ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು, ಗ್ರಾಪಂ ನೌಕರರು ಪ್ರತಿಭಟನೆ
ಮೈಸೂರು

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು, ಗ್ರಾಪಂ ನೌಕರರು ಪ್ರತಿಭಟನೆ

August 10, 2018

ಮೈಸೂರು:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯುನ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‍ಎಸ್) ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ಜಂಟಿ ಆಶ್ರಯದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಎರಡೂ ಸಂಘಟನೆಯವರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಕೇಂದ್ರ ಸರ್ಕಾರ ಜನವಿರೋಧಿ ಆರ್ಥಿಕ ನೀತಿಗಳನ್ನು ಜಾರಿಗೊಳಿಸುತ್ತಿದೆ. ಕೂಡಲೇ ಇಂತಹ ಧೋರಣೆಯಿಂದ ಹಿಂದೆ ಸರಿದು ರೈತ ಹಾಗೂ ಕಾರ್ಮಿಕ ಪರವಾದ ನೀತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರದ ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಚುನಾವಣೆ ಪೂರ್ವದಲ್ಲಿ ತಾನು ನೀಡಿದ್ದ ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ. ಇದೀಗ ರೈತರು ಹಾಗೂ ಕಾರ್ಮಿಕರಿಗೆ ಕಂಟಕಪ್ರಾಯವಾಗುವಂತಹ ನೀತಿಗಳನ್ನು ಜಾರಿಗೊಳಿಸುತ್ತಿದೆ. ನವ ಉದಾರೀಕರಣದ ಆರ್ಥಿಕ ನೀತಿಗಳನ್ನು ಜಾರಿಗೊಳಿಸಿ ಬಹುರಾಷ್ಟ್ರೀಯ ಕಂಪನಿಗಳು ಹಾಗೂ ದೊಡ್ಡ ಉದ್ಯಮಿಗಳ ಆದಾಯವನ್ನು ಹೆಚ್ಚಿಸಲು ಮುಂದಾಗಿದೆ ಎಂದು ಆರೋಪಿಸಿದರು.

ಡಾ.ಸ್ವಾಮಿನಾಥನ್ ವರದಿಯಂತೆ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ. ಪರಿಣಾಮ ರೈತರ ಆತ್ಮಹತ್ಯೆ ಮುಂದುವರೆಯುವಂತಾಗಿದೆ. ಬಡ ಬಗರ್‍ಹುಕುಂ ಸಾಗುವಳಿದಾರರು ಸಾಗುವಳಿ ಪತ್ರ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ವಲಸೆ ಬರುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ನೀಡುವ ಉದ್ಯೋಗ ಖಾತರಿ ಯೋಜನೆಗೆ ನೀಡುವ ಅನುದಾನವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ ಎಂದು ದೂರಿದರು.
ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಕೇಂದ್ರ ಸರ್ಕಾರ ಪ್ರವೃತ್ತಿ ಮುಂದುವರೆದಿದ್ದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ 7ನೇ ವೇತನ ಆಯೋಗದ ಶಿಫಾರಿಸ್ಸಿನಂತೆ ಕನಿಷ್ಠ 18 ಸಾವಿರ ರೂ. ವೇತನ ನೀಡುವ ವ್ಯವಸ್ಥೆ ಜಾರಿಗೊಳಿಸಿಲ್ಲ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಾರೀಕರಣ ಹೆಚ್ಚಾಗುತ್ತಿದ್ದು, ಪರಿಣಾಮ ಬಡವರು, ಮಧ್ಯಮ ವರ್ಗದವರು ಕಂಗಾಲಾಗಿದ್ದಾರೆ ಎಂದು ಆಪಾದಿಸಿದರು.

ಸಾಲಬಾಧಿತ ರೈತರ ಸಾಲಮನ್ನಾ ಮಾಡಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಲು ಕ್ರಮ ಕೈಗೊಳ್ಳಬೇಕು. ರೈತರು, ಕೂಲಿಕಾರರು, ಕಾರ್ಮಿಕರಿಗೆ ತಲಾ 5 ಸಾವಿರ ರೂ. ಮಾಸಿಕ ಪಿಂಚಣಿ ನೀಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕ್ಕೆ ಕೈ ಹಾಕಬಾರದು ಎಂದು ಒತ್ತಾಯಿಸಿದರು.

