ಜನರನ್ನು ಕೊರೊನಾದಿಂದ ರಕ್ಷಿಸಲು ಕೃಷ್ಣರಾಜ ಕ್ಷೇತ್ರದಲ್ಲಿ ಎಲ್ಲರೂ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ
ಮೈಸೂರು

ಜನರನ್ನು ಕೊರೊನಾದಿಂದ ರಕ್ಷಿಸಲು ಕೃಷ್ಣರಾಜ ಕ್ಷೇತ್ರದಲ್ಲಿ ಎಲ್ಲರೂ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ

June 2, 2021

ಎಸ್.ಎ.ರಾಮದಾಸ್: ಕೊರೊನಾ ಮೊದಲ ಹಾಗೂ ಎರಡನೇ ಅಲೆ ಸಂದರ್ಭದಲ್ಲೂ ನಮ್ಮ ಪಕ್ಷದ ಕಾರ್ಯ ಕರ್ತರು ರಸ್ತೆಗಿಳಿದು ನಿರ್ಭೀತಿಯಿಂದ ಸೇವೆ ಮಾಡುತ್ತಿ ದ್ದಾರೆ. ಬ್ಲಾಕ್ ಅಧ್ಯಕ್ಷನಿಂದ ಹಿಡಿದು ಎಲ್ಲಾ ಹಂತದ ಪದಾಧಿ ಕಾರಿಗಳು ಜವಾಬ್ದಾರಿ ವಹಿಸಿಕೊಂಡು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ನಿರಂತರವಾಗಿ 40 ಮಂದಿ ಆಶಾಕಾರ್ಯಕರ್ತೆಯರು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 20 ಶುಶ್ರೂಷಕಿಯರು ಮನೆ ಮನೆಗೆ ಭೇಟಿ ನೀಡಿ, ಜನರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಯಾರಿಗಾದರೂ ಪಾಸಿಟಿವ್ ಬಂದರೆ ತಕ್ಷಣ ಸ್ಪಂದಿಸಿ, ಅವರ ಪ್ರಾಥಮಿಕ ಸಂಪರ್ಕಿತರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಮಿತ್ರ: ಸೋಂಕಿತರಿಗೆ ತಕ್ಷಣಕ್ಕೆ ನೆರವಾಗಲು ಏನಾ ದರೂ ವಿಶೇಷ ವ್ಯವಸ್ಥೆ ಮಾಡಿಕೊಳ್ಳಲಾಗಿದೆಯೇ?.
ರಾಮದಾಸ್: ಹಗಲಲ್ಲಿ ಆಂಬುಲೆನ್ಸ್ ಸುಲಭವಾಗಿ ಲಭ್ಯವಾಗಬಹುದು. ಆದರೆ ರಾತ್ರಿ ವೇಳೆ ಸೂಕ್ತ ಸಮಯಕ್ಕೆ ಸಿಗುವುದು ಕಷ್ಟ. ಒಂದು ದಿನ ಮೂವರು ಸೋಂಕಿತರಿಗೆ ರಾತ್ರಿ ವೇಳೆ ತುಂಬಾ ತೊಂದರೆಯಾಗಿತ್ತು. ವಾರ್ ರೂಂ ಮೂಲಕ ಆಸ್ಪತ್ರೆಯಲ್ಲಿ ಬೆಡ್ ನಿಗದಿ ಮಾಡಿಸಿದ್ದರೂ ಅಲ್ಲಿಗೆ ಹೋಗಿ ಕೇಳಿದರೆ ಹಾಸಿಗೆ ಇಲ್ಲ ಎಂದು ಕಳುಹಿ ಸಿದ್ದರು. ಆಂಬುಲೆನ್ಸ್‍ನಲ್ಲಿ ಅಲೆದಾಡಿದರೂ ಆ ಸೋಂಕಿ ತರು ಬದುಕಲೇ ಇಲ್ಲ. ಮತ್ತೊಮ್ಮೆ ಓರ್ವ ಸೋಂಕಿತರಿಗೆ ಮೈಸೂರಿನಲ್ಲಿ ಬೆಡ್ ವ್ಯವಸ್ಥೆಯಾಗದೆ ನಂಜನಗೂಡಿಗೆ ಕಳುಹಿಸಿದ ಸಂಗತಿಯೂ ನಡೆದಿದೆ. ಹಾಗಾಗಿ 24 ಗಂಟೆಗಳ ಕಾಲವೂ ಜನರ ಸಹಾಯಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ವೇಳೆ ಕಾರ್ಯ ನಿರ್ವಹಿಸಲೆಂದೇ 2 ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ನಮ್ಮ ಕಚೇರಿಯಲ್ಲಿ ಇಬ್ಬರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಸಾರ್ವಜನಿಕರ ಕರೆ ಸ್ವೀಕರಿಸಿ, ಕೊರೊನಾ ಸೋಂಕಿತರ ವಿಳಾಸ, ಅವರ ಆರೋಗ್ಯ ಸ್ಥಿತಿಗತಿಯ ಬಗ್ಗೆ ತಿಳಿದುಕೊಂಡು ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಾರೆ. ಅವರಿಂದ ಸಾಧ್ಯವಾಗದಿದ್ದರೆ ಯಾವ ಸಮಯದಲ್ಲಾದರೂ ನನ್ನನ್ನು ಸಂಪರ್ಕಿಸಿ, ವಿಷಯ ತಿಳಿಸುತ್ತಾರೆ. ನಂತರ ನಾನು ಬಗೆಹರಿಸುತ್ತೇನೆ. ಕೊರೊನಾ ಸೋಂಕಿತರ ಮನೆಗಳಿಗೆ ತೆರಳಿ ಅವರಿಗೆ ಅಗತ್ಯವಾದ ವೈದ್ಯಕೀಯ ಕಿಟ್ ನೀಡುವ ಕಾರ್ಯ ನಿರಂತರವಾಗಿ ಮುಂದುವರೆದಿದೆ.

