ಮೈಸೂರು ವಿವಿ ಇನ್ನು ಮೈಸೂರು ಜಿಲ್ಲೆಗೆ ಸೀಮಿತ
ಮೈಸೂರು

ಮೈಸೂರು ವಿವಿ ಇನ್ನು ಮೈಸೂರು ಜಿಲ್ಲೆಗೆ ಸೀಮಿತ

October 11, 2022

ಮೈಸೂರು, ಅ. 10(ಆರ್‍ಕೆ)- ಶತಮಾನದ ಇತಿಹಾಸವುಳ್ಳ ಮೈಸೂರು ವಿಶ್ವವಿದ್ಯಾನಿಲ ಯದ ವ್ಯಾಪ್ತಿ ಇನ್ನು ಮೈಸೂರು ನಗರ ಮತ್ತು ಜಿಲ್ಲೆಗಷ್ಟೇ ಸೀಮಿತ. ಜಿಲ್ಲೆಗೊಂದು ವಿಶ್ವ ವಿದ್ಯಾನಿಲಯ ಸ್ಥಾಪಿಸಬೇಕೆಂಬ ಉನ್ನತ ಶಿಕ್ಷಣ ಇಲಾಖೆ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ಕುರಿತು ಇಷ್ಟರಲ್ಲೇ ಸರ್ಕಾರದ ಅಧಿಸೂಚನೆ ಹೊರಬೀಳಲಿದೆ. ಅದರನ್ವಯ ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೊಸ ಪ್ರತ್ಯೇಕ ವಿಶ್ವವಿದ್ಯಾನಿಲಯಗಳು ಸ್ಥಾಪನೆಯಾಗಲಿವೆ. 2023-24ರ ಶೈಕ್ಷಣಿಕ ವರ್ಷದಿಂದ ಹೊಸ ವಿಶ್ವವಿದ್ಯಾನಿಲಯ ಗಳು ಕಾರ್ಯಾರಂಭವಾಗಲಿದ್ದು, ಇದರಿಂದ ಮೈಸೂರು ವಿಶ್ವ ವಿದ್ಯಾನಿಲಯಕ್ಕೆ ಸಂಯೋಜನೆಯಾಗಿದ್ದ ನೆರೆ ಜಿಲ್ಲೆಗಳ ಪದವಿ, ಸ್ನಾತಕ ಪದವಿ ಹಾಗೂ ಬಿಇಡಿ ಕಾಲೇಜುಗಳು ಆಯಾ ಜಿಲ್ಲೆಗಳ ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಂಡು ಹೊಸ ನೀತಿ-ನಿಯಮಾನುಸಾರ ಕಾರ್ಯನಿರ್ವ ಹಿಸಲಿವೆ. ಪ್ರಸ್ತುತ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲಾ ವ್ಯಾಪ್ತಿ ಹೊಂದಿರುವ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿಎಡ್ ಸೇರಿ 234 ಕಾಲೇಜುಗಳು ಸಂಯೋಜನೆಗೊಳಪಟ್ಟಿದ್ದು, 1.15 ಲಕ್ಷ ವಿದ್ಯಾರ್ಥಿಗಳು ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸು ಗಳ ವ್ಯಾಸಂಗ ಮಾಡುತ್ತಿದ್ದಾರೆ. ಸಾಕಷ್ಟು ಸಂಖ್ಯೆಯ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರು, ಅರೆಕಾಲಿಕ ಉಪನ್ಯಾಸಕರು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ತಾತ್ಕಾಲಿಕ ನೌಕರರನ್ನು ಹೊಂದಿರುವ ಮೈಸೂರು ವಿಶ್ವವಿದ್ಯಾನಿಲಯವು ಇನ್ನು ಮುಂದೆ ಕೇವಲ ಮೈಸೂರು ಜಿಲ್ಲೆಗೆ ಸೀಮಿತವಾಗಲಿದೆ.

