ಚಾಮುಂಡಿಬೆಟ್ಟ ತಪ್ಪಲಲ್ಲಿ ಕೆಲ `ಅನಾಗರಿಕ’ ಭಕ್ತರ ಹೇಸಿಗೆ ಕೆಲಸ
ಮೈಸೂರು

ಚಾಮುಂಡಿಬೆಟ್ಟ ತಪ್ಪಲಲ್ಲಿ ಕೆಲ `ಅನಾಗರಿಕ’ ಭಕ್ತರ ಹೇಸಿಗೆ ಕೆಲಸ

October 11, 2022

ಮೈಸೂರು,ಅ.10(ಎಸ್‍ಬಿಡಿ)- ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲು ಮೆಟ್ಟಿಲು ಮಾರ್ಗದಲ್ಲಿ ಸೋಮವಾರ ಬೆಳಗ್ಗೆ ಕಂಡುಬಂದ ಕಸದ ರಾಶಿ, ಸ್ಥಳದ ಪಾವಿತ್ರ್ಯತೆ ಅರಿಯದವರ ದುರ್ವರ್ತ ನೆಗೆ ಕನ್ನಡಿ ಹಿಡಿದಂತಿತ್ತು.

ಚಾಮುಂಡಿಬೆಟ್ಟದಲ್ಲಿ ಭಾನುವಾರ ತಾಯಿ ಚಾಮುಂಡೇಶ್ವರಿಯ ಮಹಾ ರಥೋತ್ಸವ ವೈಭವಯುತವಾಗಿ ನೆರವೇ ರಿತು. ದಸರಾ ಬೆನ್ನಲ್ಲೇ ನೆರವೇರಿದ ಈ ಧಾರ್ಮಿಕ ಆಚರಣೆಯಲ್ಲಿ ಸಹ್ರಸಾರು ಮಂದಿ ಭಾಗಿಯಾಗಿದ್ದರು. ರಥೋತ್ಸ ವದ ನಂತರವೂ ದಿನವಿಡೀ ಭಕ್ತರು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಮೆಟ್ಟಿಲು ಮಾರ್ಗದ ಮುಖೇನ ಸಾವಿರಾರು ಭಕ್ತರು ಬೆಟ್ಟವೇರಿ ತಾಯಿಯ ಕೃಪೆಗೆ ಪಾತ್ರರಾದರು.

ಆದರೆ ಈ ಪವಿತ್ರ ಸ್ಥಳದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡಿ ದುರ್ವರ್ತನೆ ಮೆರೆದವರು ಹಾಗೂ ಅದಕ್ಕೆ ಕಾರಣರಾದವರು ಅದೆಷ್ಟೇ ಮಹಾ ಭಕ್ತರಾದರು ತಾಯಿ ಚಾಮುಂಡೇ ಶ್ವರಿಯೂ ಸಹಿಸುವುದಿಲ್ಲ. ಭಕ್ತರು ರಥೋತ್ಸವದ ದಿನ ಬೆಟ್ಟದ ತಪ್ಪಲಿನ ಮೆಟ್ಟಿಲು ಮಾರ್ಗದ ಬಳಿ ಪ್ರಸಾದ ವಿನಿಯೋಗ ಮಾಡಿದ್ದಾರೆ. ಆದರೆ ಪ್ರಸಾದ ಸೇವನೆ ಬಳಿಕ ಪ್ಲೇಟ್ ಹಾಗೂ ಲೋಟಗಳನ್ನು ಒಂದು ಕಡೆ ಹಾಕದೆ ಎಲ್ಲೆಂದರಲ್ಲಿ ಬಿಸಾಡಿದ್ದರು. ಕೆಲವರು ಪೂರ್ಣ ಪ್ರಸಾದ ಸೇವಿಸದೆ ಎಸೆದಿದ್ದರು. ಅಲ್ಲದೆ ಇಲ್ಲಿರುವ ಚಾಮುಂಡಿ ಕಲ್ಲಿನ ಮೂರ್ತಿಗೆ ಪೂಜೆ ಸಲ್ಲಿಸಿದವರು ಗಂಧದ ಕಡ್ಡಿ, ಕರ್ಪೂರ, ಅರಿಶಿನ-ಕುಂಕುಮದ ಕವರ್‍ಗಳನ್ನು ಮೂರ್ತಿ ಸುತ್ತಲೂ ಹಾಕಿದ್ದರು. ಎಲ್ಲೆಡೆ ಬಿಡಿ ಹೂವು, ಪ್ಲಾಸ್ಟಿಕ್ ಬಾಟೆಲ್, ಕವರ್‍ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮೆಟ್ಟಿಲುಗಳು, ಇಕ್ಕೆಲಗಳಲ್ಲಿರುವ ಕಾಂಪೌಂಡ್ ಮಾದರಿ ಕಲ್ಲಿನ ಕಟ್ಟೆ, ನೀರಿನ ಟ್ಯಾಂಕ್, ಅಕ್ಕಪಕ್ಕದ ಖಾಲಿ ಜಾಗ, ಹೀಗೆ ಎಲ್ಲಾ ಸ್ಥಳವೂ ಕಸಮಯವಾಗಿತ್ತು. ಸರಿರಾತ್ರಿಯಿಂದ ಬೆಳಗ್ಗೆವ ರೆಗೂ ಮಳೆ ಸುರಿದ ಪರಿಣಾಮ ಇಲ್ಲಿನ ಪರಿಸ್ಥಿತಿ ಮತ್ತಷ್ಟು ಅಯೋಮಯವಾಗಿತ್ತು. ತ್ಯಾಜ್ಯವನ್ನು ಡಂಪ್ ಮಾಡುವ ಜಾಗದಂತಾಗಿತ್ತು. ಮೆಟ್ಟಿಲು ಮಾರ್ಗದಲ್ಲಿ ಬೆಟ್ಟವೇರಲು ಹೋದವರು ಒಂದು ಕ್ಷಣ ಅವಕ್ಕಾದರು. ಇದ್ಯಾವ ರೀತಿಯ ಭಕ್ತಿಯ ಪರಿ, ಈ ರೀತಿಯ ನಡೆಯನ್ನು ದೇವರೂ ಮೆಚ್ಚುವುದಿಲ್ಲ ಎಂದು ಅವರು ಶಪಿಸಿದರು.

ವ್ಯವಸ್ಥೆ ವೈಫಲ್ಯ: ಎಲ್ಲೆಂದರಲ್ಲಿ ಕಸ ಎಸೆಯುವುದು ಅನಾಗರಿಕ ನಡೆ. ತ್ಯಾಜ್ಯವನ್ನು ನಿಗದಿತ ಸ್ಥಳ ಅಥವಾ ಡಬ್ಬದಲ್ಲಿ ಹಾಕಬೇಕು. ಅದರಲ್ಲೂ ಧಾರ್ಮಿಕ ಕ್ಷೇತ್ರದಲ್ಲಿ ಇಂತಹ ಕೃತ್ಯ ನಡೆಯಲೇಬಾರದು. ತ್ಯಾಜ್ಯ ಚೆಲ್ಲಾಪಿಲ್ಲಿಯಾಗಿ ಎಸೆದು ಅವಿವೇಕತನ ತೋರಿದ ಜನರ ಜೊತೆಗೆ ವ್ಯವಸ್ಥೆಯ ವೈಫಲ್ಯವೂ ಇದಕ್ಕೆ ಪ್ರಮುಖ ಕಾರಣವಾಗಿದೆ. ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆಗಿರುವ ಯೋಜನೆಗಳು ಕೇವಲ ಕಡತದಲ್ಲಿ ಅಡಕವಾಗಿವೆ. ಸ್ವಚ್ಛತಾ ನಿರ್ವಹಣೆಯಲ್ಲಿ ವ್ಯವಸ್ಥೆ ವಿಫಲವಾಗಿದೆ. ವಿಶೇಷ ದಿನಗಳಲ್ಲಿ ಸ್ವಚ್ಛತೆಗೆ ಕನಿಷ್ಟ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಬೆಟ್ಟದ ಪಾದದ ಬಳಿಯಷ್ಟೇ ಅಲ್ಲ ಮೆಟ್ಟಿಲು ಮಾರ್ಗದುದ್ದಕ್ಕೂ ಎಲ್ಲೆಂದರಲ್ಲಿ ಕಸ ಬಿದ್ದಿರುತ್ತದೆ. ಚಾಮುಂಡಿ ಬೆಟ್ಟದ ಪರಿಸರದಲ್ಲಿ ತ್ಯಾಜ್ಯವೇ ರಾಕ್ಷಸನಂತೆ ಕಾಡುತ್ತಿದೆ.