ಮಿತ್ರ: ತಮ್ಮ ಕ್ಷೇತ್ರದ ವಾರ್ಡ್ ಟಾಸ್ಕ್‍ಫೋರ್ಸ್‍ಗಳ ಕಾರ್ಯವೈಖರಿ ಹೇಗಿದೆ?
ರಾಮದಾಸ್: ನಮ್ಮ ಕ್ಷೇತ್ರದ ಎಲ್ಲಾ ವಾರ್ಡ್‍ಗಳಲ್ಲೂ ಕಾರ್ಪೊರೇಟರ್, ಪೊಲೀಸ್, ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡ ವಾರ್ಡ್ ಕಾರ್ಯಪಡೆ ತುಂಬಾ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ. ಕಾರ್ಪೊ ರೇಟರ್‍ಗಳು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹೀಗೆ ಯಾವ ಪಕ್ಷದವರಾದರೂ ಹೊಂದಾಣಿಕೆಯಿಂದ ಕೆಲಸ ಮಾಡು ತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅತ್ಯಂತ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪರಿ ಣಾಮ ಕೋವಿಡ್ ನಿರ್ವಹಣೆ ಉತ್ತಮ ರೀತಿಯಲ್ಲಿ ಮುಂದುವರೆಯಲು ಸಾಧ್ಯವಾಗಿದೆ.

ಮಿತ್ರ: ಪ್ರಸ್ತುತ ಕೊರೊನಾ ಹೊರತಾಗಿ ಇತರೆ ಆರೋಗ್ಯ ಸಮಸ್ಯೆಯುಳ್ಳವರ ಬಗ್ಗೆ ನಿಗಾ ವಹಿಸಲಾಗಿದೆಯೇ?
ರಾಮದಾಸ್: ನಮ್ಮ ಕ್ಷೇತ್ರದಲ್ಲಿ ವಯೋವೃದ್ಧರು, ಆರೈಕೆಗೆ ಜೊತೆಯಲ್ಲಿ ಯಾರೂ ಇಲ್ಲದವರು, ಕೋವಿಡ್ ಅಲ್ಲದ ಇತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನಮ್ಮ ತಂಡ ನೆರವಿಗೆ ನಿಂತಿದೆ. ಇಂತಹ ಯಾರಿಗಾದರೂ ಔಷಧಿ ಬೇಕಿದ್ದರೆ ಅದನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಕಣ್ಣಿನ ಸಮಸ್ಯೆಯಿರುವ 215ಕ್ಕೂ ಹೆಚ್ಚು ಜನರಿಗೆ ಅವರ ಮನೆಗೇ ಕನ್ನಡಕ ತಲುಪಿಸುವುದರ ಜೊತೆಗೆ ಅಗತ್ಯವಿದ್ದವರ ಉಚಿತ ಶಸ್ತ್ರಚಿಕಿತ್ಸೆಗೆ ಪತ್ರ ನೀಡಲಾಗಿದ್ದು, ಅವರಿಗೆ ಸಾಧ್ಯವಾದ ಸಮಯದಲ್ಲಿ ನಿಗದಿತ ಆಸ್ಪತ್ರೆ ಸಂಪರ್ಕಿಸಿ, ಸೌಲಭ್ಯ ಪಡೆಯಬಹುದು. ಬಹು ವರ್ಷಗಳಿಂದ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರು ವವರಿಗೆ ಚಿಕಿತ್ಸೆ ಅಗತ್ಯವಾದರೆ ಬೇರೆ ಆಸ್ಪತ್ರೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ನಿರಂತರವಾಗಿ ಡಯಾಲಿಸಿಸ್ ಮಾಡಿಸಿ ಕೊಳ್ಳಬೇಕಾದವರಿಗೆ ಲಾಕ್‍ಡೌನ್‍ನಿಂದಾಗಿ ಸಮಸ್ಯೆ ಯಾಗಿದೆ. ಹಾಗಾಗಿ ಅಂತಹವರನ್ನು ನಮ್ಮ ಆಂಬುಲೆನ್ಸ್ ಮೂಲಕವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾಪಸ್ ಮನೆಗೆ ಕರೆತಂದು ಬಿಡಲಾಗುತ್ತಿದೆ.

