ಮಗನ ಅಗಲಿಕೆಯ ಆಘಾತದಿಂದ ತಂದೆ ಸಾವು!
ಮೈಸೂರು

ಮಗನ ಅಗಲಿಕೆಯ ಆಘಾತದಿಂದ ತಂದೆ ಸಾವು!

June 16, 2020

ಸೋ.ಪೇಟೆ ಬಳಿ ಹಾನಗಲ್ಲುಶೆಟ್ಟಳ್ಳಿಯಲ್ಲಿ ಮನಕಲಕುವ ಘಟನೆ
ಸೋಮವಾರಪೇಟೆ, ಜೂ.15- ಇಂದಿನ ಜಾಗತಿಕ ಕಾಲಘಟ್ಟದಲ್ಲಿ ಸ್ವಾರ್ಥವೇ ಮೈದುಂಬಿ ಸಂಬಂಧವಂತೂ ಆಸ್ತಿ ವಿಚಾರಗಳಲ್ಲಿ ಬಹುತೇಕ ಮೈಮನಸ್ಸು ಉಂಟಾಗಿ ಪೋಷಕರನ್ನು ಆಶ್ರಮಗಳಿಗೆ ದೂಡುವವರೇ ಹೆಚ್ಚು.

ಇಂತಹ ವಿಷಮ ಪರಿಸ್ಥಿತಿಯಲ್ಲಿ ಮಗನ ಅಗಲಿಕೆ ತಡೆಯಲಾಗದ ತಂದೆ, ಮಗನ ಅಂತ್ಯಕ್ರಿಯೆ ನೆರವೇರಿಸಿ ನಂತರ ಆಘಾತದಿಂದ ತಾವೂ ಇಹಲೋಕ ತ್ಯಜಿಸಿದ ಮನಕಲಕುವ ಘಟನೆ ತಾಲೂಕಿನ ಹಾನಗಲ್ಲು ಶೆಟ್ಟಳ್ಳಿ ನಡೆದಿದೆ.

ಗ್ರಾಮದ ಶಿವಪ್ಪ(72) ಹಗೂ ಅವರ ಪುತ್ರ ರಮೇಶ್(38) ಸಾವನ್ನಪ್ಪಿದವರು. ರಮೇಸ್ ಆರೋಗ್ಯ ಸಮಸ್ಯೆಯಿಂದ ಭಾನುವಾರ ಮೃತಪಟ್ಟಿದ್ದರು. ಇಂದು ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಆದರೆ, ಮಗನ ಅಗಲಿಕೆಯಿಂದ ನೊಂದಿದ್ದ ಶಿವಪ್ಪ ಚಿಂತೆಗೀಡಾಗಿದ್ದರು. ಇಂದು ಸಂಜೆ ಆಘಾತದಿಂದ ಅವರು ಕೂಡ ನಿಧನರಾಗಿದ್ದಾರೆ. ಪತಿ ಹಾಗೂ ಮಗನನ್ನು ಏಕ ಕಾಲದಲ್ಲಿ ಕಳೆದುಕೊಂಡ ಗೃಹಿಣಿಯ ರೋಧನ ನೆರೆದವರ ಮನಕಲಕುತ್ತಿತ್ತು. ನಂತರ ಮಗನ ಚಿತೆಯ ಬಳಿಯೇ ತಂದೆಯ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು.

ಸಂಬಂಧಗಳೇ ದೂರಾಗುತ್ತಿರುವ ಇಂತಹ ಸಂದರ್ಭದಲ್ಲಿ ಇವರು ಸಂಬಂಧಗಳ ಮೌಲ್ಯತೆಗೆ ಮಾದರಿಯಾಗಿದ್ದಾರೆ. ಈಗೇ ಕೆಲ ವರ್ಷಗಳ ಹಿಂದೆ ಚಾಮರಾಜನಗರದಲ್ಲಿ ಉಪನ್ಯಾಸಕ ವಿ.ವೆಂಕಟರಾಮ್ ಎಂಬುವರ ತಾಯಿ ಸಾವಿನ ಆಘಾತಗೊಂಡು ತಾಯಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಅಲ್ಲೇ ಪ್ರಾಣ ಬಿಟ್ಟಿದ್ದರು ಹಾಗೂ ಇದೇ ಚಾಮರಾಜನಗರದ ಹಳೇ ಬಸ್‍ನಿಲ್ದಾಣ ಬಳಿಯಿದ್ದ ಶಿಕ್ಷಕ ಅನಂತರಾಮಯ್ಯ ಅವರು ವಯೋಸಹಜವಾಗಿ ಮೊದಲನೇ ಶ್ರಾವಣ ಶನಿವಾರ ದಿನ ಮೃತಪಟ್ಟಿದ್ದು, ತಂದೆಯ ಅಂತ್ಯಕ್ರಿಯೆ ನೆರವೇರಿಸಿದ್ದ ಪುತ್ರ ನಾಗಶಯನ ಅವರು ತಂದೆಯ ಅಗಲಿಕೆಯ ನೋವನ್ನು ತಾಳಲಾರದೆ ಅದೇ ತಿಂಗಳ ಕೊನೆಯ ಶ್ರಾವಣ ಶನಿವಾರದ ದಿನ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »