವಹಿವಾಟು, ಸಾರಿಗೆ, ಪ್ರಯಾಣ, ಸಿನೆಮಾ ಮಂದಿರ, ಮಾಲ್, ಸ್ವಿಮ್ಮಿಂಗ್ ಪೂಲ್ ಸೇರಿದಂತೆ ಎಲ್ಲಾ ಬಗೆಯ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಳ್ಳಲಿದ್ದು, ಜನರು ಮನೆಯಿಂದ ಹೊರಬಾರದಂತೆ ನಿರ್ಬಂಧಿಸಲಾಗಿದೆ.

Translate »