ಮಿತ್ರ: ತಮ್ಮ ಕ್ಷೇತ್ರದಲ್ಲಿ ಹೋಂ ಐಸೋಲೇಷನ್‍ನಲ್ಲಿರುವ ಸೋಂಕಿತರ ಬಗ್ಗೆ ನಿಗಾ ವಹಿಸಲು ಏನಾದರೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆಯೇ?
ರಾಮದಾಸ್: ನಮ್ಮ ಕಚೇರಿಯಲ್ಲಿ 8 ಮಹಿಳಾ ಕಾರ್ಯ ಕರ್ತೆಯರು ಪ್ರತಿ ದಿನ ಸೋಂಕಿತರು ಅಥವಾ ಅವರ ಕುಟುಂಬ ಸದಸ್ಯರಿಗೆ ಕರೆ ಮಾಡಿ ಆರೋಗ್ಯ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳುತ್ತಾರೆ. ಅಲ್ಲದೆ ಕೊರೊನಾ ಬಗ್ಗೆ ಅನಗತ್ಯವಾಗಿ ಆತಂಕಪಡದೆ ಸೂಕ್ತ ರೀತಿಯಲ್ಲಿ ಔಷಧಿ ತೆಗೆದುಕೊಳ್ಳುವಂತೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಏನಾದರೂ ಸೋಂಕಿತರ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲು ಕ್ರಮ ವಹಿಸಲಾಗುತ್ತಿದೆ.

ಮಿತ್ರ: ಕೊರೊನಾದಿಂದ ಬಡವರು, ಕೂಲಿ ಕಾರ್ಮಿಕರು ಕಂಗಾಲಾಗಿದ್ದಾರೆ. ಇವರ ಬಗ್ಗೆ ನಿಮ್ಮ ಕಳಕಳಿ ಏನು?
ರಾಮದಾಸ್: ಅಗತ್ಯವಿದ್ದವರಿಗೆ ಔಷಧಿ, ದಿನಸಿ ಕಿಟ್ ಕಲ್ಪಿಸುವುದರ ಹೊರತಾಗಿ ಒಂದಷ್ಟು ಕೆಲಸಗಳಾಗಿವೆ. ಅನೇಕರಿಗೆ ಪಿಂಚಣಿ ಸ್ಥಗಿತವಾಗಿತ್ತು. ಹಲವರು ಅರ್ಜಿ ಹಾಕಿದ್ದರೂ ಕೋವಿಡ್ ಹಿನ್ನೆಲೆಯಲ್ಲಿ ಮುಂದಿನ ಕ್ರಮ ಆಗಿರಲಿಲ್ಲ. ಇಂತಹ ಸಮಸ್ಯೆಗಳನ್ನು ಗುರುತಿಸಿ, ಶೀಘ್ರ ಪರಿಹರಿಸ ಲಾಯಿತು. ಈ ನಿಟ್ಟಿನಲ್ಲಿ ಸಹಕರಿಸಿದ ತಹಶೀಲ್ದಾರ್ ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಹೀಗೆ ವಿಧವಾ ವೇತನ, ವೃದ್ಧಾಪ್ಯ ವೇತನ, ವಿಕಲಾಂಗಚೇತನರ ಸಹಾಯಧನ, ಅವಿವಾಹಿತ ಹೆಣ್ಣು ಮಕ್ಕಳಿಗಿರುವ ಮನಸ್ವಿನಿ ಯೋಜನೆ ಹೀಗೆ ಸಾಮಾಜಿಕ ಭದ್ರತಾ ಯೋಜನೆಗಳಡಿ ಸುಮಾರು 800ಕ್ಕೂ ಹೆಚ್ಚು ಫಲಾನುಭವಿಗಳ ಮನೆಗೇ ಸೌಲಭ್ಯ ಕಲ್ಪಿಸಲಾಗಿದೆ. ಕೆಲವರಿಗೆ ಕಾರ್ಮಿಕ ಕಲ್ಯಾಣ ಇಲಾಖೆ ವತಿಯಿಂದ ಸೌಲಭ್ಯ ಪಡೆಯಲು ಸಹಾಯ ಮಾಡಲಾಗಿದೆ.

ಮಿತ್ರ: ಮೈಸೂರಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿ ಕಾರಿಗಳ ನಡುವೆ ಸಮನ್ವಯತೆ ಕೊರತೆ ಇದೆ ಎಂಬ ಸಾರ್ವ ಜನಿಕ ವಲಯದ ಬೇಸರದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?.
ರಾಮದಾಸ್: ಈ ವಿಚಾರವಾಗಿ ಪ್ರತಿಕ್ರಿಯಿಸುವುದ ಕ್ಕಿಂತ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವುದೇ ರೀತಿಯ ಗೊಂದಲಕ್ಕೆ ಎಡೆಮಾಡಿಕೊಡದಂತೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದಷ್ಟೇ ಆಶಿಸುತ್ತೇನೆ. ಬೆಡ್ ಹಂಚಿಕೆ, ಔಷಧಿ, ಆಕ್ಸಿಜನ್ ಇನ್ನಿತರ ವೈದ್ಯಕೀಯ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ 3, ಜಿಲ್ಲಾ ಉಸ್ತುವಾರಿ ಸಚಿವರಿಗೆ 2 ಹಾಗೂ ಜಿಲ್ಲಾಧಿ ಕಾರಿಗಳಿಗೆ 3 ಪತ್ರ ಬರೆದು, ಸಮಸ್ಯೆ ಪರಿಹಾರಕ್ಕೆ ಆಗ್ರಹಿ ಸಿದ್ದೇನೆ. ನಾನು ಗಮನಕ್ಕೆ ತಂದ ಸಮಸ್ಯೆಗಳು ಇತ್ಯರ್ಥ ವಾಗಿವೆ. ಸೂಕ್ತ ಸೌಲಭ್ಯಗಳಿಲ್ಲದ ಸ್ಟೆಪ್‍ಡೌನ್ ಆಸ್ಪತ್ರೆಗಳ ದುಸ್ಥಿತಿಯನ್ನು ನಾನು ಪ್ರತ್ಯಕ್ಷವಾಗಿ ಕಂಡ ನಂತರವೇ ಬಹಿರಂಗಗೊಳಿಸಿದೆ. ಆ ಪ್ರಯತ್ನವೂ ಸಫಲವಾಗಿದೆ. ಈಗ ನಿತ್ಯ ಸಂಜೆ ವೇಳೆಗೆ ಬೆಡ್, ಆಂಬುಲೆನ್ಸ್ ಇನ್ನಿತರ ಸೌಲಭ್ಯಗಳ ಸ್ಥಿತಿಗತಿಯನ್ನು ಎಲ್ಲರಿಗೂ ತಿಳಿಸುವ ವ್ಯವಸ್ಥೆಯಾಗಿದೆ. ಜನರನ್ನು ಕೊರೊನಾದಿಂದ ರಕ್ಷಿಸುವ ನಿಟ್ಟಿನಲ್ಲಿ ನಮ್ಮ ಕ್ಷೇತ್ರದಲ್ಲಿ ಪಕ್ಷ, ವ್ಯವಸ್ಥೆಯನ್ನೂ ಮೀರಿ ಎಲ್ಲರೂ ಸಮನ್ವಯತೆಯಿಂದ ಕಾರ್ಯ ನಿರ್ವಹಿ ಸುತ್ತಿದ್ದೇವೆ ಎಂಬ ಆತ್ಮತೃಪ್ತಿ ನನಗಿದೆ.

Translate »