ಮುಲಾಯಂ ಸಿಂಗ್ ಯಾದವ್ ಇನ್ನಿಲ್ಲ
News

ಮುಲಾಯಂ ಸಿಂಗ್ ಯಾದವ್ ಇನ್ನಿಲ್ಲ

October 11, 2022

ಲಕ್ನೊ, ಅ.10- ಹಿರಿಯ ರಾಜಕೀಯ ಮುತ್ಸದ್ದಿ, ಸಮಾಜ ವಾದಿ ಪಕ್ಷದ ಸಂಸ್ಥಾ ಪಕ, ಉತ್ತರ ಪ್ರದೇಶದ ಮಾಜಿ ಮುಖ್ಯ ಮಂತ್ರಿ ಮುಲಾಯಂ ಸಿಂಗ್ ಯಾದವ್ (82) ಸೋಮವಾರ ಬೆಳಗ್ಗೆ 8.16ರಲ್ಲಿ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಕೆಲ ದಿನಗಳ ಹಿಂದೆ ಗುರುಗ್ರಾಮ್‍ನ ವೇದಾಂತ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿ ಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

ಉತ್ತರ ಪ್ರದೇಶದ ಪ್ರಮುಖ ರಾಜಕೀಯ ನಾಯಕರಲ್ಲಿ ಒಬ್ಬರಾದ ಮುಲಾಯಂ ಸಿಂಗ್ ಯಾದವ್ ಅವರು ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತು ಭಾರತದ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ತಮ್ಮ ರಾಜಕೀಯ ಜೀವನದಲ್ಲಿ 10 ಬಾರಿ ವಿಧಾನಸಭಾ ಸದಸ್ಯರಾಗಿ ಹಾಗೂ ಏಳು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ಮತ್ತು ಸಮಾಜವಾದಿ ಪಕ್ಷದ ಈಗಿನ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಮ್ಮ ತಂದೆಯ ನಿಧನ ವನ್ನು ಖಚಿತಪಡಿಸಿದ್ದಾರೆ. “ನನ್ನ ಗೌರವಾನ್ವಿತ ತಂದೆ ಮತ್ತು ಪ್ರತಿಯೊಬ್ಬರ ನಾಯಕ ಇನ್ನಿಲ್ಲ” ಎಂದು ಬರೆದುಕೊಂಡಿದ್ದಾರೆ. 1939ರ ನವೆಂಬರ್ 22 ರಂದು, ಮಧ್ಯ ಉತ್ತರ ಪ್ರದೇಶದ ಇಟ್ವಾ ಜಿಲ್ಲೆಯ ಸೈಫಾಯಿ ಗ್ರಾಮದಲ್ಲಿ ಸುಗರ್‍ಸಿಂಗ್ ಯಾದವ್ ಮತ್ತು ಮೂರ್ತಿದೇವಿ ದಂಪತಿ ಪುತ್ರ ರಾಗಿ ಜನಿಸಿದ ಮುಲಾಯಂಸಿಂಗ್ ಯಾದವ್, ಇಟಾವಾದಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದರು. ನಂತರ ಫತೇಹಾಬಾದ್ ಮತ್ತು ಆಗ್ರಾದಲ್ಲಿ ಶಿಕ್ಷಣ ಪಡೆದರು. ಪ್ರಸಿದ್ಧ ಕುಸ್ತಿಪಟು, ಮುಲಾಯಂ ಅವರು ತಮ್ಮ ಪದವಿ ಮತ್ತು ಬ್ಯಾಚುಲರ್ ಆಫ್ ಟೀಚಿಂಗ್ (ಃಖಿ) ಮುಗಿಸಿದ ನಂತರ ಆಗ್ರಾ ವಿಶ್ವವಿದ್ಯಾಲಯದಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದರು, ಅಲ್ಲಿ ಅವರು ರಾಜಕೀಯ ವಿಜ್ಞಾನದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದರು.

