ಫಿಫಾ ವಿಶ್ವಕಪ್: ಫ್ರಾನ್ಸ್ ಚಾಂಪಿಯನ್
ದೇಶ-ವಿದೇಶ

ಫಿಫಾ ವಿಶ್ವಕಪ್: ಫ್ರಾನ್ಸ್ ಚಾಂಪಿಯನ್

July 16, 2018

ಮಾಸ್ಕೋ: ರಷ್ಯಾದಲ್ಲಿ ನಡೆದ 21ನೇ ಫಿಫಾ ವಿಶ್ವಕಪ್ ಫುಟ್‍ಬಾಲ್ ಚಾಂಪಿಯನ್ ಆಗಿ ಫ್ರಾನ್ಸ್ ಹೊರಹೊಮ್ಮಿದ್ದು, ಆ ಮೂಲಕ 20 ವರ್ಷಗಳ ಬಳಿಕ 2ನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಇದರೊಂದಿಗೆ 1 ತಿಂಗಳ ಕಾಲ ವಿಶ್ವದ ಫುಟ್ ಬಾಲ್ ಅಭಿಮಾನಿಗಳನ್ನು ರಂಜಿಸಿದ ಫಿಫಾ ವಿಶ್ವಕಪ್ ಫುಟ್‍ಬಾಲ್ ಪಂದ್ಯಾವಳಿಗೆ ತೆರೆಬಿದ್ದಿತು.

ಇಲ್ಲಿನ ಲಜ್ನಿಕಿ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ 4-2 ಗೋಲುಗಳಿಂದ ಕ್ರೊವೇಷಿಯಾ ತಂಡವನ್ನು ಮಣಿಸಿ 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿ, 256 ಕೋಟಿ ರೂ.ಗಳ ಭಾರೀ ಬಹುಮಾನ ಹಾಗೂ ವಿಶ್ವಕಪ್ ಟ್ರೋಫಿ ಯನ್ನು ಪಡೆಯಿತು. ಚೊಚ್ಚಲ ವಿಶ್ವಕಪ್ ಗೆಲುವಿನ ಕನಸು ಕಂಡಿದ್ದ ಕ್ರೋವೆಷಿಯಾ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಆ ಮೂಲಕ 188 ಕೋಟಿ ರೂ.ಗಳ ಬಹುಮಾನ ತನ್ನದಾಗಿಸಿಕೊಂಡಿತು. ತೀವ್ರ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಆರಂಭದಿಂದಲೂ ಉಭಯ ತಂಡಗಳು ಗೋಲುಗಳು ಭಾರೀ ಹೋರಾಟ ನಡೆಸಿದವು. ಈ ವೇಳೆ ಪಂದ್ಯದ 18ನೇ ನಿಮಿಷದಲ್ಲಿ ಫ್ರಾನ್ಸ್ ಪರ ಮಾರಿಯೋ ಮಾಂಡ್ಜುಕಿಕ್ ಗೋಲು ಗಳಿಸುವ ಮೂಲಕ ತಂಡಕ್ಕೆ 1-0 ಮುನ್ನಡೆ ತಂದು ಕೊಟ್ಟರು. ಆ ನಂತರ ಕ್ರೋವೆಷಿಯಾ ತಂಡ ಬಿರುಸಿನ ಆಟಕ್ಕೆ ಮುಂದಾದ ಪರಿಣಾಮ 28ನೇ ನಿಮಿಷದಲ್ಲಿ ಇವನ್ ಪೆರಿಸಿಕ್ ಗೋಲುಗಳಿಸುವ ಮೂಲಕ 1-1ರಿಂದ ಪಂದ್ಯ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು.

ಪಂದ್ಯದ 38ನೇ ನಿಮಿಷದಲ್ಲಿ ಕ್ರೋವೆಷಿಯಾ ಮಾಡಿಕೊಂಡ ಎಡವಟ್ಟಿನಿಂದ ಫ್ರಾನ್ಸ್ ಪೆನಾಲ್ಟಿ ಕಿಕ್ ಅವಕಾಶ ಪಡೆಯಿತು. ಇದರ ಸಂಪೂರ್ಣ ಲಾಭ ಪಡೆದ ಫ್ರಾನ್ಸ್‍ನ ಆಂಟೊಯಿನ್ ಗ್ರೀಜ್ಮನ್ ಎದುರಾಳಿ ಗೋಲ್ ಕೀಪರ್ ಸುಬಸಿಕ್ ಅವರನ್ನು ವಂಚಿಸಿ ಗೋಲು ಗಳಿಸುವ ಮೂಲಕ ತಂಡಕ್ಕೆ 2-1ರಿಂದ ಮುನ್ನಡೆ ಗಳಿಸಿಕೊಟ್ಟರು. ಪಂದ್ಯದ ಮೊದಲಾ ರ್ಧದ(45 ನಿಮಿಷ) ವೇಳೆಗೆ ಫ್ರಾನ್ಸ್ 2-1ಯಿಂದ ಮುನ್ನಡೆ ಸಾಧಿಸಿತ್ತು. ಪಂದ್ಯದ ದ್ವಿತೀಯಾರ್ಧ ಆರಂಭದಲ್ಲಿ ಉಭಯ ತಂಡಗಳು ಗೋಲು ಗಳಿಸಲು ಹಲವು ಅವಕಾಶ ಇತ್ತಾದರೂ ಅದು ಸಾಧ್ಯವಾಗಲಿಲ್ಲ.

