ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್  ಸುತ್ತಮುತ್ತ ಹಾಕಿದ್ದ ಬೇಲಿ ತೆರವು
ಮೈಸೂರು

ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಸುತ್ತಮುತ್ತ ಹಾಕಿದ್ದ ಬೇಲಿ ತೆರವು

December 25, 2018

ಮೈಸೂರು: ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ದಿಢೀರ್ ಹಾಕಿದ್ದ ಬೇಲಿಯನ್ನು ಸೋಮವಾರ ಜಿಲ್ಲಾಡಳಿತ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದು, ಕಾರ್ಯಾಚರಣೆಗೆ ಅಡ್ಡಿಪಡಿಸಿದ ವ್ಯಕ್ತಿಯೊಬ್ಬರನ್ನು ಆಲನಹಳ್ಳಿ ಠಾಣೆಯ ಪೊಲೀಸರು ಬಂಧಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ಹೆಲಿಪ್ಯಾಡ್‍ಗೆ ಹೊಂದಿಕೊಂಡಂತೆ 7 ಎಕರೆ ಭೂಮಿಗೆ ಬೇಲಿ ಹಾಕುವ ಕಾರ್ಯವನ್ನು ಕಳೆದ 4 ದಿನಗಳಿಂದ ಮೈಸೂರಿನ ನಿವಾಸಿ ಕೆ.ಮನು ಎಂಬುವರು ನಡೆಸುತ್ತಿದ್ದರು. ಮೀನಾಕ್ಷಿ ಎಂಬುವವರಿಂದ ಜಿಪಿಎ ಹೋಲ್ಡರ್ ಆದ ನಮಗೆ ಈ ಭೂಮಿ ಸೇರಿದೆ ಎಂದು ಫಲಕ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕಳೆದ 2 ದಿನದ ಹಿಂದೆಯೇ ತಹಶೀಲ್ದಾರ್ ಟಿ.ರಮೇಶ್ ಬಾಬು ಸ್ಥಳಕ್ಕೆ ತೆರಳಿ ಬೇಲಿ ಹಾಕುವ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದರಲ್ಲದೇ, ಬೇಲಿ ಹಾಕುವುದನ್ನು ಮುಂದುವರೆಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರೂ ಕಾಮಗಾರಿ ಮುಂದುವರೆಸಲಾಗಿತ್ತು.

ತೆರವು ಕಾರ್ಯಾಚರಣೆ: ಬೇಲಿ ಹಾಕುವ ಕಾರ್ಯ ಮುಂದುವರೆಸುವುದರೊಂದಿಗೆ, ಮೈದಾನ ವನ್ನು ಮಟ್ಟ ಮಾಡುವ ಕೆಲಸ ಮುಂದು ವರೆಸಿದ್ದರಿಂದ ಇಂದು ಬೆಳಿಗ್ಗೆ ತಹಶೀಲ್ದಾರ್ ಟಿ.ರಮೇಶ್ ಬಾಬು ಅವರು ಕಂದಾಯ ಹಾಗೂ ಲೋಕೋಪಯೋಗಿ ಇಲಾಖೆ ಸಿಬ್ಬಂದಿಗಳೊಂ ದಿಗೆ ಸ್ಥಳಕ್ಕೆ ತೆರಳಿ ತೆರವು ಕಾರ್ಯಾಚರಣೆ ನಡೆಸಿದರು.

ಮೈದಾನದಲ್ಲಿ ಮಟ್ಟ ಮಾಡುವ ಕಾರ್ಯದಲ್ಲಿ ನಿರತವಾಗಿದ್ದ ಜೆಸಿಬಿ (ಕೆಎ.52, ಎಂ.0066), ಟ್ರಾಕ್ಟರ್(ಕೆಎ.45, ಟಿಎ.2309) ವಶಕ್ಕೆ ಪಡೆದರು. ನಂತರ ಆಲನಹಳ್ಳಿ ಠಾಣೆಯ ಇನ್ಸ್‍ಪೆಕ್ಟರ್ ಕೆ.ಎಂ.ಮಂಜು ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಮೈದಾನ ದಲ್ಲಿ ಬೇಲಿ ನಿರ್ಮಿಸಲು ನೆಡಲಾಗಿದ್ದ ಕಬ್ಬಿಣದ ಪೋಲ್‍ಗಳನ್ನು ತೆರವು ಮಾಡಲಾಯಿತು. ಜೊತೆಗೆ ಮೈದಾನದ ಮೂರು ಕಡೆ ಅಳ ವಡಿಸಲಾಗಿದ್ದ ಫಲಕಗಳನ್ನು ಕಿತ್ತಿಸಿದರು.