ರಾಮ್ ಮನೋಹರ್ ಲೋಹಿಯಾ ಮತ್ತು ರಾಜ್ ನಾರಾಯಣ್‍ರಂತಹ ನಾಯಕರಿಂದ ಪ್ರಭಾವಿತರಾಗಿದ್ದ ಮುಲಾಯಂ ಸಿಂಗ್ ಯಾದವ್ ಅವರು 1967ರಲ್ಲಿ ಉತ್ತರ ಪ್ರದೇಶದ ವಿಧಾನಸಭೆಗೆ ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾದರು.

1975 ರಲ್ಲಿ ಇಂದಿರಾ ಗಾಂಧಿಯವರ ತುರ್ತುಪರಿಸ್ಥಿತಿ ಸಮಯದಲ್ಲಿ ಯಾದವ್ ಅವರನ್ನು ಬಂಧಿಸಿ 19 ತಿಂಗಳ ಕಾಲ ಜೈಲಿನಲ್ಲಿ ಇರಿಸಲಾಯಿತು. ಅವರು ಮೊದಲು 1977 ರಲ್ಲಿ ರಾಜ್ಯ ಸಚಿವರಾದರು. ನಂತರ, 1980 ರಲ್ಲಿ ಅವರು ಉತ್ತರ ಪ್ರದೇಶದ ಲೋಕದಳದ (ಜನತಾ ಪಕ್ಷ) ಅಧ್ಯಕ್ಷರಾದರು, ನಂತರ ಜನತಾ ದಳದ (ಜನತಾ ಪಕ್ಷ) ಭಾಗವಾಯಿತು. 1982 ರಲ್ಲಿ ಅವರು ಉತ್ತರ ಪ್ರದೇಶ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು. 1985 ರವರೆಗೆ ಆ ಹುದ್ದೆಯನ್ನು ಅಲಂಕರಿಸಿದರು. ಲೋಕದಳ ಪಕ್ಷವು ವಿಭಜನೆಯಾದಾಗ ಯಾದವ್ ಕ್ರಾಂತಿಕಾರಿ ಮೋರ್ಚಾ ಪಕ್ಷವನ್ನು ಪ್ರಾರಂಭಿಸಿದರು. ಅವರು 1989-1991 ರವರೆಗೆ, 1993-1995 ಮತ್ತು 2003 ರಿಂದ 2007ರವರೆಗೆ ಮೂರು ಬಾರಿ ಯುಪಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಕೇಂದ್ರದಲ್ಲಿ ಯುನೈಟೆಡ್ ಫ್ರಂಟ್ ಸರ್ಕಾರ ಅವಧಿಯಲ್ಲಿ 1996-1998 ರ ಅವಧಿಯಲ್ಲಿ ರಕ್ಷಣಾ ಸಚಿವರಾಗಿದ್ದರು.

ಭಾರತದ ಮಾಜಿ ರಕ್ಷಣಾ ಸಚಿವರೂ ಆಗಿದ್ದ ಸಮಾಜವಾದಿ ಪಕ್ಷದ ಪೆÇೀಷಕ ಮುಲಾಯಂ ಸಿಂಗ್ ಯಾದವ್ ಅವರ ನಿಧನವು ಭಾರತೀಯ ರಾಜಕೀಯಕ್ಕೆ ದೊಡ್ಡ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬ ಸದಸ್ಯರಿಗೆ ಶಕ್ತಿಯನ್ನು ನೀಡಲಿ ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ. ಹಲವು ಫೆÇೀಟೋಗಳನ್ನು ಹಾಕಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಮುಲಾಯಂ ಸಿಂಗ್ ಯಾದವ್ ಅವರು ಗಮನಾರ್ಹ ವ್ಯಕ್ತಿತ್ವ ಹೊಂದಿದ್ದರು. ಜನರ ಸಮಸ್ಯೆಗಳ ಬಗ್ಗೆ ಸಂವೇದನಾಶೀಲರಾಗಿದ್ದ ಅವರು ವಿನಮ್ರ ಮತ್ತು ಈ ಮಣ್ಣಿನ ನಾಯಕರಾಗಿ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟರು. ಅವರು ಶ್ರದ್ಧೆಯಿಂದ ಜನರಿಗೆ ಸೇವೆ ಸಲ್ಲಿಸಿದರು. ಲೋಕನಾಯಕ್ ಜೆಪಿ ಮತ್ತು ಡಾ. ಲೋಹಿಯಾ ಅವರ ಆದರ್ಶಗಳನ್ನು ಜನಪ್ರಿಯಗೊಳಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು.

ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಮುಲಾಯಂ ಸಿಂಗ್ ಯಾದವ್ ಜೀ ಅವರೊಂದಿಗೆ ಅನೇಕ ಸಂವಾದಗಳನ್ನು ನಡೆಸಿದ್ದೆ. ನಿಕಟ ಒಡನಾಟ ಮುಂದುವರಿದಿತ್ತು. ಅವರ ಅಭಿಪ್ರಾಯಗಳನ್ನು ಕೇಳಲು ಎದುರು ನೋಡುತ್ತಿದ್ದೆ. ಅವರ ನಿಧನ ನನಗೆ ನೋವು ತಂದಿದೆ. ಅವರ ಕುಟುಂಬಕ್ಕೆ ಮತ್ತು ಲಕ್ಷಾಂತರ ಬೆಂಬಲಿಗರಿಗೆ ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ. ಹಿರಿಯ ನಾಯಕನ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಅವರ ನಿಧನದಿಂದ ದೇಶದಲ್ಲಿ ಸಮಾಜವಾದಿ ಚಳವಳಿಗಳ ಯುಗ ಅಂತ್ಯಗೊಂಡಿದೆ ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ದೇಶದ ರಕ್ಷಣಾ ಸಚಿವರಾಗಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯಾದವ್ ಅವರ ಕೊಡುಗೆ ಅವಿಸ್ಮರಣೀಯವಾಗಿ ಉಳಿಯುತ್ತದೆ. ಅದಕ್ಕಿಂತ ಹೆಚ್ಚಾಗಿ ತುಳಿತಕ್ಕೊಳಗಾದ ಮತ್ತು ತುಳಿತಕ್ಕೊಳಗಾದವರಿಗಾಗಿ ಅವರು ನಡೆಸಿದ ಹೋರಾಟ ಸದಾ ಸ್ಮರಣೀಯ ಎಂದು ತಮ್ಮ ಸಂದೇಶದಲ್ಲಿ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ. ರಾಮ್ ಮನೋಹರ್ ಲೋಹಿಯಾ, ರಾಜ್ ನಾರಾಯಣ್ ಅವರಂಥ ನಾಯಕರ ಮಾರ್ಗದರ್ಶನದಲ್ಲಿ ಮುನ್ನೆಲೆಗೆ ಬಂದ ಮುಲಾಯಂ ಸಿಂಗ್ ಅವರು ತುರ್ತು ಪರಿಸ್ಥಿತಿ ವಿರೋಧಿಸಿ ಸೆರೆವಾಸ ಅನುಭವಿಸಿದ್ದರು. ಸಮಾಜವಾದಿ ಪಕ್ಷವನ್ನು ಸ್ಥಾಪಿಸಿ, ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಮುಲಾಯಂ ಸಿಂಗ್ ಅವರು ಕೇಂದ್ರ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ನಿಧನದಿಂದ ರಾಷ್ಟ್ರವು ಮುತ್ಸದ್ದಿ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮುಲಾಯಂ ಸಿಂಗ್ ಯಾದವ್ ಸಾವು ಆಘಾತಕಾರಿ. ಅವರು ಉತ್ತರ ಪ್ರದೇಶದಲ್ಲಿ ಕೋಮುವಾದದ ವಿರುದ್ಧ ಪ್ರಬಲ ರಾಜಕೀಯ ಶಕ್ತಿಯಾಗಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

Translate »