ದೇವಾಲಯ ಆವರಣ ಹಾಗೂ ಮೆಟ್ಟಿಲು ಮಾರ್ಗದ ಸ್ವಚ್ಛತಾ ನಿರ್ವಹಣೆ ಚಾಮುಂಡಿ ಬೆಟ್ಟ ಗ್ರಾಮ ಪಂಚಾಯ್ತಿಯ ಜವಾಬ್ದಾರಿ. ಆದರೆ ವಿಶೇಷ ದಿನಗಳಲ್ಲಿ ಮಾತ್ರ ಮೈಸೂರು ಮಹಾನಗರಪಾಲಿಕೆ ಸಹಕಾರದೊಂದಿಗೆ ಸ್ವಚ್ಛತೆ ಕೈಗೊಳ್ಳಲಾಗುತ್ತದೆ. ಆದರೆ ಮಹಾ ರಥೋತ್ಸವದ ದಿನ ಎರಡೂ ಸ್ಥಳೀಯ ಸಂಸ್ಥೆಗಳು ಜವಾಬ್ದಾರಿ ಮರೆತಿವೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಸಾದವನ್ನು ಗೌರವಿಸಿ: ಹಸಿದ ಹೊಟ್ಟೆಗೆ ಅನ್ನ ನೀಡುವುದೇ ಶ್ರೇಷ್ಠ ಭಕ್ತಿ. ಅದರಲ್ಲೂ ದೇವರಲ್ಲಿ ಹರಸಿಕೊಂಡು ಪ್ರಸಾದದ ರೂಪದಲ್ಲಿ ನೀಡುವುದನ್ನು ದೇವರಂತೆಯೇ ಕಾಣಬೇಕು. ಎಷ್ಟು ಸಾಧ್ಯವೇ ಅಷ್ಟನ್ನು ಮಾತ್ರ ಪಡೆದು ಸಂಪೂರ್ಣವಾಗಿ ಸೇವಿಸಬೇಕು. ನಂತರ ತಟ್ಟೆ, ಲೋಟ ಇನ್ನಿತರ ತ್ಯಾಜ್ಯವನ್ನು ನಿಗದಿತ ಸ್ಥಳದಲ್ಲಿಯೇ ಹಾಕಬೇಕು. ಈ ಕನಿಷ್ಟ ಕ್ರಮವನ್ನೂ ಅನುಸರಿಸದಿದ್ದರೆ ದೇವರ ಕೃಪೆಗೆ ಪಾತ್ರರಾಗಬೇಕೆಂಬ ಆಶಯ ಈಡೇರುವುದಿಲ್ಲ.
ನಿಯಮ ಪಾಲಿಸಿ: ವಿಶೇಷ ದಿನಗಳಲ್ಲಿ ಹೀಗೆ ಪ್ರಸಾದ ವಿತರಿಸುವವರ ಸಂಖ್ಯೆ ಹೆಚ್ಚಾಗುವುದರಿಂದ ತ್ಯಾಜ್ಯವೂ ವಿಪರೀತವಾಗಿ ಉತ್ಪತ್ತಿಯಾಗುತ್ತದೆ. ಹಾಗಾಗಿ ಪ್ರಸಾದ ವಿತರಿಸುವ ಪ್ರತಿಯೊಬ್ಬರೂ ಮೈಸೂರು ನಗರ ಪಾಲಿಕೆ ಅಥವಾ ಚಾಮುಂಡಿ ಬೆಟ್ಟ ಗ್ರಾಪಂನಿಂದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಬೇಕು. ಅಲ್ಲದೆ ಪ್ರಸಾದ ವಿತರಿಸುವ ಹಾಗೂ ಆಸುಪಾಸಿನ ಸ್ಥಳವನ್ನು ಸ್ವಚ್ಛಗೊಳಿಸಬೇಕೆಂಬ ಷರತ್ತು ವಿಧಿಸಬೇಕು. ಅಂತಹ ಸ್ಥಳದಲ್ಲಿ ಹಾಗೂ ಜನದಟ್ಟಣೆ ಹೆಚ್ಚಿರುವ ಸೂಕ್ತ ಜಾಗಗಳಲ್ಲಿ ಕಸದ ಡಬ್ಬಿಗಳನ್ನು ಹೆಚ್ಚಾಗಿ ಇಡಬೇಕು. ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕರು ಈ ನಿಯಮ ಪಾಲಿಸದ ಹೊರತು ಪವಿತ್ರ ಚಾಮುಂಡಿ ಬೆಟ್ಟದಲ್ಲಿ ಶುಚಿತ್ವ ಕಾಯ್ದುಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

Translate »