ಮೈಸೂರಲ್ಲಿ ಸದ್ಯಕ್ಕೆ ಐಸಿಯು, ಆಕ್ಸಿಜನ್ ಹಾಸಿಗೆ ಕೊರತೆ ಇಲ್ಲ
ಮೈಸೂರು

ಮೈಸೂರಲ್ಲಿ ಸದ್ಯಕ್ಕೆ ಐಸಿಯು, ಆಕ್ಸಿಜನ್ ಹಾಸಿಗೆ ಕೊರತೆ ಇಲ್ಲ

April 28, 2021

ಮೈಸೂರು, ಏ.27(ಆರ್‍ಕೆಬಿ)- ಮೈಸೂರು ನಗರದಲ್ಲಿ ಹೆಚ್ಚು ಸಂಖ್ಯೆಯ ಐಸಿಯು ಮತ್ತು ಆಕ್ಸಿಜನ್ ಸೌಲಭ್ಯವುಳ್ಳ ಹಾಸಿಗೆ ಗಳ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದ್ದು, ಸದ್ಯಕ್ಕೆ ಐಸಿಯು ಹಾಗೂ ಆಕ್ಸಿಜನ್‍ಯುಕ್ತ ಹಾಸಿಗೆ ಗಳ ಕೊರತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಇಂದಿಲ್ಲಿ ತಿಳಿಸಿದರು.

ಮೈಸೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರಿಗೆ ಹೆಚ್ಚಿನ ಸಂಖ್ಯೆಯ ಐಸಿಯು ಹಾಸಿಗೆಗಳನ್ನು ಕಲ್ಪಿಸಲಾಗುವುದು. ಈ ಸಂಬಂಧ ಮಂಗಳವಾರ ಮೈಸೂರಿನ ಜೆಎಸ್‍ಎಸ್ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಅವರು 100 ಹಾಸಿಗೆಗಳನ್ನು ಕಾಯ್ದಿರಿಸ ಲಿದ್ದಾರೆ. ತಕ್ಷಣಕ್ಕೆ 28 ಹಾಸಿಗೆಗಳನ್ನು ಉಳಿಸಿ ಕೊಳ್ಳುವ ಬಗ್ಗೆ ತಿಳಿಸಿದ್ದಾರೆ ಎಂದರು.