ಮೈಸೂರು ವಿಶ್ವವಿದ್ಯಾನಿಲಯಕ್ಕೆ ಇನ್ನು ಮುಂದೆ 1 ಸ್ನಾತಕೋತ್ತರ ಕೇಂದ್ರ, 15 ಬಿಎಡ್ ಮತ್ತು 93 ಪ್ರಥಮ ದರ್ಜೆ ಕಾಲೇಜುಗಳು ಮಾತ್ರ ಉಳಿಯುತ್ತವೆ. ಚಾಮರಾಜನಗರ ಜಿಲ್ಲೆಗೆ 17 ಪ್ರಥಮ ದರ್ಜೆ ಕಾಲೇಜು, 2 ಬಿಎಡ್ ಹಾಗೂ 1 ಸ್ನಾತಕೋತ್ತರ ಸೇರಿ ಒಟ್ಟು 20 ಕಾಲೇಜುಗಳು ಸೇರಿರುತ್ತವೆ.
ಅದೇ ರೀತಿ ಮಂಡ್ಯ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ 36 ಪ್ರಥಮ ದರ್ಜೆ ಕಾಲೇಜು, 12 ಬಿಎಡ್ ಹಾಗೂ 1 ಸ್ನಾತಕೋತ್ತರ ಕೇಂದ್ರ, ಹಾಸನ ವ್ಯಾಪ್ತಿಗೆ 1 ಸ್ನಾತಕೋತ್ತರ ಕೇಂದ್ರ, 8 ಬಿಎಡ್ ಹಾಗೂ 47 ಪ್ರಥಮ ದರ್ಜೆ ಕಾಲೇಜುಗಳು ಭವಿಷ್ಯದಲ್ಲಿ ಬರಲಿವೆ. ಪ್ರತೀ ಜಿಲ್ಲೆಯಲ್ಲಿ ಸ್ಥಾಪಿತವಾಗುವ ವಿಶ್ವವಿದ್ಯಾನಿಲಯಗಳಿಗೆ ಪ್ರತ್ಯೇಕ ಕುಲಪತಿ, ಕುಲಸಚಿವ, ಪರೀಕ್ಷಾಂಗ ಕುಲಸಚಿವ, ಹಣಕಾಸು ಅಧಿಕಾರಿ, ಯೋಜನಾ ನಿರ್ದೇಶಕರು, ಸಿಂಡಿ ಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಸಮಿತಿ ಸದಸ್ಯರನ್ನು ನಿಯೋಜಿಸಬೇಕಾಗುತ್ತದೆ. ಚಾಮರಾಜನಗರ, ಹಾಸನ, ಕೊಡಗು, ಹಾವೇರಿ, ಕೊಪ್ಪಳ, ಬಾಗಲಕೋಟೆ, ಬೀದರ್, ಮಂಡ್ಯ ಸೇರಿದಂತೆ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ವಿವಿಗಳನ್ನು ಸ್ಥಾಪಿಸಿ, ಎಲ್ಲರಿಗೂ ಉನ್ನತ ಶಿಕ್ಷಣ ಸಿಗುವಂತೆ ಮಾಡಲಾಗುವುದೆಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಇತ್ತೀಚೆಗೆ ಘೋಷಿಸಿದ್ದರು. ಈ ಉದ್ದೇಶಕ್ಕೆ 14 ಕೋಟಿ ರೂ. ಅನುದಾನ ನಿಗದಿಗೊಳಿಸಿದ್ದು, ನಿಯಮಿತ ಸ್ಥಳಾವಕಾಶ, ಮಿತವಾದ ಸಿಬ್ಬಂದಿ ಹಾಗೂ ಕಡಿಮೆ ಖರ್ಚಿನಲ್ಲಿ ವಿಶ್ವವಿದ್ಯಾ ನಿಲಯಗಳನ್ನು ನಿರ್ವಹಣೆ ಮಾಡಬೇಕು. ಒಮ್ಮೆ ವಿಶ್ವವಿದ್ಯಾನಿಲಯಗಳು ಅಸ್ತಿತ್ವಕ್ಕೆ ಬಂದಲ್ಲಿ ಆಯಾ ಜಿಲೆಗಳ ಕಾಲೇಜುಗಳು ಹೊಸ ವಿವಿಗಳ ಸಂಯೋಜನೆ ಗೊಳಪಡುತ್ತವೆ ಎಂದು ಸಚಿವರು ಈಗಾಗಲೇ ಪ್ರಕಟಿಸಿದ್ದಾರೆ. 2020ರ ರಾಷ್ಟ್ರೀಯ ಶಿಕ್ಷಣ ನೀತಿ (ಓಇP-2020)ಯನ್ವಯ ಸರ್ವರಿಗೂ ಸುಲಭ ರೀತಿ ಉನ್ನತ ಶಿಕ್ಷಣ ಲಭ್ಯವಾಗಬೇಕೆಂಬ ಉದ್ದೇಶದಿಂದ ಪ್ರತೀ ಜಿಲ್ಲೆಯಲ್ಲಿ ಒಂದೊಂದು ವಿಶ್ವವಿದ್ಯಾನಿಲಯ ತೆರೆಯಲಾಗುತ್ತಿದೆ ಎಂದು ತಿಳಿಸಿದರು.

Translate »