ಮತ್ತೆರಡು ದಿನ ದಸರಾ ದೀಪಾಲಂಕಾರ ವಿಸ್ತರಣೆ
ಮೈಸೂರು

ಮತ್ತೆರಡು ದಿನ ದಸರಾ ದೀಪಾಲಂಕಾರ ವಿಸ್ತರಣೆ

October 11, 2022

ಮೈಸೂರು,ಅ.10(ಎಸ್‍ಬಿಡಿ)- ಮೈಸೂರಿನ ಹೃದಯಭಾಗ ಹಾಗೂ ಪ್ರಮುಖ ರಸ್ತೆಗಳ ವಿದ್ಯುತ್ ದೀಪಾಲಂಕಾರವನ್ನು ಮತ್ತೆರಡು ದಿನ ವಿಸ್ತರಿಸಲಾಗಿದ್ದು, ಅ.12ರ ವರೆಗೆ ಬೆಳಕಿನ ಸೊಬಗನ್ನು ಕಣ್ತುಂಬಿ ಕೊಳ್ಳಬಹುದಾಗಿದೆ. ದಸರಾ ದೀಪಾ ಲಂಕಾರದ ಅವಧಿಯನ್ನು ವಿಜಯ ದಶಮಿವರೆಗೆ ನಿಗದಿಪಡಿಸಲಾಗಿತ್ತಾ ದರೂ ಉದ್ಯಮಿಗಳು, ಸಾರ್ವಜನಿಕರ ಅಪೇಕ್ಷೆ ಮೇರೆಗೆ ಇಂದಿನವರೆಗೆ(ಅ.10) ವಿಸ್ತರಿಸಲಾಗಿತ್ತು. ಆದರೆ ಮತ್ತಷ್ಟು ದಿನ ದೀಪಾಲಂಕಾರ ಉಳಿಸಿಕೊಳ್ಳಬೇಕೆಂಬುದು ಜನಪ್ರತಿನಿಧಿಗಳು, ಸಾರ್ವಜನಿಕರು, ವ್ಯಾಪಾರಿಗಳ ಒತ್ತಾಸೆಯಾಗಿರುವ ಕಾರಣ ಸೆಸ್ಕ್‍ಗೆ ಹೆಚ್ಚುವರಿ ಆರ್ಥಿಕ ಹೊರೆಯಾ ದರೂ ನಗರದ ಹೃದಯ ಭಾಗ ಹಾಗೂ ಮುಖ್ಯರಸ್ತೆಗಳಲ್ಲಿ ಅ.12ರವರೆಗೆ ದೀಪಾಲಂಕಾರ ಅವಧಿ ವಿಸ್ತರಿಸಲಾಗಿದೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ಹಾಗೂ ದಸರಾ ವಿದ್ಯುತ್ ದೀಪಾಲಂಕಾರ ಉಪಸಮಿತಿ ಅಧ್ಯಕ್ಷ ಟಿ.ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂದರೆ ಅಂಬಾವಿಲಾಸ ಅರಮನೆ ಸುತ್ತಲಿನ ವೃತ್ತಗಳು ಹಾಗೂ ರಸ್ತೆಗಳು, ಸಯ್ಯಾಜಿರಾವ್ ರಸ್ತೆ, ಡಿ.ದೇವರಾಜ ಅರಸ್ ರಸ್ತೆ ಇನ್ನಿತರ ಪ್ರಮುಖ ರಸ್ತೆಗಳಲ್ಲಿ ನಾಳೆ(ಅ.11) ಹಾಗೂ ನಾಳಿದ್ದು(ಅ.12) ಸಂಜೆ 6.30ರಿಂದ ರಾತ್ರಿ 10.30ರವರೆಗೆ ವಿದ್ಯುತ್ ದೀಪಾಲಂಕಾರವನ್ನು ಕಣ್ತುಂಬಿಕೊಂಡು ಸಂಭ್ರಮಿಸಬಹುದು. ದೀಪಾಲಂಕಾರ ಮುಕ್ತಾಯವಾಗುವುದೆಂದು ಸೋಮವಾರ ರಾತ್ರಿ ಸಾವಿರಾರು ಜನ ಮೈಸೂರಿನ ರಸ್ತೆಗಳನ್ನು ಸುತ್ತುಹಾಕಿ ದೀಪಾಲಂಕಾರ ವೀಕ್ಷಿಸಿದರು.

ಉಪ ಸಮಿತಿ ಅಭಿನಂದನೆ: ಈ ಬಾರಿ ದಸರಾ ವಿದ್ಯುತ್ ದೀಪಾಲಂಕಾರ ಆರಂಭದಲ್ಲಿ ನೀರಸವೆನಿಸಿದ್ದರೂ ನಂತರದ ಸುಧಾರಣಾ ಕ್ರಮದ ಪರಿಣಾಮವಾಗಿ ಅತ್ಯಾಕರ್ಷಕವೆನಿ ಸಿತು. ಮುಖ್ಯಮಂತ್ರಿಗಳಾದಿಯಾಗಿ ಹಲವು ಸಚಿವರು, ಶಾಸಕರು, ಉದ್ಯಮಿಗಳು, ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಯಿತು. ದೀಪಾಲಂಕಾರ ಯಶಸ್ವಿಯಾದ ಹಿನ್ನೆಲೆಯಲ್ಲಿ ದೀಪಾಲಂಕಾರ ಉಪ ಸಮಿತಿ ವತಿಯಿಂದ ಇದಕ್ಕೆ ಕಾರಣೀಭೂತರಾದ ಎಲ್ಲರಿಗೂ ಧನ್ಯವಾದ ತಿಳಿಸಲಾಗಿದೆ. ಮುಖ್ಯಮಂತ್ರಿಗಳು, ಇಂಧನ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ಸ್ಥಳೀಯ ಶಾಸಕರು, ಸ್ಥಳೀಯ ಸಂಸ್ಥೆಗಳ ಮಖ್ಯಸ್ಥರು, ಪೊಲೀಸ್ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು, ಸೆಸ್ಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಉಪ ಸಮಿತಿ ಪದಾಧಿಕಾರಿಗಳು ಸೇರಿದಂತೆ ಸಹಕರಿಸಿದ ಎಲ್ಲರಿಗೂ ಸೆಸ್ಕ್ ಎಂಡಿ ಜಯವಿಭವಸ್ವಾಮಿ ಧನ್ಯವಾದ ಅರ್ಪಿಸಿದ್ದಾರೆ.

Translate »