ಕೋವಿಡ್-19 ಐಸೋಲೇಷನ್ ರೈಲ್ವೇ ಬೋಗಿಗಳೀಗ ವಾಹನ ಸಾಗಣೆಗೆ ಬಳಕೆ
ಮೈಸೂರು

ಕೋವಿಡ್-19 ಐಸೋಲೇಷನ್ ರೈಲ್ವೇ ಬೋಗಿಗಳೀಗ ವಾಹನ ಸಾಗಣೆಗೆ ಬಳಕೆ

January 21, 2021

ಸುಸ್ಥಿತಿಯಲ್ಲಿರುವ ಬೋಗಿಗಳು ಪ್ರಯಾಣಿಕರ ಸಂಚಾರಕ್ಕೆ ಬಳಕೆ
ಮೈಸೂರು,ಜ.20(ಆರ್‍ಕೆ)-ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಗಾಗಿ ಬಳಸಿಕೊಳ್ಳಲು ರೈಲ್ವೇ ಇಲಾಖೆ ಸಿದ್ಧಪಡಿಸಿದ್ದ ರೈಲು ಬೋಗಿಗಳೀಗ ದ್ವಿಚಕ್ರ ವಾಹನ ಸಾಗಿಸಲು ಬಳಕೆಯಾಗಲಿವೆ.

ಕೋವಿಡ್-19 ಅಟ್ಟಹಾಸ ತೀವ್ರಗೊಂಡಿದ್ದಾಗ ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದ್ದ ಆಸ್ಪತ್ರೆ, ಇನ್ನಿತರ ಸ್ಥಳಗಳು ಸಾಲದೆ ಬಂದರೆ, ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ರೈಲ್ವೆ ಇಲಾಖೆಯು ಹಳೆಯದಾದ ರೈಲು ಬೋಗಿಗಳನ್ನು ಕೋವಿಡ್-19 ಐಸೋ ಲೇಷನ್ ಕೋಚ್‍ಗಳನ್ನಾಗಿ ಪರಿವರ್ತಿಸಿ, ಮೀಸಲಾಗಿರಿಸಿತ್ತು.

ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ 128 ಕೋಚ್‍ಗಳನ್ನು ಹೀಗೆ ಪರಿವರ್ತಿಸಿ ಮೈಸೂರಿನ ಅಶೋಕಪುರಂ ರೈಲ್ವೇ ವರ್ಕ್ ಶಾಪ್ ಬಳಿ 96 ಹಾಗೂ ಸಿಡಿಓ ಬಳಿ 32 ಬೋಗಿಗಳನ್ನಿರಿಸಿ ರಾಜ್ಯ ಸರ್ಕಾರದ ಬೇಡಿಕೆಗಾಗಿ ನಿರೀಕ್ಷಿಸಲಾಗುತ್ತಿತ್ತು. ಆದರೆ ಸರ್ಕಾರ ದಿಂದ ಬೇಡಿಕೆಯೇ ಬರಲಿಲ್ಲ. ತದನಂತರ ಕೊರೊನಾ ವೈರಸ್ ತೀವ್ರತೆಯೂ ಕಡಿಮೆಯಾದ ಕಾರಣ, ಪಾಸಿಟಿವ್ ಕಂಡುಬಂದ ವರು ಸರ್ಕಾರಿ ಆಸ್ಪತ್ರೆ, ಖಾಸಗಿ ನರ್ಸಿಂಗ್ ಹೋಂ, ಹೋಟೆಲು ಗಳಲ್ಲಿ ಐಸೊಲೇಷನ್ ಆಗಲು ಬಯಸಿದರೇ ಹೊರತು, ರೈಲ್ವೇ ಐಸೋಲೇಷನ್ ಕೋಚ್‍ಗಳ ಅವಶ್ಯಕತೆಯೇ ಬರಲಿಲ್ಲ. ಪ್ಯಾಸೆಂಜರ್ ಸೀಟುಗಳನ್ನು ತೆಗೆದು ಚಿಕಿತ್ಸೆಗಾಗಿ ತಾತ್ಕಾಲಿಕ ವ್ಯವಸ್ಥೆ ಮಾಡಿ ನಿಲ್ಲಿಸಿದ್ದ ಬೋಗಿಗಳು ಕಳೆದ ಮಾರ್ಚ್-ಏಪ್ರಿಲ್ ಮಾಹೆಯಿಂದ ವ್ಯರ್ಥವಾಗಿ ನಿಂತಿದ್ದವು. ಈಗ ಇವುಗಳನ್ನು ನ್ಯೂ ಮಾಡಿಫೈಡ್ ಗೂಡ್ಸ್ (ಓಒಉ) ರೇಕ್‍ಗಳನ್ನಾಗಿ ಪರಿವರ್ತಿಸಲು ರೈಲ್ವೆ ಇಲಾಖೆಯು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

20 ವರ್ಷ ಹಳೆಯದಾದ ಬೋಗಿಗಳನ್ನು ಬೈಕ್, ಸ್ಕೂಟರ್ ಮತ್ತು ಕಾರುಗಳನ್ನು ಸಾಗಣೆ ಮಾಡಲು ಬಳಸಬೇಕು, 20 ವರ್ಷದೊಳಗಿನ ಕೋಚ್‍ಗಳಿಗೆ ಮತ್ತೆ ಆಸನಗಳನ್ನು ಜೋಡಿಸಿ ಪ್ರಯಾಣಿಕರ ಬೋಗಿ ಗಳಾಗಿ ಪರಿವರ್ತಿಸಿ ಎಂಬ ಸೂಚನೆ ರೈಲ್ವೆ ಇಲಾಖೆ ಹಿರಿಯ ಅಧಿ ಕಾರಿಗಳಿಂದ ರವಾನೆಯಾಗಿದೆ ಎಂದು ಹೇಳಲಾಗಿದೆ. ನಂಜನಗೂಡು ಭಾಗದ ವಾಹನ ತಯಾರಿಕಾ ಕಾರ್ಖಾನೆಯಿಂದ ದ್ವಿಚಕ್ರ ವಾಹನಗಳನ್ನು ಬೇರೆಡೆಗೆ ಸಾಗಣೆ ಮಾಡಲು ಎನ್‍ಎಂಜಿ ರೇಕ್‍ಗಳನ್ನು ಬಳಸುವ ಸಂಬಂಧ ನೈರುತ್ಯ ರೈಲ್ವೇ ಮೈಸೂರು ವಿಭಾಗದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಕೋವಿಡ್-19 ಐಸೋಲೇಷನ್ ಕೋಚ್ ಗಳನ್ನು ಮೈಸೂರು, ಅರಸೀಕೆರೆ, ಶಿವಮೊಗ್ಗ, ಹರಿಹರ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳ ರೈಲ್ವೇ ಸ್ಟೇಷನ್ ಹಾಗೂ ವರ್ಕ್ ಶಾಪ್ ಗಳ ಸಮೀಪ ನಿಲ್ಲಿಸಲಾಗಿದ್ದು, ಅವುಗಳೆಲ್ಲವೂ ಇನ್ನು ಮುಂದೆ ಎನ್‍ಎಂಜಿ ರೇಕ್‍ಗಳಾಗಿ ಪರಿವರ್ತನೆಯಾಗಲಿವೆ.

 

Translate »