ಜಿಲ್ಲೆಯ ಗ್ರಾಪಂ ನೌಕರರ ಬೇಡಿಕೆಗಳು: ಸರ್ಕಾರದ ಆದೇಶದಂತೆ ಇಎಫ್‍ಎಂಎಸ್‍ನಲ್ಲಿ ಸ್ವಚ್ಛತಾಗಾರರು, 2ನೇ ಬಿಲ್ ಕಲೆಕ್ಟರ್, ಗುಮಾಸ್ತ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್, ಪಂಪ್ ಆಪರೇಟರ್‍ಗಳ ಮಾಹಿತಿಗಳನ್ನು ಸೇರಿಸಬೇಕು. ಸರ್ಕಾರದ ವೇತನ ಪಡೆಯುವ ಸಿಬ್ಬಂದಿ ಬೇರೆ ಹಾಗೂ ಗ್ರಾಪಂ ನಿಧಿಯಿಂದ ವೇತನ ಪಡೆಯುವ ಸಿಬ್ಬಂದಿ ಬೇರೆ ಎಂಬ ಆದೇಶ ಹಿಂಪಡೆಯಬೇಕು. ಎಸ್‍ಎಸ್‍ಎಲ್‍ಸಿ ತೇರ್ಗಡೆಗೊಂಡು 10 ವರ್ಷಗಳು ಸೇವೆ ಸಲ್ಲಿಸಿದ ಬಿಲ್ ಕಲೆಕ್ಟರ್‍ಗಳಿಗೆ ಗ್ರೇಡ್-2 ಕಾರ್ಯದರ್ಶಿ ಬಡ್ತಿಯನ್ನು ಮತ್ತೆ ನೀಡಲು ಕ್ರಮ ಕೈಗೊಳ್ಳಬೇಕು. ಪಿಂಚಣಿ, ವೈದ್ಯಕೀಯ ವೆಚ್ಚ, ಉಪಧನದ ಸೌಲಭ್ಯ ಕಲ್ಪಿಸಬೇಕು. ಅಪರ ಕಾರ್ಯದರ್ಶಿಯಾಗಿದ್ದ ಎಂ.ಎಸ್.ಸ್ವಾಮಿ ಅವರ ವರದಿಯ ಶಿಫಾರಸ್ಸಿನಂತೆ ಜನಸಂಖ್ಯೆಗೆ ಅನುಗುಣವಾಗಿ ಗ್ರಾಪಂಗಳ ಅವಶ್ಯಕತೆ ಪೂರಕವಾಗಿ ವಿವಿಧ ಹುದ್ದೆಗಳನ್ನು ಸೃಷ್ಟಿಸಬೇಕು. ಎಲ್ಲಾ ನೌಕರರಿಗೆ ಕನಿಷ್ಠ 18 ಸಾವಿರ ರೂ. ವೇತನ ನೀಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚಿಕ್ಕಣೇಗೌಡ, ಪ್ರಧಾನ ಕಾರ್ಯದರ್ಶಿ ಜಗದೀಶ್ ಸೂರ್ಯ, ಸಿಐಟಿಯು ಜಿಲ್ಲಾಧ್ಯಕ್ಷ ಎನ್.ಕೆ.ಬಾಲಾಜಿರಾವ್, ಪ್ರಧಾನ ಕಾರ್ಯದರ್ಶಿ ಜಿ.ಜಯರಾಂ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಬಸವರಾಜು, ಖಜಾಂಚಿ ಲೋಕೇಶ್, ಕಾರ್ಯದರ್ಶಿ ಟಿ.ಎಸ್.ದಿನೇಶ್ ಸೇರಿದಂತೆ ಸಂಘಟನೆಗಳ ರೈತರು, ಗ್ರಾಪಂ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »