ಬೆಂಗಳೂರು, ಸೆ. 21- ಕೃಷಿ ಮಸೂದೆಗಳ ವಿರುದ್ಧ ರೈತರು ರೊಚ್ಚಿಗೆದ್ದಿದ್ದಾರೆ. ವಿಧಾನಮಂಡಲ ಅಧಿವೇಶನ ಆರಂಭವಾದ ಸೋಮವಾರ ಬೆಂಗಳೂರಿನಲ್ಲಿ ಜಾಥಾ ನಡೆಸಿದ ರೈತರು, ಅಹೋ-ರಾತ್ರಿ ಧರಣಿ ಆರಂಭಿಸಿದ್ದಾರೆ. ಹೋರಾಟದ ನೇತೃತ್ವ ವಹಿಸಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಸೆ.25ರಂದು ಕರ್ನಾಟಕ ಬಂದ್ ಕರೆ ನೀಡುವ ಬಗ್ಗೆ ಮಂಗಳವಾರ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬೆಂಗಳೂರು ಕೆಂಪೇಗೌಡ ರೈಲ್ವೆ ನಿಲ್ದಾಣದಿಂದ ಇಂದು ಬೆಳಿಗ್ಗೆ ಸಾವಿರಾರು ರೈತರು ಸರ್ಕಾರ ಮಂಡಿಸಿರುವ ಕೃಷಿ ಮಸೂದೆ ವಿರುದ್ಧ ಘೋಷಣೆ ಕೂಗುತ್ತಾ ಜಾಥಾ ಹೊರಟರು. ಕೆಲವರು ಉರುಳು ಸೇವೆ ಮಾಡಿದರು. ಫ್ರೀಡಂ ಪಾರ್ಕ್ ತಲುಪಿದ ರೈತರು, ಅಹೋ-ರಾತ್ರಿ ಧರಣಿ ಆರಂಭಿಸಿದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ರಾಷ್ಟ್ರೀಯ ರೈತ ಸಂಘಟನೆಯೊಂದು ಸೆ.25ಕ್ಕೆ ‘ಭಾರತ್ ಬಂದ್’ಗೆ ಕರೆ ನೀಡಿದೆ. ಅಂದು ಕರ್ನಾಟಕದಲ್ಲೂ ಬಂದ್ ಆಚರಿಸಬೇಕೇ ಎಂಬುದರ ಬಗ್ಗೆ ಮಂಗಳವಾರ ಬೆಳಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ಸರ್ಕಾರ ಮಂಡಿಸಿರುವ ಕೃಷಿ ಮಸೂದೆಗಳನ್ನು ಕೈಬಿಡುವಂತೆ ಆಗ್ರಹಿಸಿ, ವಿಧಾನಮಂಡಲ ಅಧಿವೇಶನ ಮುಗಿಯುವವರೆಗೂ ಅಹೋ-ರಾತ್ರಿ ಧರಣಿ ನಡೆಸಲಾಗುವುದು. ನಮ್ಮ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಮುಂಬೈ-ಕರ್ನಾಟಕ ಸಂಘಟನೆ ಗಳು ಹಾಗೂ ಬೆಂಗಳೂರು ಮೂಲದ ಸಂಘಟನೆಗಳ ಬೆಂಬಲ ಪಡೆಯಲಾಗುವುದು ಎಂದ ಅವರು, ಮಂಗಳವಾರ ಬೆಳಗ್ಗೆ ವಿವಿಧ ಸಂಘಟನೆಗಳ ಜೊತೆ ಚರ್ಚಿಸಿದ ನಂತರ ಸೆ.25ರಂದು ಕರ್ನಾಟಕ ಬಂದ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.