ಅ.23ರಂದು ಡಿಸಿ ಕಚೇರಿ ಎದುರು ರೈತ ಸಂಘದ ಪ್ರತಿಭಟನೆ
ಮೈಸೂರು

ಅ.23ರಂದು ಡಿಸಿ ಕಚೇರಿ ಎದುರು ರೈತ ಸಂಘದ ಪ್ರತಿಭಟನೆ

October 21, 2020

ಮೈಸೂರು,ಅ.20(ಪಿಎಂ)-ರಾಜ್ಯದ ಬರ ಮತ್ತು ಅತಿ ವೃಷ್ಟಿ ಸಂದರ್ಭದಲ್ಲೂ ಪರಿಹಾರ ನೀಡದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ ಎಂದು ಆರೋಪಿಸಿದ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸರ್ಕಾರ ಗಳ ಈ ನಡೆ ಖಂಡಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅ.23ರಂದು ಪ್ರತಿಭಟನೆ ನಡೆಸಲಾಗುವುದು ಎಂದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳ ವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಅಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಎಲ್ಲಾ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಖಂಡನಾ ನಿರ್ಣಯಗಳನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ತಲುಪಿಸಲಾಗುವುದು ಎಂದರು. ಸತತ 3 ವರ್ಷಗಳಿಂದ ರಾಜ್ಯದ ವಿವಿಧ ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಿವೆ. ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಭಿಕ್ಷೆ ರೂಪದ ಪರಿಹಾರ ಒದಗಿಸುವ ಎನ್‍ಡಿಆರ್‍ಎಫ್ ಮಾರ್ಗಸೂಚಿ ಬದಲಿಸಬೇಕು. ಫಸಲು ನಷ್ಟವಾದ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡಬೇಕು. ಮನೆ ಕಳೆದು ಕೊಂಡವರಿಗೆ ಮನೆ ನಿರ್ಮಿಸಿಕೊಡಬೇಕು. ಪ್ರವಾಹ ದಿಂದ ಹಾನಿಗೊಳಗಾದ ಕೃಷಿಭೂಮಿಯನ್ನು ಮತ್ತೆ ವ್ಯವ ಸಾಯ ಯೋಗ್ಯವಾಗಿಸಬೇಕು ಎಂದು ಒತ್ತಾಯಿಸಿದರು.

ನೆರೆಯಿಂದ ನಷ್ಟ ಅನುಭವಿಸಿರುವ ರೈತರ ಕೃಷಿ ಸಾಲ ವನ್ನು ಸಂಪೂರ್ಣ ಮನ್ನಾ ಮಾಡುವ ಜೊತೆಗೆ ಬಡ್ಡಿ ರಹಿತ ಸಾಲ ನೀಡಬೇಕು. ಕಬ್ಬಿನ ಬಾಕಿಯನ್ನು ಕೂಡಲೇ ಪಾವತಿ ಮಾಡಬೇಕು. ಬೆಳೆ ವಿಮೆ ಪರಿಹಾರ ಹಾಗೂ ಇನ್‍ಪುಟ್ ಸಬ್ಸಿಡಿಯನ್ನು ರೈತರ ಖಾತೆಗೆ ಕೂಡಲೇ ಜಮಾ ಮಾಡಬೇಕು. ಪ್ರವಾಹ ಪೀಡಿತ ಪ್ರದೇಶದ ವಿದ್ಯಾರ್ಥಿಗಳ ಶಾಲಾ-ಕಾಲೇಜು ಶುಲ್ಕವನ್ನು ಸರ್ಕಾ ರವೇ ಭರಿಸಬೇಕು ಎಂದು ಆಗ್ರಹಿಸಿದರು.

ನೈಜ ರೈತರು ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋ ಧಿಸುತ್ತಿಲ್ಲ ಎಂಬ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಹೇಳಿಕೆಗೆ, ಸದಾನಂದಗೌಡರು ವ್ಯವಸಾಯ ಮಾಡಿದವರಲ್ಲ. ಬಿಜೆಪಿ ಪಕ್ಷಕ್ಕೇ ಕೃಷಿ ಸಂಸ್ಕøತಿ ಗೊತ್ತಿಲ್ಲ. ಸುಳ್ಳು ಹೇಳುವ ಸಂಸ್ಕøತಿ ಅವರದು ಎಂದು ಜರಿದರು.

