ರಾಹುಲ್ ಗಾಂಧಿ ಏಕತಾ ಯಾತ್ರೆಗೆ ಸೆಡ್ಡು ಇಂದಿನಿಂದಬಿಜೆಪಿ ವಿಜಯ ಯಾತ್ರೆ
News

ರಾಹುಲ್ ಗಾಂಧಿ ಏಕತಾ ಯಾತ್ರೆಗೆ ಸೆಡ್ಡು ಇಂದಿನಿಂದಬಿಜೆಪಿ ವಿಜಯ ಯಾತ್ರೆ

October 11, 2022

ಬೆಂಗಳೂರು, ಅ.10 (ಕೆಎಂಶಿ)- ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ನಡೆಸಿರುವ ಭಾರತ್ ಜೋಡೋ ಯಾತ್ರೆಗೆ ಸೆಡ್ಡು ಹೊಡೆ ಯಲು ಮುಂದಾಗಿರುವ ಬಿಜೆಪಿ, ನಾಳೆಯಿಂದ ವಿಜಯ ಯಾತ್ರೆ ಹಮ್ಮಿಕೊಂಡಿದೆ.

ಯಾತ್ರೆಯ ನಾಯಕತ್ವವನ್ನು ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ವಹಿಸಲಿದ್ದು, ಇವರ ಮಾರ್ಗದರ್ಶನದಲ್ಲಿ ಎರಡು ತಂಡಗಳು ರಾಜ್ಯದ 157 ಕ್ಷೇತ್ರಗಳಲ್ಲಿ ಯಾತ್ರೆ ಮಾಡಲಿವೆ.

ರಾಹುಲ್‍ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಹೈದರಾಬಾದ್-ಕರ್ನಾಟಕಕ್ಕೆ ಕಾಲಿಡುವ ಮುನ್ನವೇ ಬಿಜೆಪಿಯ ವಿಜಯ ಯಾತ್ರೆ ಆ ಭಾಗ ದಲ್ಲಿ ಸಂಚರಿಸಲಿದೆ. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಮೊದಲನೇ ತಂಡ ನಾಳೆಯಿಂದ ಎರಡು ದಿನಗಳ ಕಾಲ ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಕೈಗೊಳ್ಳುತ್ತಿರುವ ವಿಜಯ ಯಾತ್ರೆಯು 50 ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ಮತದಾರರು ಹೆಚ್ಚಿದ್ದು, ಈ ಕ್ಷೇತ್ರಗಳಲ್ಲಿ ಲಿಂಗಾಯತರ ಮತ ಗಳೇ ಚುನಾವಣೆಯಲ್ಲಿ ನಿರ್ಣಾಯಕವಾಗಲಿವೆ.

ಇಂತಹ ಕ್ಷೇತ್ರಗಳಲ್ಲಿ ಲಿಂಗಾಯತ ಮತಗಳನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಆ ಸಮಾಜದಲ್ಲಿ ಪಕ್ಷದ ವಿರುದ್ಧ ಇರುವ ಅಸಮಾಧಾನ ಹೋಗಲಾ ಡಿಸಲು ಇದೇ ಸಮಾಜಕ್ಕೆ ಸೇರಿದ ಯಡಿಯೂರಪ್ಪ, ಬೊಮ್ಮಾಯಿ ಮೊದಲ ಹಂತದ ವಿಜಯ ಯಾತ್ರೆ ಆರಂಭಿಸಿದ್ದಾರೆ. ಪರಿಶಿಷ್ಠ ಸಮುದಾಯಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿದ ನಂತರ ಪರಿಶಿಷ್ಟ ವರ್ಗದವರೇ ಹೆಚ್ಚಿರುವ ಭಾಗದಲ್ಲೇ ಈ ಪ್ರವಾಸ ಕೈಗೊಳ್ಳಲಾಗುತ್ತಿದೆ. ಸರ್ಕಾರ ತೆಗೆದುಕೊಂಡ ತೀರ್ಮಾನವನ್ನು ಮುಂದಿನ ವಿಧಾನಸಭಾ ಚುನಾ ವಣೆಗೆ ರಾಜಕೀಯವಾಗಿ ಲಾಭ ಪಡೆದುಕೊಳ್ಳಲು ಬಿಜೆಪಿ ಈ ದಾಳವನ್ನು ಬಳಸಿಕೊಂಡಿದೆ. ಮಂಗಳವಾರ ಮಧ್ಯಾಹ್ನ ಎರಡು ಗಂಟೆಗೆ ರಾಯಚೂರು ಜಿಲ್ಲೆಯ ಗಿಲೇಸುಗೂರಿನಲ್ಲಿ ಪಕ್ಷ ಬೃಹತ್ ಸಮಾವೇಶ ಆಯೋಜಿಸಿದ್ದು, ಅಕ್ಟೋಬರ್ ಹನ್ನೆರಡರ ಬುಧವಾರ ಬೆಳಿಗ್ಗೆ 11.30ಕ್ಕೆ ಬಳ್ಳಾರಿ ಜಿಲ್ಲೆ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾವೇಶ ಆಯೋಜಿಸಿದೆ. ಬುಧವಾರ ಮಧ್ಯಾಹ್ನ ಮೂರು ಗಂಟೆಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಸಮಾವೇಶ ಆಯೋಜನೆ ಯಾಗಿದ್ದು ಈ ಯಾತ್ರೆಯ ಮೂಲಕ ದಲಿತ,ಲಿಂಗಾಯತ ಮತಗಳ ಕ್ರೋಢೀ ಕರಣಕ್ಕೆ ಬಿಜೆಪಿ ಯತ್ನಿಸಲಿದೆ ಅಲ್ಲದೆ ಈ ನಾಲ್ಕು ಜಿಲ್ಲೆಗಳಲ್ಲಿ ಮುಖಂಡರ ಸಭೆಗಳನ್ನು ಕರೆದು ಉಭಯ ನಾಯಕರು ಸಂಘಟನೆ ಬಗ್ಗೆ ಮತ್ತು ಮುಂಬರುವ ಚುನಾವಣಾ ಸಿದ್ಧತೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಕಳೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ರಾಜ್ಯದ ನೂರಾ ಐವತ್ತೇಳು ಕ್ಷೇತ್ರಗಳಲ್ಲಿ ಒಂದಲ್ಲ, ಒಂದು ಭಾರಿ ಗೆಲುವು ಸಾಧಿಸಿದ್ದು, ಮೊದಲ ಹಂತದಲ್ಲಿ ಈ ನೂರಾ ಐವತ್ತೇಳು ಕ್ಷೇತ್ರಗಳ ಮೇಲೆ ಗಮನ ಹರಿಸಲು ತೀರ್ಮಾನಿಸಲಾಗಿದೆ. ಸದ್ಯಕ್ಕೆ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಲಾಗಿದ್ದು ಈ ವರ್ಷಾಂತ್ಯ ದೊಳಗೆ ಅದು ರಾಜ್ಯದ ಐವತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಇದೇ ರೀತಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಮತ್ತು ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ರಚಿಸಲಾಗಿರುವ ಮತ್ತೊಂದು ತಂಡ ಕೂಡ ಈ ವರ್ಷಾಂತ್ಯದೊಳಗೆ ರಾಜ್ಯದ ಐವತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ.

Translate »