ಕಾರ್ಯಾಚರಣೆಗೆ ಅಡ್ಡಿ ಯತ್ನ: ಅಧಿಕಾರಿ ಗಳ ತಂಡ ತೆರವು ಕಾರ್ಯಾಚರಣೆ ಆರಂಭಿಸು ತ್ತಿದ್ದಂತೆ ಸ್ಥಳಕ್ಕೆ ಬಂದ ಆ ಜಾಗದ ಜಿಪಿಎ ಹೋಲ್ಡರ್ ಕೆ.ಮನು, ಕೆಲವು ದಾಖಲೆಗಳನ್ನು ಪ್ರದರ್ಶಿಸಿ ಈ ಭೂಮಿ ನಮಗೆ ಸೇರಿದೆ. ಮೀನಾಕ್ಷಿ ಎಂಬುವರಿಂದ ಖರೀದಿಸಿದ್ದೇವೆ. ನಮ್ಮ ಭೂಮಿ ಯನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ ಎಂದು ಕೂಗಾಡುತ್ತಾ ತೆರವು ಕಾರ್ಯಾ ಚರಣೆಯಲ್ಲಿದ್ದ ಬಂದಿದ್ದ ಜೆಸಿಬಿಗೆ ಅಡ್ಡ ಮಲಗಿದರು. ಈ ವೇಳೆ ತಹಶೀಲ್ದಾರ್ ಸೂಚನೆ ಮೇರೆಗೆ ಪೊಲೀಸರು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಕೆ.ಮನು ಅವರನ್ನು ವಶಕ್ಕೆ ಪಡೆದರು. ನಂತರ ಬೇಲಿ ತೆರವು ಕಾರ್ಯಾಚರಣೆ ಮುಂದುವರೆಸಲಾಯಿತು. ಲಿಖಿತ ದೂರು: ಕಾರ್ಯಾಚರಣೆಗೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಸರ್ಕಾರಿ ಭೂಮಿಗೆ ಅಕ್ರಮ ಪ್ರವೇಶ, ಸರ್ಕಾರಿ ಭೂಮಿಯನ್ನು ಕಬಳಿಸುವ ಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿ ದ್ದಕ್ಕಾಗಿ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಆಲನಹಳ್ಳಿ ಠಾಣೆ ಪೊಲೀಸರಿಗೆ ಮನು ವಿರುದ್ಧ ಲಿಖಿತ ದೂರು ನೀಡಿದರು. ಈ ದೂರು ಆಧರಿಸಿ ಪೊಲೀಸರು ಕ್ರಮ ಕೈಗೊಂಡರು.

ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ: ಕಾರ್ಯಾಚರಣೆ ಕುರಿತಂತೆ ಮೈಸೂರು ತಹಶೀಲ್ದಾರ್ ಟಿ.ರಮೇಶ್ ಬಾಬು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ವ್ಯಕ್ತಿಯೊಬ್ಬರು ಬೇಲಿ ಹಾಕುತ್ತಿರುವ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದು, ಬೇಲಿ ಹಾಕುವ ಕಾಮಗಾರಿ ಮುಂದುವರೆಸದಂತೆ ಸೂಚನೆ ನೀಡಲಾಗಿತ್ತು. ಆದರೂ ಕೆ.ಮನು ಎಂಬುವರು ಕಾಮಗಾರಿಯನ್ನು ಮುಂದುವರೆಸಿ ಉದ್ಧಟತನ ಪ್ರದರ್ಶಿಸಿದ್ದರು. ಈ ಭೂಮಿ ಕುರುಬಾರಹಳ್ಳಿ ಸರ್ವೇ ನಂ 4ಕ್ಕೆ ಒಳಪಡುತ್ತದೆ. ಈ ಸರ್ವೇ ನಂ 4ರಲ್ಲಿ 1563 ಎಕರೆ 31 ಗುಂಟೆ ಭೂಮಿ ಬಿ-ಖರಾಬು(ಸರ್ಕಾರಿ ಭೂಮಿ) ಎಂದು ಆರ್‍ಟಿಸಿ ಯಲ್ಲಿ ನಮೂದಾಗಿದೆ. ಅಲ್ಲದೆ ಈ ಸರ್ವೇ ನಂಬರ್ ಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‍ನಲ್ಲಿ 73 ರಿಟ್ ಪಿಟಿಷನ್ ವಿಚಾರಣೆ ಬಾಕಿ ಇದೆ. ಅವುಗಳು ಮುಕ್ತಾಯವಾಗುವವರೆಗೂ ಯಾವುದೇ ಖಾಸಗಿ ವ್ಯಕ್ತಿಗಳು ಜಮೀನು ತಮ್ಮದು ಎಂದು ಹೇಳಿಕೊಂಡು ಕೆಲಸ ಮಾಡುವುದಕ್ಕೆ ಅವಕಾಶವಿಲ್ಲ. ಆದರೂ ಕೆಲವರು ಬೇಲಿ ಹಾಕುವ ಮೂಲಕ ನಿಯಮವನ್ನು ಗಾಳಿಗೆ ತೂರುವ ಯತ್ನ ಮಾಡುತ್ತಿದ್ದಾರೆ. ಕಾನೂನು ರೀತಿ ಸರ್ಕಾರಿ ಭೂಮಿಯನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ತೆರವು ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಜೆಸಿಬಿ ಹಾಗೂ ಟ್ರಾಕ್ಟರ್ ವಶಕ್ಕೆ ಪಡೆಯಲಾಗಿದೆ. ಕರ್ನಾಟಕ ಭೂ ಕಾಯ್ದೆ 1964 ಕಾಲಂ 192ಎ ಪ್ರಕಾರ ಸರ್ಕಾರಿ ಜಮೀನು ಕಬಳಿಸುವ ಪ್ರಯತ್ನ ಮಾಡಿದರೆ ಕಾನೂನು ರೀತ್ಯಾ ಶಿಕ್ಷೆ ಇದೆ. ಕೆ.ಮನು ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಇಇ ಸಿದ್ದೇಗೌಡ, ಜೆಇ ಲಕ್ಷ್ಮಿಪತಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Translate »