ಪ್ರಾದೇಶಿಕ ಪಕ್ಷಗಳ ಉಳಿವಿಗೆ ಕುಟುಂಬ ರಾಜಕಾರಣ ಅನಿವಾರ್ಯ
News

ಪ್ರಾದೇಶಿಕ ಪಕ್ಷಗಳ ಉಳಿವಿಗೆ ಕುಟುಂಬ ರಾಜಕಾರಣ ಅನಿವಾರ್ಯ

March 17, 2020

ಬೆಂಗಳೂರು, ಮಾ. 16(ಕೆಎಂಶಿ)-ಪ್ರಾದೇಶಿಕ ಪಕ್ಷಗಳು ಉಳಿದಿರುವುದೇ ಕುಟುಂಬ ರಾಜಕಾರಣದಿಂದ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ವಿಧಾನಸಭೆಯಲ್ಲಿಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಸಂವಿಧಾನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕ ಮಾತ್ರ ಇದಕ್ಕೆ ಹೊರತಾಗಿಲ್ಲ. ಉದಾಹರಣೆಗೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಹರಿಯಾಣ ಸೇರಿದಂತೆ ಅನೇಕ ರಾಜ್ಯಗಳು ಕುಟುಂಬ ರಾಜಕೀಯದಿಂದಲೇ ಪ್ರಾದೇಶಿಕ ಪಕ್ಷಗಳು ಸರ್ಕಾರ ರಚಿಸಿ, ಆಳುತ್ತಿವೆ ಎಂದರು.

ವೈದ್ಯನ ಮಗ, ವೈದ್ಯನಾಗುತ್ತಾನೆ, ನ್ಯಾಯಮೂರ್ತಿ ಮಗ, ವಕೀಲನಾಗಿ ತಂದೆ ಸ್ಥಾನ ಪಡೆಯಲು ಹೋರಾಟ ನಡೆಸು ತ್ತಾನೆ. ರಾಜಕಾರಣಿ ಮಗ ರಾಜಕಾರಣಕ್ಕೆ ಬರುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.

ಮೊದಲು ನಮ್ಮ ಕುಟುಂಬ ರಾಜ ಕಾರಣದ ಬಗ್ಗೆ ಮಾತನಾಡುತ್ತಿದ್ದರು. ಇಂದು ರಾಜ್ಯದ ಎಲ್ಲಾ ಪಕ್ಷಗಳಲ್ಲಿಯು ಕುಟುಂಬದ ಸದಸ್ಯರು ರಾಜಕೀಯ ಪ್ರವೇಶಿಸಿದ್ದಾರೆ.

ಈಗ ಕುಟುಂಬ ರಾಜಕಾರಣದ ಬಗ್ಗೆ ಯಾರೂ ಮಾತನಾಡುವ ಹಾಗಿಲ್ಲ. ಇದರ ಬಗ್ಗೆ ವಸ್ತು ಸ್ಥಿತಿಯನ್ನು ಬಿಡಿಸಿಟ್ಟರೆ, ಸದನ ಎತ್ತ ಕಡೆಯೂ ತಿರುಗುತ್ತದೆ.

ನಮ್ಮ ತಂದೆ ಸಾವಿರಾರು ಕೋಟಿ ರೂ. ಸಂಪಾದಿಸಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿ ದ್ದಾರೆ. ಅವರು ಅದನ್ನು ಸಾಬೀತು ಪಡಿಸಿದರೆ ಇಂದೇ ರಾಜಕೀಯ ನಿವೃತ್ತಿ ಹೊಂದುವುದಾಗಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಸವಾಲು ಹಾಕಿದರು.
2004ರ ವಿಧಾನಸಭಾ ಚುನಾ ವಣೆಯಲ್ಲಿ ದೇವೇಗೌಡರು ರಾಜಾಜಿನಗರದ ಬಡ್ಡಿ ವ್ಯಾಪಾರಿ ಬಳಿ ತಮ್ಮ ಚೆಕ್ ನೀಡಿ, ಹತ್ತು ಲಕ್ಷ ರೂ. ಸಾಲ ಪಡೆದು, ಚುನಾವಣೆ ನಡೆಸಿದರು ಎಂದಾಗ ಬಿಜೆಪಿ ಸದಸ್ಯರು ಅವರ ಹೇಳಿಕೆಯನ್ನು ಮೂದಲಿಸಿದರು.

ಆ ಕಾಲದಲ್ಲಿ ಸ್ಪರ್ಧಿಗಳಿಗೆ ಸ್ವಲ್ಪ ಹಣ ನೀಡಿದರೆ, ವಿಧಾನಸಭಾ ಪ್ರವೇಶಿಸುತ್ತಿದ್ದರು. ಆದರೆ ಇಂದು ನಿಮ್ಮಂತಹವರು ಕೋಟಿ ಹಣ ಸುರಿದು ಸುರಿದು, ಆ ವ್ಯವಸ್ಥೆಯನ್ನೇ ಹಾಳು ಮಾಡಿದ್ದೀರಿ. ಇದರ ಬಗ್ಗೆ ಬಿಡಿಸಿಡಲಾ ಎಂದಾಗ ಯಾರೂ ಉಸಿರು ಬಿಡಲಿಲ್ಲ.

ಇತ್ತೀಚೆಗೆ ಬರುತ್ತಿರುವ ಅನಾಮ ಧೇಯ ಪತ್ರಗಳ ಬಗ್ಗೆ ಮಾತನಾಡಿದ ಕುಮಾರಸ್ವಾಮಿಯವರು ಈ ಬಗ್ಗೆ ನೀವೇನು ಹೇಳುತ್ತೀರಿ ಎಂದು ಆಡಳಿತ ಪಕ್ಷದ ಸದಸ್ಯರನ್ನು ಪ್ರಶ್ನಿಸಿದರು, ಅದಕ್ಕೂ ಯಾರಿಂದಲೂ ಉತ್ತರ ಬರಲಿಲ್ಲ.

ದೇವೇಗೌಡರ ರಾಜಕೀಯವೇ ಬೇರೆ, ನನ್ನ ರಾಜಕೀಯವೇ ಬೇರೆ. ಅವರು ಈಗಲೂ ಭ್ರಷ್ಟರಹಿತ ವ್ಯಕ್ತಿ. ನನ್ನದು ಬಿಡಿ, ನಿಮ್ಮ ರೀತಿಯೇ ನಾನೂ ಮಾಡಿದ್ದೇನೆ. ಜನರನ್ನು ಸಂಪಾದಿಸಿದ್ದೇನೆ, ಆಸ್ತಿಯನ್ನೂ ಮಾಡಿದ್ದೇನೆ ಎಂದು ಘಂಟಾಘೋಷ ವಾಗಿ ಹೇಳಿಕೊಂಡರು.

ಯತ್ನಾಳ್ ಅವರು ಆರೋಪ ಮಾಡಿರುವುದು ಸರಿಯಲ್ಲ. ಹಗುರವಾಗಿ ಮಾತನಾಡಬಾರದು. ನಿಮ್ಮ (ಬಿಜೆಪಿ) ಸರ್ಕಾರ ಬಂದ 24 ಗಂಟೆಯಲ್ಲಿ ವರ್ಗಾವಣೆಯಾಗಿದೆ. ನಾನು ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದಾಗ ಆಫರ್ ಕೊಟ್ಟಿದ್ದವರನ್ನು ಹೊರಗೆ ಕಳುಹಿಸಿದ್ದೇನೆ. ನೀವು ಆ ಸಂಸ್ಥೆಯನ್ನು ಉಳಿಸುತ್ತೀರಾ ಎಂದು ಪ್ರಶ್ನೆ ಮಾಡಿದ್ದೆ. ಈಗ ಅವರು ಎಲ್ಲೆಲ್ಲಿ ಇದ್ದಾರೆ ಎಂಬುದು ಗೊತ್ತಿದೆ ಎಂದರು.

ಚುನಾವಣೆ ವಿಚಾರ ಪ್ರಸ್ತಾಪಿಸಿದ ಅವರು, ಕರ ಪತ್ರ ಹಂಚಲು ಕರೆದರೆ ಮೂಲೆಗೆ ಎಸೆಯುತ್ತಾರೆ. ಗರಿಗರಿ ನೋಟು ಎಲ್ಲಿ ಎಂದು ಕೇಳುವ ಪ್ರಶ್ನೆ ಇದೆ. ಬೂತ್ ಖರ್ಚಿಗೆ ಎಷ್ಟು ಹಣ ಕೊಡುತ್ತೀರಿ ಎಂದು ಕೇಳುವಂತಾಗಿದೆ. ಚುನಾವಣೆ ಗೆಲ್ಲುವ ಕಡೆಗೆ ನಮ್ಮ ಚಿಂತನೆಯಲ್ಲಿ ಇದ್ದೇವೆ. ವ್ಯವಸ್ಥೆಯನ್ನು ಸರಿಪಡಿಸ ಬೇಕೆಂದೇ ನಾವು ಎಡವುತ್ತಿದ್ದೇವೆ ಎಂದರು.

ಸಂವಿಧಾನದ ನಾಲ್ಕು ಅಂಗಗಳು, ಸಂವಿಧಾನ ಆಶಯಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಎಡವಿದ್ದೇವೆ ಎಂಬ ಆತಂಕ ಕಾಡುತ್ತಿದೆ. ಶಾಂತಿ ಯುತವಾಗಿ ಸ್ವಾತಂತ್ರ್ಯ ಬಂದರೂ ಲಕ್ಷಾಂತರ ಅಮಾಯಕರ ಬಲಿದಾನವೂ ಆಗಿದೆ. ಸಿಎಎ ಮತ್ತು ಎನ್‍ಆರ್‍ಸಿ ವಿಚಾರದಲ್ಲಿ ಲಕ್ಷಾಂತರ ಕುಟುಂಬಗಳ ಜತೆ ಚೆಲ್ಲಾಟವಾಡಬಾರದು. ಧರ್ಮಾ ಧಾರಿತ ಪೌರತ್ವ ಬೇಡ ಎಂದು ಹೇಳಿದರು.

Translate »