ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಬೆಟ್ಟ ಕುಸಿತದ ಆತಂಕ
ಕೊಡಗು

ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಬೆಟ್ಟ ಕುಸಿತದ ಆತಂಕ

August 11, 2022

ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ರಾತ್ರಿ ವೇಳೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಕರ್ತೋಜೆ ಬಳಿ ಭಾರೀ ಬೆಟ್ಟ ಕುಸಿಯುವ ಆತಂಕ ಇರುವ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನಿಗಳು ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ. ಮದೆನಾಡು ಭಾಗದಲ್ಲಿ ಮಳೆ ಮುಂದುವರೆದಿರುವ ಕಾರಣ ಯಾವ ಕ್ಷಣದಲ್ಲಾದರೂ ಬೆಟ್ಟ ಬಿರುಕು ಬಿಟ್ಟ ಪ್ರದೇಶ ಕುಸಿಯುವ ಸಾಧ್ಯತೆ ಇದೆ. ಈ ಕಾರಣ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಆ.10ರಿಂದ ಜಾರಿಗೆ ಬರುವಂತೆ ರಾತ್ರಿ 8.30 ಗಂಟೆಯಿಂದ ಬೆಳಗಿನ 6.30ರವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಆದೇಶ ಹೊರಡಿಸಿದ್ದಾರೆ. ಈ ನಿರ್ಬಂಧ ಆ.12ರ ರಾತ್ರಿ 8.30ರಿಂದ ಬೆಳಗಿನ 6.30ರವರೆಗೂ ಜಾರಿಯಲ್ಲಿರಲಿದೆ.

ಮಡಿಕೇರಿ,ಆ.10- ಕೊಡಗಿನಾದ್ಯಂತ ಆಶ್ಲೇಷ ಮಳೆಯ ತೀವ್ರತೆ ಇಳಿಮುಖವಾಗುತ್ತಿರುವ ಹಂತದಲ್ಲೆ ಭಾರೀ ಗುಡ್ಡ ಕುಸಿತದ ಆತಂಕ ಕಂಡು ಬರುತ್ತಿದೆ. ಮದೆ ಗ್ರಾಮದ ಕರ್ತೋಜಿ ಯಲ್ಲಿ ದಿನದ ಹಿಂದೆಯಷ್ಟೆ ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಬೆಟ್ಟದಲ್ಲಿ ಭಾರೀ ಬಿರುಕು ಮೂಡಿತ್ತು. ಈ ಹಿನ್ನೆಲೆ ಬೆಟ್ಟ ಬಿರುಕು ಬಿಟ್ಟ ಪ್ರದೇಶದಲ್ಲಿ ಅಗತ್ಯ ಬಂದೋಬಸ್ತ್ ಏರ್ಪಡಿಸಲಾಗಿದ್ದು, ತೀವ್ರ ನಿಗಾವಹಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.
ಸ್ಥಳದಲ್ಲೇ 2 ಬೃಹತ್ ಹಿಟಾಚಿ ಯಂತ್ರಗಳು, ಟಿಪ್ಪರ್ ಲಾರಿಗಳನ್ನು ಸನ್ನದ್ದ ಸ್ಥಿತಿಯಲ್ಲಿರಿಸ ಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‍ಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಅವಲೋಕಿಸುತ್ತಿದ್ದಾರೆ. ವಾಹನ ಸಂಚಾರ ಅಪಾಯ ಎದುರಾಗದಂತೆ ತಡೆಯಲು ರಸ್ತೆಯ ಎರಡೂ ಬದಿಗಳಲ್ಲಿ ಪೊಲೀಸ್ ಸಿಬ್ಬಂದಿ ಗಳನ್ನು ನಿಯೋಜನೆ ಮಾಡಲಾಗಿದೆ.

ಕುಸಿದ ಮನೆ: ಮದೆ ಗ್ರಾಮ ಪಂಚಾಯ್ತಿ ವ್ಯಾಪ್ತಿ ಬೆಟ್ಟತ್ತೂರು ಗಾಮದ ಆನಂದ ಎಂಬವರ ಮನೆ ಭಾರೀ ಗಾಳಿ ಮಳೆಯ ಹಿನ್ನೆಲೆ ಕುಸಿದು ಬಿದ್ದು ಹಾನಿ ಸಂಭವಿಸಿದ್ದರೆ, ಸೋಮವಾರ ಪೇಟೆ ಹೋಬಳಿ ಯಡೂರು ಗ್ರಾಮದ ರಾಣಿ ಎಂಬುವರ ಮನೆಯ ಪಾಶ್ರ್ವ ಕುಸಿದು ಹಾನಿ ಯಾಗಿದೆ. ಮಾದಾಪುರ ಬಳಿಯ ಮುಖ್ಯ ರಸ್ತೆಯಲ್ಲಿ ಸಣ್ಣ ಪ್ರಮಾಣದ ಬರೆ ಕುಸಿತ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ಮನೆಗುರುಳಿದ ಮರ: ಸುಂಟಿಕೊಪ್ಪ ಬಳಿಯ ಕಂಬಿಬಾಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅತ್ತೂರು ನಲ್ಲೂರು ಗ್ರಾಮದ ನಿವಾಸಿ ಅಕ್ಕಮ್ಮ ರೈ ಎಂಬವರ ಮನೆಯ ಮೇಲೆ ಭಾರೀ ಗಾತ್ರದ ಮರ ಉರುಳಿ ಬಿದ್ದಿದೆ. ಪರಿಣಾಮ ಮೇಲ್ಚಾವಣಿ ಸೇರಿದಂತೆ ಗೋಡೆ ಹಾಗೂ ಗೃಹೋಪಯೋಗಿ ವಸ್ತುಗಳು ಹಾನಿಗೊಂಡಿರುವ ಬಗ್ಗೆ ವರದಿಯಾಗಿದೆ.ಮಳೆ ಹಾಗೂ ಗಾಳಿಯ ರಭಸಕ್ಕೆ ಮನೆಯ ಮೇಲೆ ಮಂಗಳವಾರ ರಾತ್ರಿ 9.30ರ ಸಂದರ್ಭ ದಲ್ಲಿ ಮರ ಬಿದ್ದಿದ್ದು, ಅದೃಷ್ಟವಶಾತ್ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಮಲಗುವ ಕೋಣೆಯ ಮಂಚದ ಮೇಲೆ ಮರದ ರೆÀಂಬೆ, ಹೆಂಚುಗಳು ಬಿದ್ದಿದ್ದು ಮನೆಯಲ್ಲಿದ್ದ ಅಕ್ಕಮ್ಮ ರೈ ಹಾಗೂ ಅವರ ಪುತ್ರ ವಿಶ್ವನಾಥ ರೈಗೆ ಯಾವುದೇ ಹಾನಿಯಾಗಿಲ್ಲ. ಸುಂಟಿಕೊಪ್ಪ ನಾಡ ಕಚೇರಿಯ ಕಂದಾಯ ಪರಿವೀಕ್ಷಕ ಪ್ರಶಾಂತ್ ಹಾಗೂ ಗ್ರಾಮ ಲೆಕ್ಕಿಗ ನಸೀಮ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Translate »