ಜೆಎಸ್‍ಎಸ್ ಆಸ್ಪತ್ರೆಯು ಈಗಾಗಲೇ 411 ಹಾಸಿಗೆಗಳನ್ನು ಸರ್ಕಾರಕ್ಕೆ ಕೊಟ್ಟಿದೆ. ಇನ್ನೂ 100 ಆಕ್ಸಿಜನ್ ಸೌಲಭ್ಯವುಳ್ಳ ಹಾಸಿಗೆ ಗಳನ್ನು ನೀಡುವ ನಮ್ಮ ಬೇಡಿಕೆಗೆ ಪೂರಕ ವಾಗಿ ಸ್ಪಂದಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳು ಶೇ.20ರಿಂದ 50 ರಷ್ಟು ಹಾಸಿಗೆಗಳನ್ನು ಈಗಾಗಲೇ ನೀಡಿವೆ. ಎಲ್ಲರೂ ಸಹಕರಿಸುತ್ತಿದ್ದು, ಅಧಿಕ ದರ ವಸೂಲಿ ಮಾಡಲು ಅವಕಾಶ ನೀಡುವು ದಿಲ್ಲ. ಹಾಗೇನಾದರೂ ದೂರು ಬಂದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಕೆ.ಆರ್.ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಹೆಚ್ಚಿಸಲಾಗುತ್ತಿದೆ. ಕೊರೊನಾ ಸೋಂಕು ಬಂದವರೆಲ್ಲರಿಗೂ ಆಕ್ಸಿಜನ್ ಬೆಡ್ ಬೇಕಾಗಿಲ್ಲ. ಆದರೆ ಅನೇಕ ರೋಗಿ ಗಳು ಮತ್ತು ಅವರ ಸಂಬಂಧಿಕರು ಅಗತ್ಯವಿದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಆಮ್ಲಜನಕ ಸೌಲಭ್ಯವಿರುವ ಹಾಸಿಗೆಯೇ ಬೇಕೆಂಬ ಒತ್ತಡ ಹೇರುತ್ತಿ ದ್ದಾರೆ. ಕೋವಿಡ್ ಪರೀಕ್ಷೆಗೆ ಹೋಗುವ ಮೊದಲೇ ಆಮ್ಲಜನಕ ಸೌಲಭ್ಯವಿರುವ ಹಾಸಿಗೆ ಬೇಕೆಂಬ ಬೇಡಿಕೆ ಒಡ್ಡುತ್ತಿದ್ದಾರೆ. ಆಮ್ಲಜನಕ ಬೆಡ್ ಯಾರಿಗೆ ಅಗತ್ಯವಿದೆ ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ಒಟ್ಟಾರೆ ಆಸ್ಪತ್ರೆಗಳಲ್ಲಿ ಹೆಚ್ಚಿನ ಐಸಿಯು ಹಾಗೂ ಆಮ್ಲಜನಕ ಹಾಸಿಗೆಗಳಿಗೆ ಸಿದ್ದತೆ ಕೈಗೊಳ್ಳಲಾಗಿದೆ
ಎಂದು ತಿಳಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಸರ್ಕಾರವು ಖಾಸಗಿ ಆಸ್ಪತ್ರೆಗಳಿಗೆ ನಿಯೋಜಿಸಿರುವ ರೋಗಿಗಳಿಗೆ ಬೇಕಾಗುವಷ್ಟು ರೆಮ್ಡಿಸಿವಿರ್ ಔಷಧ ಲಭ್ಯವಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನಲ್ಲಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳಿಗೂ ಬೇಡಿಕೆಗೆ ಅನುಗುಣವಾಗಿ ರೆಮ್ಡಿಸಿವಿರ್ ಸರಬರಾಜು ಆಗಿದೆ. ಇವುಗಳನ್ನು ಹೊರತಾದ ಖಾಸಗಿ ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ್ ಪೂರೈಕೆಯಲ್ಲಿ ತೊಂದರೆಯಾಗಿದೆ. 2 ಸಾವಿರ ರೆಮ್ಡಿಸಿವಿರ್ ಔಷಧ ಬೇಕಾಗಿದೆ. ಸೋಮವಾರ 378 ರೆಮ್ಡಿಸಿವಿರ್ ಬಂದಿದೆ. ಇನ್ನೂ ಬೇಕಾಗಿರುವ ಔಷಧವನ್ನು 2-3 ದಿನಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಔಷಧ ಪೂರೈಕೆಯಾಗಲಿದೆ ಎಂದು ಹೇಳಿದರು. ರೆಮ್ಡಿಸಿವಿರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟ ಮಾಡಲೆತ್ನಿಸುವವರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಲಿದ್ದಾರೆ. ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಮಾರಾಟವಾಗುತ್ತಿರುವ ಬಗ್ಗೆ ಜನರು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು. 18 ವರ್ಷ ಮೀರಿದವರಿಗೆ ಉಚಿತವಾಗಿ ಲಸಿಕೆ ನೀಡಲು ಸರ್ಕಾರ 2600 ಕೋಟಿ ರೂ. ಅನುದಾನ ಒದಗಿಸಿದೆ. ಎಲ್ಲರೂ ಲಸಿಕೆ ಪಡೆಯುವ ಮೂಲಕ ಕೊರೊನಾ ಸೋಂಕಿನ ಸರಪಳಿಯನ್ನು ತುಂಡರಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕೋವಿಡ್ ನಿಯಂತ್ರಿಸಲು 14 ದಿನಗಳ ಲಾಕ್‍ಡೌನ್ ಘೋಷಿಸಿದ್ದು, ಈ ಅವಧಿಯಲ್ಲಿ ಕೃಷಿ ಚಟುವಟಿಕೆ, ಅಗತ್ಯ ಕೈಗಾರಿಕಾ, ಸೇವಾ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ. ಬೆಳಿಗ್ಗೆ 6ರಿಂದ 10ರವರೆಗೆ ಅಗತ್ಯ ಆಹಾರ ಮತ್ತು ಅತ್ಯಾವಶ್ಯಕ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಸಚಿವ ಎಸ್.ಟಿ.ಸೋಮಶೇಖರ್, ಜೆಎಸ್‍ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ದಯಾನಂದ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಎಂ.ಗುರುಸ್ವಾಮಿ ಅವರೊಂದಿಗೆ ಚರ್ಚಿಸಿ, ಕನಿಷ್ಟ ಐಸಿಯು ಒಳಗೊಂಡ 100 ಹಾಸಿಗೆಗಳನ್ನು ನೀಡುವಂತೆ ಮಾಡಿದ ಮನವಿಗೆ ಜೆಎಸ್‍ಎಸ್ ಆಸ್ಪತ್ರೆ ಅಧಿಕಾರಿಗಳು ಭರವಸೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಪಂ ಸಿಇಓ ಎ.ಎಂ.ಯೋಗೀಶ್ ಇನ್ನಿತರರು ಉಪಸ್ಥಿತರಿದ್ದರು.

Translate »