ಮೀಟರ್ ಅಳವಡಿಸಲು ನಿರ್ಧಾರ
ಸಮರ್ಪಕ ವಿದ್ಯುತ್ ಪೂರೈಕೆ ನೆಪದಲ್ಲಿ ಸದ್ಯದಲ್ಲೇ ಅನ್ನದಾತರಿಗೆ ಶಾಕ್
ಬೆಂಗಳೂರು, ಮೇ ೨೫(ಕೆಎಂಶಿ) -ರಾಜ್ಯದ ಕೃಷಿ ಪಂಪ್‌ಸೆಟ್‌ಗಳಿಗೆ ಒದಗಿಸುತ್ತಿರುವ ಉಚಿತ ವಿದ್ಯುತ್ ಬಂದ್ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಆದರೆ ರೈತರ ಕೋರಿಕೆಯಂತೆ ಕೃಷಿ ಪಂಪ್ ಸೆಟ್‌ಗಳಿಗೆ ಹಗಲು ವೇಳೆ ಮೂರು ಪೇಸ್ ವಿದ್ಯುತ್ ಪೂರೈಕೆ ಮಾಡುವ ತೀರ್ಮಾನಕ್ಕೆ ಬರಲಾಗಿದೆ. ಉಚಿತ ವಿದ್ಯುತ್ ಬಂದ್ ಮಾಡುವ ಮುನ್ನ ಸಮರ್ಪಕ ವಿದ್ಯುತ್ ಸರಬರಾಜಿಗೆ ಅಗತ್ಯವಿರುವ ಟ್ರಾನ್ಸಫಾರ್ಮರ್ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲಾಗುತ್ತದೆ. ಬಳಿಕ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಮಾಡಲು ಇಂಧನ ಸಚಿವ ವಿ.ಸುನಿಲ್ ಕುಮಾರ್ ನಿರ್ಧರಿಸಿದ್ದಾರೆ.
ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಉತ್ಪಾದನೆ ಆಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಇನ್ನು ಮುಂದೆ ಹಗಲು ವಿದ್ಯುತ್ ನೀಡಲು ಯಾವ ತೊಂದರೆಯೂ ಇಲ್ಲ. ಮೀಟರ್ ಅಳವಡಿಸಿದ ನಂತರ ಅತೀ ಕಡಿಮೆ ದರದಲ್ಲಿ ರೈತರಿಗೆ ವಿದ್ಯುತ್ ಕಲ್ಪಿಸಲಾಗುತ್ತದೆ. ಇದಕ್ಕೂ ಮುನ್ನ ಕೆಇಆರ್‌ಸಿ ಒಪ್ಪಿಗೆಯನ್ನು ವಿದ್ಯುತ್ ಸರಬರಾಜು ಕಂಪನಿಗಳು ಪಡೆಯಲಿವೆ. ಅಲ್ಲದೆ, ಮೀಟರ್ ಅಳವಡಿಕೆ ಹಾಗೂ ಶುಲ್ಕ ವಿಧಿಸುವ ಬಗ್ಗೆ ರೈತರು ಹಾಗೂ ತಜ್ಞರೊಂದಿಗೆ ಚರ್ಚೆ ನಡೆಸಿ, ತೀರ್ಮಾನಕ್ಕೆ ಬರಲಾಗುತ್ತದೆ. ರಾಜ್ಯ ದಲ್ಲಿ ೩೬ ಲಕ್ಷ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುತ್ತಿರುವುದರಿಂದ ವಾರ್ಷಿಕ ೨೬ ಸಾವಿರ ಕೋಟಿ ರೂ. ಸರ್ಕಾರಕ್ಕೆ ಹೊರೆ ಯಾಗುತ್ತಿದೆ. ಬಂಗಾರಪ್ಪ ಮುಖ್ಯಮಂತ್ರಿ ಯಾಗಿದ್ದಾಗ ಉಚಿತ ವಿದ್ಯುತ್ ಪೂರೈಕೆ ಪ್ರಾರಂಭಿಸಲಾಯಿತು. ಆಗ ೧೦ ಲಕ್ಷ ಕೃಷಿ ಪಂಪ್ ಸೆಟ್‌ಗಳಿದ್ದವು. ಈಗ ೩೬ ಲಕ್ಷಕ್ಕೇರಿದ್ದು, ಹತ್ತು ಹೆಚ್‌ಪಿವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದಕ್ಕಿಂತ ಮೇಲ್ಪಟ್ಟ ವಿದ್ಯುತ್ ಬಳಸುವ ಕಾಫಿ ತೋಟಗಳಿಗೆ ಶುಲ್ಕ ವಿಧಿಸಲಾಗುತ್ತಿದೆ. ಹಲವು ಬಾರಿ ಕೆಇಆರ್‌ಸಿಯೂ ಶುಲ್ಕ ವಿಧಿಸುವಂತೆ ಸೂಚಿಸಿದ್ದರೂ, ರೈತರಿಗೆ ನೆರವಾಗುವ ಉದ್ದೇಶದಿಂದ ಸಬ್ಸಿಡಿ ನೀಡುವುದಾಗಿ ಸರ್ಕಾರ ಹೇಳುತ್ತಾ ಬರುತ್ತಿದೆ. ಈಗಾಗಲೇ ರಾಜ್ಯದ ಹಲವು ಕಡೆ ಪ್ರತಿ ಪಂಪ್‌ಸೆಟ್‌ಗೆ ಒಂದು ಟಿ.ಸಿ. ಅಳವಡಿಸಲಾಗಿದೆ. ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಈ ವರ್ಷ ಅಗತ್ಯ ಮೂಲಸೌಲಭ್ಯ ಕಲ್ಪಿಸಿ ಮೀಟರ್ ಅಳವಡಿಸುವ ಕಾರ್ಯ ನಡೆಯಲಿದೆ. ಮುಂದಿನ ದಿನಗಳಲ್ಲಿ ಬಳಕೆ ಆಧಾರದಲ್ಲಿ ವಿದ್ಯುತ್ ಶುಲ್ಕ ವಿಧಿಸುವ ಲೆಕ್ಕಾಚಾರವೂ ಸರ್ಕಾರದ್ದಾಗಿದೆ. ಈ ಕ್ರಮ ದಿಂದ ರೈತರಿಗೆ ಹಗಲು ವಿದ್ಯುತ್ ಪೂರೈಕೆ ಆಗುವುದಲ್ಲದೆ, ಅನಗತ್ಯ ಬಳಕೆ ತಪ್ಪಿಸಲು ಸಹಕಾರಿಯಾಗಲಿದೆ. ನೀರಿನ ಮಿತ ಬಳಕೆಯು ಆಗಲಿದೆ. ಕೃಷಿ ಪಂಪ್‌ಸೆಟ್ ಹೆಸರಲ್ಲಿ ವಿದ್ಯುತ್ ಸಂಪರ್ಕ ಪಡೆದು ನಗರ ಪ್ರದೇಶಗಳ ಹೊರವಲಯದಲ್ಲಿ ಬೋರ್ ವೆಲ್ ಕೊರೆಸಿ, ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಿ ದುರ್ಬ ಳಕೆ ಮಾಡಿಕೊಳ್ಳಲಾಗುತ್ತಿದೆ. ಮೀಟರ್ ಅಳವಡಿಕೆಯಿಂದ ಇದನ್ನು ತಡೆಯಲು ಸಾಧ್ಯವಾಗಲಿದೆ ಎಂದು ಚಿಂತನೆ ನಡೆಸಲಾಗಿದೆ.