ಚೆನ್ನೈ,ಜ.20-ಕಳೆದ 4 ವರ್ಷಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನನ್ನ ಕಕ್ಷಿದಾರರಾದ ವಿ.ಕೆ.ಶಶಿಕಲಾ ಅವರಿಗೆ ಅನಾರೋಗ್ಯವಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಅವರಿಗೆ ಜ್ವರ ಮತ್ತು ಉಸಿರಾಟ ಸಮಸ್ಯೆ ಕಾಣಿಸಿ ಕೊಂಡಿದೆ. ಆದರೆ, ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ ಎಂದು ಜೈಲಿನಿಂದ ಮಾಹಿತಿ ದೊರೆತಿದೆ ಎಂದು ಶಶಿಕಲಾ ಅವರ ವಕೀಲ ಎನ್.ರಾಜಾ ಸೆಂಥೂರ್ ಪಾಂಡಿಯನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಶಶಿಕಲಾ ಶಿಕ್ಷೆ ಅವಧಿ ಪೂರ್ಣಗೊಳಿಸಿ ಜ.27ರ ಬೆಳಗ್ಗೆ ಬಿಡುಗಡೆಯಾಗಲಿದ್ದಾರೆ ಎಂದು ಪಾಂಡಿ ಯನ್ ಇತ್ತೀಚೆಗೆ ಹೇಳಿದ್ದರು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಸಿಎಂ ಜೆ.ಜಯಲಲಿತಾ ಮತ್ತು ಶಶಿಕಲಾ ಸೇರಿ ನಾಲ್ವರು ದೋಷಿಗಳು ಎಂದು 2014ರಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿ ದಿತ್ತು. ಶಶಿಕಲಾ 2017ರ ಫೆ.15ರಂದು ಜೈಲು ಅಧಿಕಾರಿಗಳಿಗೆ ಶರಣಾಗಿದ್ದರು.