ಆದರೆ ಪಂದ್ಯದ 59ನೇ ನಿಮಿಷದಲ್ಲಿ ಫ್ರಾನ್ಸ್ ಆಟಗಾರರು ಮೇಲುಗೈ ಸಾಧಿಸಿದರು. ಈ ವೇಳೆ ಫ್ರಾನ್ಸ್‍ನ ಪಾಲ್ ಪೋಗ್ಬಾ ಗೋಲು ಗಳಿಸುವ ಮೂಲಕ 3-1ರಿಂದ ಮುನ್ನಡೆ ತಂದು ಕೊಟ್ಟರು. ನಂತರ 65ನೇ ನಿಮಿಷದಲ್ಲಿ ಫ್ರಾನ್ಸ್‍ನ ಕೈಲಿಯಾನ್ ಬಾಪೆ ಗೋಲು ಗಳಿಸುವ ಮೂಲಕ 4-1ರಿಂದ ತಂಡದ ಜಯ ಖಾತ್ರಿ ಪಡಿಸಿದರು. 69ನೇ ನಿಮಿಷದಲ್ಲಿ ಕ್ರೋವೆಷಿಯಾದ ಮಾರಿಯೋ ಮಂಡ್ಜುಕಿಕ್ ಗೋಲು ಗಳಿಸಿದರಾದರೂ, ಪ್ರಬಲ ಹಾಗೂ ಅನುಭವಿ ಫ್ರಾನ್ಸ್ ತಂಡದ ಎದುರು ತನ್ನ ಆಟ ನಡೆಯಲಿಲ್ಲ.

ಅಂತಿಮ ವಾಗಿ ಪಂದ್ಯದ ಅವಧಿ ಮುಕ್ತಾಯದ ವೇಳೆಗೆ ಫ್ರಾನ್ಸ್ ತಂಡ 4-2 ಅಂತರದಲ್ಲಿ ಕ್ರೋವೆಷಿಯಾ ತಂಡವನ್ನು ಮಣಿಸಿ 1998ರ ಬಳಿಕ ಹಾಗೂ ಎರಡನೇ ಬಾರಿಗೆ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡ 6ನೇ ತಂಡವಾಗಿ ಹೊರಹೊಮ್ಮಿತು. ಫ್ರಾನ್ಸ್ 21ನೇ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮುತ್ತಿದ್ದಂತೆ ತಂಡದ

ಆಟಗಾರರು ಮೈದಾನದಲ್ಲಿ ಕುಣಿದು ಕುಪ್ಪಳಿಸಿದರು. ಅಲ್ಲದೇ ಫ್ರಾನ್ಸ್ ಅಭಿಮಾನಿಗಳಲ್ಲಿ ಸಂತಸ ಮಾನೆ ಮಾಡಿತು. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಫ್ರಾನ್ಸ್‍ನ ಆಂಟೊಯಿನ್ ಗ್ರೀಜ್ಮನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಟೂರ್ನಿ ಯಲ್ಲಿ ಅತ್ಯಧಿಕ ಗೋಲು ದಾಖಲಿಸಿದ ಇಂಗ್ಲೆಂಡ್‍ನ ಹ್ಯಾರಿ ಕೇನ್ (6ಗೋಲು) ಗೋಲ್ಡನ್ ಬೂಟ್ ಪ್ರಶಸ್ತಿ ಪಡೆದರು.

ಅಲ್ಲದೇ ಕ್ರೋವೆಷಿಯಾದ ಲೂಕಾ ಮೊಡರಿಕ್ ಗೋಲ್ಡನ್ ಬಾಲ್ ಹಾಗೂ ಫ್ರಾನ್ಸ್‍ನ ಕೈಲಿಯನ್ ಮಾಪೆ ಟೂರ್ನಿಯ ಬೆಸ್ಟ್ ಯಂಗ್ ಪ್ಲೇಯರ್ ಅವಾರ್ಡ್ ಅನ್ನು ತನ್ನದಾಗಿಸಿಕೊಂಡರು.

Translate »