ಕೃಷಿ ಇಲಾಖೆ ಕಚೇರಿಗೆ ಸುತ್ತಿ ಸುತ್ತಿ ಸುಸ್ತಾಯ್ತು!
ಮೈಸೂರು

ಕೃಷಿ ಇಲಾಖೆ ಕಚೇರಿಗೆ ಸುತ್ತಿ ಸುತ್ತಿ ಸುಸ್ತಾಯ್ತು!

October 15, 2020

ಮೈಸೂರು, ಅ.14(ಆರ್‍ಕೆಬಿ)- ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿರುವ ರೈತರ ಸಂಕಷ್ಟಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಸಾವಯವ ಕೃಷಿಕ ಬ್ಯಾತಹಳ್ಳಿ ಬಿ.ಎಸ್. ಮಾದಪ್ಪ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸಂಕಷ್ಟದಲ್ಲಿರುವ ರೈತರು ಯಾವುದೇ ಸಲಹೆ ಪಡೆಯಲು ಅಥವಾ ಮಾಹಿತಿ ಪಡೆಯಲು ಹೋದರೆ ಅಧಿಕಾರಿಗಳು ಅನಗತ್ಯವಾಗಿ ಅಲೆದಾಡಿಸುತ್ತಿದ್ದಾರೆ. ರೈತರಿಗೆ ನೆರವಿನ ಹಸ್ತ ಚಾಚಬೇಕಾದ ಕೃಷಿ, ವಿದ್ಯುತ್, ನೀರಾವರಿ ಸೇರಿದಂತೆ ಬಹುತೇಕ ಇಲಾಖೆಗಳ ಅಧಿಕಾರಿಗಳು ರೈತರ ಯಾವುದೇ ಸಮಸ್ಯೆಗೂ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿ ಗೋಷ್ಠಿ ನಡೆಸಿದ ಅವರು, ತಮಗಾಗಿರುವ ತೊಂದರೆಗಳನ್ನು ಎಳೆಎಳೆಯಾಗಿ ವಿವರಿಸಿದರು. ಇಂದು ಸಾವಯವ ಕೃಷಿ ಕೈಗೊಳ್ಳು ವುದೆಂದರೆ ಬಹಳ ಕಷ್ಟದ ಕೆಲಸ. `ಸಾವಯವ ಕೃಷಿಗೆ ಆದ್ಯತೆ ನೀಡಿ’ ಎಂದು ಸರ್ಕಾರವೇನೋ ಹೇಳುತ್ತದೆ. ಆದರೆ ಅಧಿಕಾರಿ ಗಳು ಮಾತ್ರ ಸಹಕಾರ ನೀಡುತ್ತಿಲ್ಲ. ರೈತರ ಬೆಳೆಗಳು ಕಾಡು ಪ್ರಾಣಿಗಳ ಪಾಲಾಗುತ್ತಿದ್ದರೂ ದೂರು ನೀಡಿದರೆ ಅಧಿಕಾರಿಗಳು ಗಮನಕ್ಕೇ ತೆಗೆದುಕೊಳ್ಳುತ್ತಿಲ್ಲ. ರೈತರಿಗೆ ಯಾವುದೇ ಇಲಾಖೆ ಯಿಂದ ಸಹಕಾರ, ನೆರವು, ರಕ್ಷಣೆ ಸಿಗುತ್ತಿಲ್ಲ. ಅಧಿಕಾರಿಗಳು ರೈತರ ತಾಳ್ಮೆ ಪರೀಕ್ಷಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇರುವಷ್ಟು ಭೂಮಿಯಲ್ಲಿ ನಾನು ಕಷ್ಟಪಟ್ಟು ಕಬ್ಬು, ಬಾಳೆ ಇತರೆ ಬೆಳೆ ತೆಗೆದಿದ್ದೇನೆ. ಆನೆ, ಹಂದಿ ಮೊದಲಾದ ಕಾಡುಪ್ರಾಣಿಗಳು ಕಬ್ಬು ನಾಶ ಮಾಡಿವೆ. ಅಂದಾಜು 25-30 ಸಾವಿರ ರೂ.ಗಳ ಕಬ್ಬು ನಾಶವಾಗಿದೆ. ಬಾಳೆಗೊನೆಗಳು ಕಳ್ಳರ ಪಾಲಾಗುತ್ತಿವೆ. ಇದರ ನಡುವೆ ಚಿರತೆ ಕಾಟ ಬೇರೆ. ಈ ಬಗ್ಗೆ ಅರಣ್ಯ ಮತ್ತು ಪೊಲೀಸ್ ಇಲಾಖೆಗೆ ಅನೇಕ ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಎರಡೂ ಇಲಾಖೆಗಳ ಅಧಿಕಾರಿಗಳು ನಮ್ಮ ಬಳಿಗೆ ಬರುವುದಿರಲಿ, ನಾವೇ ಅವರ ಕಚೇರಿಗೆ ಅಲೆದರೂ ಸರಿಯಾಗಿ ಪ್ರತಿಕ್ರಿಯಿಸುವುದೇ ಇಲ್ಲ. ಸ್ವಲ್ಪವಾದರೂ ನಮ್ಮ ಸಮಸ್ಯೆಗಳನ್ನು ಆಲಿಸುವ ತಾಳ್ಮೆ ಅವರಿಗಿಲ್ಲ. ಹೀಗೇಕೆ ಎಂದು ಪ್ರಶ್ನಿಸಿದರೆ ಅವರಿಂದ ಕೋವಿಡ್-19 ನೆಪದ ರೆಡಿಮೇಡ್ ಉತ್ತರ ಸಿಗುತ್ತಿದೆ ಎಂದು ಅಳಲು ತೋಡಿಕೊಂಡರು.

ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ನಮ್ಮ ಕುಟುಂಬ ಕಷ್ಟಪಟ್ಟು ಕೃಷಿ ಚಟುವಟಿಕೆ ನಡೆಸುತ್ತಿದೆ. ನನಗಂತೂ ಕಚೇರಿಗಳಿಗೆ ಅಲೆದೂ ಅಲೆದೂ ಸುಸ್ತಾಗಿದೆ. ವಯಸ್ಸಾಗಿರುವ, ಕಾಯಿಲೆಗಳಿಂದ ಬಳಲಿ ರುವ ನಮ್ಮನ್ನೇ ಇಷ್ಟು ಅಲೆಸುವ ಈ ಅಧಿಕಾರಿಗಳಿಗೆ ಸ್ವಲ್ಪವಾ ದರೂ ಮಾನವೀಯತೆ ಇಲ್ಲ ಎಂದು ಬೇಸರದಿಂದ ನುಡಿದರು.

ಕೃಷಿ, ಅರಣ್ಯ ಇಲಾಖೆಯ ಸಹಕಾರ ಇಲ್ಲದ ನಮಗೆ ಕನಿಷ್ಠ ಪಕ್ಷ ವಿದ್ಯುತ್ ಇಲಾಖೆಯವರಾದರೂ ಸಹಕಾರ ನೀಡುತ್ತಿಲ್ಲ. ಟ್ರಾನ್ಸ್‍ಫಾರ್ಮರ್ ಸುಟ್ಟುಹೋದರೆ ಅದನ್ನು ದುರಸ್ತಿಪಡಿಸುವು ದಿಲ್ಲ. ಬೆಳೆ ಸಾಲ ಮಾಡಿ ಹಾಕಿರುವ ಬಂಡವಾಳದಿಂದ ರೈತರು ಅನ್ಯಾಯಕ್ಕೊಳಗಾಗುತ್ತಿದ್ದಾರೆ. ಇಂಥ ರೈತರಿಗೆ ಯಾವುದೇ ಅನು ಕೂಲಗಳಾಗಲೀ, ಮಾರ್ಗದರ್ಶನವಾಗಲೀ ದೊರೆಯುತ್ತಿಲ್ಲ ಎಂದು ಅಲವತ್ತುಕೊಂಡರು. ಸರ್ಕಾರಿ ಅಧಿಕಾರಿಗಳು ಈಗಲಾದರೂ ರೈತರ ನೆರವಿಗೆ ಬನ್ನಿ ಎಂದು ಮನವಿ ಮಾಡಿದರು. ಸುದ್ದಿ ಗೋಷ್ಠಿಯಲ್ಲಿ ಕೃಷಿಕ ಗಣೇಶ್, ಪ್ರಭು ಉಪಸ್ಥಿತರಿದ್ದರು.

Translate »