ಮೈಸೂರು,ಆ.17(ಆರ್‍ಕೆ)- ಮೈಸೂರು ಮಹಾನಗರ ಪಾಲಿಕೆ ಹೆಲ್ತ್ ಇನ್ಸ್‍ಪೆಕ್ಟರ್ ಎಂದು ಹೇಳಿಕೊಂಡು ಅಂಗಡಿ ವರ್ತಕರಿಂದ ಹಣ ವಸೂಲಿ ಮಾಡುತ್ತಿದ್ದ ಯುವಕನನ್ನು ಪಾಲಿಕೆ ವಲಯ ಕಚೇರಿ-5ರ ಅಧಿಕಾರಿಗಳು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಮೈಸೂರಿನ ವಿದ್ಯಾರಣ್ಯಪುರಂ, ಸಿವೇಜ್ ಫಾರಂ ರಸ್ತೆ ನಿವಾಸಿ ವರದರಾಜು ಅವರ ಮಗ ವಿ. ಕಾರ್ತಿಕ್ ಬಂಧಿತ ನಕಲಿ ಪಾಲಿಕೆ ಹೆಲ್ತ್ ಇನ್ಸ್‍ಪೆಕ್ಟರ್, ಎಂಬಿಎ ಪದವಿ ಪಡೆದು ಖಾಸಗಿ ಬ್ಯಾಂಕೊಂದರಲ್ಲಿ ಕೆಲಸ ಮಾಡು ತ್ತಿದ್ದ ಆತ, ಮೈಸೂರು ಮಹಾನಗರ ಪಾಲಿಕೆ ಹೆಲ್ತ್ ಇನ್ಸ್‍ಪೆಕ್ಟರ್ ಎಂದು ಹೇಳಿ ಕೊಂಡು ನಕಲಿ ಗುರುತಿನ ಚೀಟಿ ತೋರಿಸಿ ಹೆಬ್ಬಾಳು ಸುತ್ತಮುತ್ತಲಿನ ಅಂಗಡಿಗಳಲ್ಲಿ ಟ್ರೇಡ್ ಲೈಸೆನ್ಸ್‍ಗೆ ಹಣ ವಸೂಲಿ ಮಾಡುತ್ತಿದ್ದ. ಹೆಬ್ಬಾಳು ಮುಖ್ಯ ರಸ್ತೆಯ ಬಸವನಗುಡಿ ಸರ್ಕಲ್ ಬಳಿಯ ಪಾಲಿಕೆ ವಲಯ ಕಚೇರಿ-5ರ ಸೀನಿಯರ್ ಹೆಲ್ತ್ ಇನ್ಸ್‍ಪೆಕ್ಟರ್ ಟಿ.ಎಂ. ಧನಂಜಯಗೌಡ ಟ್ರೇಡ್ ಲೈಸೆನ್ಸ್ ರಿನೀವಲ್ ಸಂಬಂಧ ಅಂಗಡಿಗಳಿಗೆ ಹೋದಾಗ ಕಾರ್ತಿಕ್ ಅವರು ಶುಲ್ಕ ಪಡೆದು ಹೋಗಿ ದ್ದಾರೆಂದು ಹಲವು ವರ್ತಕರು ಹಾಗೂ ಉದ್ದಿಮೆದಾರರು ತಿಳಿಸಿದ್ದರು.
ಕಳೆದ ಒಂದು ತಿಂಗಳಿಂದ ಆತ ಕಾರ್ಯಾಚರಣೆ ನಡೆಸುತ್ತಿದ್ದಾನೆ ಎಂಬ ಮಾಹಿತಿ ಅರಿತ ಧನಂಜಯಗೌಡ ಅವರು, ವಂಚಕನ ಪತ್ತೆಗೆ ತಂಡ ರಚಿಸಿ ಶೋಧ ನಡೆಸು ತ್ತಿದ್ದರು. ಇಂದು ಮಧ್ಯಾಹ್ನ ಸೂರ್ಯ ಬೇಕರಿ ಸರ್ಕಲ್‍ನಿಂದ ಅಭಿಷೇಕ್ ಸರ್ಕಲ್‍ಗೆ ಹೋಗುವ ರಸ್ತೆಯ ಸ್ಪಾರ್ಕಲ್ ಮೈಸೂರ್ ಗಿಫ್ಟ್ ಅಂಗಡಿಗೆ ಬಂದು ಟ್ರೇಡ್ ಲೈಸೆನ್ಸ್ ರಿನೀವಲ್ ಹಣಕ್ಕೆ ಬೇಡಿಕೆ ಇಟ್ಟಾಗ ದಾಳಿ ನಡೆಸಿದ ಪಾಲಿಕೆ ಅಧಿಕಾರಿಗಳು ವಂಚಕ ಕಾರ್ತಿಕ್‍ನನ್ನು ರೆಡ್‍ಹ್ಯಾಂಡಾಗಿ ಹಿಡಿದು ಪೊಲೀಸರಿಗೊಪ್ಪಿಸಿದರು.
ಧನಂಜಯಗೌಡ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಹೆಬ್ಬಾಳು ಠಾಣೆ ಪೊಲೀಸರು ಕಾರ್ತಿಕ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪಾಲಿಕೆ ವಲಯ ಕಚೇರಿ ಶೈಲೇಶ್, ಸಿಬ್ಬಂದಿ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.