ಮೈಸೂರು, ನ. 22(ಆರ್‍ಕೆ)- ಚಾಲಕನ ನಿಯಂತ್ರಣ ತಪ್ಪಿದ ಟೊಯೋಟ ಇನ್ನೋವಾ ಕಾರು ಡಿವೈಡರ್‍ಗೆ ಡಿಕ್ಕಿ ಹೊಡೆದು, ಉರುಳಿ ಬಿದ್ದು, ಸುಮಾರು 100 ಮೀಟರ್‍ವರೆಗೆ ಸಾಗಿದೆ. ಈ ಘಟನೆ ಮದ್ದೂರು ಬಳಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಕಾರು ಅಪಘಾತದ ವೇಳೆ ಮದ್ದೂರಿನ ಹೋಟೆಲ್‍ನಲ್ಲಿ ಊಟ ಮಾಡುತ್ತಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿ ಕಾರಿನಲ್ಲಿ ಸಿಲುಕಿದ್ದವರನ್ನು ಸ್ಥಳೀಯರ ಸಹಾಯದಿಂದ ರಕ್ಷಿಸಿ, ಬೇರೊಂದು ಕಾರಿನಲ್ಲಿ ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಿದರು.
ತಲೆಕೆಳಗಾಗಿದ್ದ ಕಾರನ್ನು ಕ್ರೇನ್ ಮೂಲಕ ಎತ್ತಿಸಿ, ಪೊಲೀಸರ ವಶಕ್ಕೊಪ್ಪಿಸಿದ ಪ್ರತಾಪ್ ಸಿಂಹ, ಸಮಯಪ್ರಜ್ಞೆ ಮೆರೆದಿದ್ದಾರೆ. ಆದರೆ, ಅಪಘಾತ ಸ್ಥಳದ ಫೋಟೋ ಸಮೇತ ಕೆಲ ಮಾಧ್ಯಮಗಳಲ್ಲಿ ‘ಪ್ರತಾಪ್ ಸಿಂಹ ಕಾರು ಪಲ್ಟಿಯಾಗಿದೆ’ ಎಂಬ ಸುದ್ದಿ ಬಿತ್ತರವಾಗುತ್ತಿತ್ತು. ತಕ್ಷಣ ಸ್ಪಷ್ಟನೆ ನೀಡಿದ ಸಂಸದರು, ಅಪಘಾತಕ್ಕೀಡಾದ ಕಾರು ನನ್ನದಲ್ಲ, ಪಲ್ಟಿಯಾದ ಕಾರಿನಲ್ಲಿದ್ದವರನ್ನು ರಕ್ಷಿಸಿ, ಕಳುಹಿಸಿದ್ದೇನೆ’ ಎಂದರು.
ಕಾರು ಅಪಘಾತವಾದರೂ, ಯಾರೂ ವಾಹನ ನಿಲ್ಲಿಸದೇ ಹೋಗುತ್ತಿದ್ದರು. ಇಂತಹ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸುವುದು ಮಾನವೀಯ ಧರ್ಮ ಎಂದು ಸಂಸದ ಪ್ರತಾಪ್ ಸಿಂಹ ಜನರಿಗೆ ತಿಳಿ ಹೇಳಿದ್ದಾರೆ.