ಪ್ರಧಾನಿಯವರು ಕ್ವಿಂಟಾಲ್ ಮುಸುಕಿನ ಜೋಳಕ್ಕೆ 1,850 ರೂ. ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿ ದ್ದಾರೆ. ಆದರೆ ಮಾರುಕಟ್ಟೆಯಲ್ಲಿ 1,200 ರೂ.ಗೆ ಖರೀದಿ ಮಾಡಲಾಗುತ್ತಿದೆ. ಶೇಂಗಾವನ್ನು 5,275 ರೂ. ಬದಲಿಗೆ 4,142 ರೂ.ಗೆ, ರಾಗಿಯನ್ನು 3,295 ರೂ. ಬದಲಿಗೆ 1,850 ರೂ.ಗೆ, ಹತ್ತಿಯನ್ನು 5,515 ರೂ. ಬದಲಿಗೆ 4,400 ರೂ.ಗೆ ಹಾಗೂ ಭತ್ತವನ್ನು 1,868 ರೂ. ಬದಲಿಗೆ 1,595 ರೂ.ಗೆ ಖರೀದಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಸಂಘದ ಜಿಲ್ಲಾಧ್ಯಕ್ಷ ಹೊಸೂರ್ ಕುಮಾರ್ ಮಾತ ನಾಡಿ, ತಂಬಾಕು ಬೆಳೆಗಾರರ ರಕ್ಷಣೆಗೆ ಆವರ್ತನನಿಧಿ ಬಿಡುಗಡೆ ಮಾಡಿ ಲಾಭದಾಯಕ ಬೆಲೆಯಲ್ಲಿ ತಂಬಾಕು ಖರೀದಿಸಲು ಆಗ್ರಹಿಸಿ ಅ.23ರ ಬೆಳಗ್ಗೆ 11ಕ್ಕೆ ಹುಣಸೂರು ಎಸಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವ ರಾಜು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶೆಟ್ಟಹಳ್ಳಿ ಚಂದ್ರೇ ಗೌಡ, ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ ಗೋಷ್ಠಿಯಲ್ಲಿದ್ದರು.

ಬೆಂಬಲ ಬೆಲೆ, ನೆರೆ ಪರಿಹಾರ ನೀಡಲು  ಪಿಎಂ ಖಾತೆಗೇ ಹಣ ಜಮೆ ಅಭಿಯಾನ
ಕನಿಷ್ಠ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಲು, ನೆರೆ ಪರಿಹಾರಕ್ಕೆ ಒತ್ತಾಯಿಸಿ ಪ್ರಧಾನಿ ಖಾತೆಗೆ ರೈತರಿಂದಲೇ ಹಣ ಜಮಾ ಮಾಡಿಸುವ ಅಭಿ ಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನವನ್ನು ವ್ಯಂಗ್ಯ ಎಂದಾದರೂ ತಿಳಿಯಬಹುದು. ಅ.23ಕ್ಕೆ ರಾಜ್ಯಾ ದ್ಯಂತ ಚಾಲನೆ ನೀಡಲಾಗುವುದು. ಕೇಂದ್ರ ಸರ್ಕಾರ ತಾನೇ ಘೋಷಿಸಿದ ಕನಿಷ್ಠ ಬೆಂಬಲ ಬೆಲೆ ದರದಲ್ಲಿ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಅಥವಾ ಸರ್ಕಾರವೇ ಕೃಷಿ ಉತ್ಪನ್ನಗಳನ್ನು ಖರೀದಿಸಲು ಮುಂದಾಗಿಲ್ಲ. ಹೀಗಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

ನರೇಂದ್ರ ಮೋದಿ 2 ಬಾರಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ಆದರೆ ಫೋಷಿ ಸಿರುವ ಬೆಂಬಲ ಬೆಲೆಗಿಂತಲೂ ಕಡಿಮೆ ದರದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ರೈತರ ಉತ್ಪನ್ನಗಳನ್ನು ಖರೀದಿ ಮಾಡಿ, ಲೂಟಿ ಮಾಡಲಾಗುತ್ತಿದೆ. ರೈತರ ಉತ್ಪನ್ನಗಳಿಗೆ ಹೆಚ್ಚು ಬೆಲೆ ದೊರಕಲೆಂಬ ಉದ್ದೇಶ ದಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೊಬ್ಬೆ ಹೊಡೆಯುತ್ತಿವೆ. ಜೊತೆಗೆ ಬಿಜೆಪಿ ಕಾರ್ಯಕರ್ತರು ಪ್ರತಿ ಹಳ್ಳಿಗಳಲ್ಲಿ ಇದನ್ನೇ ಪ್ರಚಾರ ಮಾಡುತ್ತಿದ್ದಾರೆ. ಆದರೆ ರೈತರ ಉತ್ಪನ್ನಗಳು ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದು, ಈ ನಷ್ಟವನ್ನು ರೈತರಿಗೆ ಯಾರು ತುಂಬಿಕೊಡುತ್ತಾರೆ ಎಂದು ಪ್ರಶ್ನಿಸಿದರು.

 

 

Translate »