ಮೈಸೂರಲ್ಲಿ ಕಾವಲು ಪಡೆಯಿಂದ ವಿನೂತನ ಪ್ರತಿಭಟನೆ
ಮೈಸೂರು

ಮೈಸೂರಲ್ಲಿ ಕಾವಲು ಪಡೆಯಿಂದ ವಿನೂತನ ಪ್ರತಿಭಟನೆ

June 21, 2021

ಮೈಸೂರು,ಜೂ.20(ಪಿಎಂ)- ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಕಾವಲು ಪಡೆ ವತಿಯಿಂದ ತೆಂಗಿನಕಾಯಿ ಒಡೆದು ಭಾನುವಾರ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಕೋರ್ಟ್ ಎದುರಿನ ಗಾಂಧಿ ಪುತ್ತಳಿ ಬಳಿ ಪಡೆಯ ರಾಜ್ಯಾಧ್ಯಕ್ಷ ಎಂ. ಮೋಹನ್‍ಕುಮಾರ್‍ಗೌಡ ನೇತೃತ್ವದಲ್ಲಿ ತೆಂಗಿನಕಾಯಿಗಳನ್ನು ಹೊಡೆದು ತೈಲ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಇದೇ ವೇಳೆ ಮಾತನಾಡಿದ ಮೋಹನ್ ಕುಮಾರ್‍ಗೌಡ, ಕಳೆದ 9 ವರ್ಷಗಳ ಹಿಂದೆ ಯುಪಿಎ ಸರ್ಕಾರ ಇದ್ದ ಸಂದರ್ಭ ದಲ್ಲೇ ನಮ್ಮ ಸಂಘಟನೆ ತೈಲ ಬೆಲೆ ಏರಿಕೆ ಯನ್ನು ತೀವ್ರವಾಗಿ ಖಂಡಿಸಿತ್ತು. ಅಲ್ಲದೆ, ಹೀಗೆ ದಿನೇ ದಿನೆ ಪೈಸೆ ಲೆಕ್ಕದಲ್ಲಿ ಬೆಲೆ ಏರಿಕೆ ಮಾಡುವ ಬದಲು ಒಮ್ಮೆಲೇ ಲೀಟರ್‍ಗೆ 500 ರೂ. ಏರಿಕೆ ಮಾಡುವಂತೆ ಒತ್ತಾಯಿಸಿ, ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದೆವು ಎಂದು ತಿಳಿಸಿದರು.

ಜೊತೆಗೆ ಪೆಟ್ರೋಲ್ ಬೆಲೆ ಲೀಟರ್‍ಗೆ 100 ರೂ. ಆದಲ್ಲಿ ಸಾರ್ವಜನಿಕ ಸ್ಥಳದಲ್ಲಿ 100 ತೆಂಗಿನಕಾಯಿ ಹೊಡೆಯುವ ಮೂಲಕ ಆಳುವ ಸರ್ಕಾರಗಳ ಬೆಲೆ ಏರಿಕೆ ನೀತಿ ಖಂಡಿಸಲು ಸಂಕಲ್ಪ ಮಾಡಿದ್ದೆವು. ಅದ ರಂತೆ ಇಲ್ಲಿಂದು ಕೋವಿಡ್ ಕಾರಣಕ್ಕೆ ಸಾಂಕೇತಿಕವಾಗಿ ನಾಲ್ಕಾರು ತೆಂಗಿನ ಕಾಯಿ ಹೊಡೆದಿದ್ದು, ವಿವಿಧ ಪೆಟ್ರೋಲ್ ಬಂಕುಗಳ ಮುಂದೆ ನಾಲ್ಕೈದರಂತೆ 100 ತೆಂಗಿನಕಾಯಿ ಹೊಡೆಯಲಿದ್ದೇವೆ ಎಂದರು.

ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದ್ದರೂ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುವ ಮೂಲಕ ಆಳುವ ಸರ್ಕಾರಗಳು ಜನತೆಯನ್ನು ಶೋಷಣೆ ಮಾಡುತ್ತಿವೆ. ಈಗಾಗಲೇ ಕೋವಿಡ್ ಸಂಕಷ್ಟ ದಲ್ಲಿರುವ ಜನತೆ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಿಂದ ಪರಿತಪಿಸುವಂತಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಅಡುಗೆ ಅನಿಲ ಮತ್ತು ತೈಲ ಬೆಲೆ ಏರಿಕೆ ಸಂಬಂಧ ಪ್ರತಿಭಟಿಸಿದ್ದ ಎನ್‍ಡಿಎ, ಇದೀಗ ಅಧಿಕಾರಕ್ಕೆ ಬಂದು ಅದೇ ಬೆಲೆ ಏರಿಕೆ ನೀತಿ ಅನುಸರಿಸುತ್ತಿದೆ ಎಂದು ಆರೋ ಪಿಸಿದರು. ಸಂಘಟನೆ ಮುಖಂಡರಾದ ಟಿ.ರವಿಗೌಡ, ಕೆ.ಕೃಷ್ಣ, ಎಸ್.ದಿವಾಕರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »