ಶ್ರೀರಂಗಪಟ್ಟಣದ  ಗೌತಮ ಕ್ಷೇತ್ರ ಜಲಾವೃತ
ಮಂಡ್ಯ

ಶ್ರೀರಂಗಪಟ್ಟಣದ  ಗೌತಮ ಕ್ಷೇತ್ರ ಜಲಾವೃತ

July 16, 2018

ಮಂಡ್ಯ:  ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಶ್ರೀರಂಗಟಪ್ಟಣ ತಾಲೂಕಿನ ದೊಡ್ಡೇ ಗೌಡನ ಕೊಪ್ಪಲು ಬಳಿಯ ಪುರಾತನ ಪ್ರಸಿದ್ಧ ಕ್ಷೇತ್ರ ಗೌತಮ ಕ್ಷೇತ್ರ ಜಲಾವೃತ ಗೊಂಡಿದೆ. ಕಾವೇರಿ ನದಿ ತೀರದಲ್ಲಿರುವ ಗೌತಮ ಕ್ಷೇತ್ರದ ಮಠ ಜಲಾವೃತ ಗೊಂಡಿದ್ದರೂ, ಇಲ್ಲಿನ ಶ್ರೀಗಜಾನನ ಸ್ವಾಮೀಜಿ ಗಳು ತಮ್ಮ ಮೂವರು ಭಕ್ತರೊಂದಿಗೆ ಮಠದಲ್ಲೇ ಇರುವುದು ಆತಂಕ ಸೃಷ್ಟಿಸಿದೆ.

ಇಂದು ಅಥವಾ ನಾಳೆ ಜಲಾಶಯದಿಂದ ನದಿಗೆ ಮತ್ತಷ್ಟು ಪ್ರಮಾಣದಲ್ಲಿ ನೀರು ಹರಿದು ಬಿಡಲಾಗುತ್ತಿರುವ ಹಿನ್ನೆಲೆಯಲ್ಲಿ ಮಠದಿಂದ ಸ್ವಾಮೀಜಿ ಅವರನ್ನು ಹೊರತರಲು ಜಿಲ್ಲಾಡಳಿತ ಪ್ರಯತ್ನ ನಡೆಸಿದರೂ ಪ್ರಯೋಜನವಾಗದೆ ಸ್ವಾಮೀಜಿ ಹಾಗೂ ಅವರ ಭಕ್ತರು ಮಠದಲ್ಲೇ ಉಳಿದಿದ್ದಾರೆ.

ವಿಷಯ ತಿಳಿದ ಜಿಲ್ಲಾಧಿಕಾರಿ ಎನ್. ಮಂಜುಶ್ರೀ ಅವರು ಮಠದ ಬಳಿ ತೆರಳಿ ಸ್ವಾಮೀಜಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ನೀವು ಮಠ ದಿಂದ ಹೊರ ಬನ್ನಿ, ನಿಮ್ಮನ್ನು ಬೇರೆ ಸುರಕ್ಷಿತ ಸ್ಥಳಕ್ಕೆ ಕಳುಹಿಸುತ್ತೇವೆ. ಇಂದು ಅಥವಾ ನಾಳೆ ಮತ್ತೆ
ಕಾವೇರಿ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ಸ್‍ಗೂ ಅಧಿಕ ನೀರು ನದಿಗೆ ಹರಿ ಬಿಡುವ ಸಂಭವವಿದೆ. ಹಾಗಾಗಿ ನೀವು ಹೊರಬನ್ನಿ ನಿಮ್ಮನ್ನು ಅಲ್ಲಿಂದ ಕರೆತರಲು ಬೋಟಿಂಗ್ ವ್ಯವಸ್ಥೆ ಮಾಡಲಾಗುವುದು ಎಂಬ ಭರವಸೆ ನೀಡಿ ಸ್ವಾಮೀಜಿ ಅವರ ಮನವೊಲಿಸುವ ಪ್ರಯತ್ನ ಮಾಡಿದರು.

ಇದಕ್ಕೆ ಒಪ್ಪದ ಗೌತಮ ಕ್ಷೇತ್ರದ ಗಜಾನನ ಸ್ವಾಮೀಜಿ, ನನಗೆ ಏನೂ ತೊಂದರೆ ಆಗಿಲ್ಲ, ಇಲ್ಲಿ ನಾನು ಸುರಕ್ಷಿತವಾಗಿದ್ದೇನೆ, ಊಟ ತಯಾರು ಮಾಡಿಕೊಳ್ಳುಲು ಧವಸ, ಧಾನ್ಯ ಸೇರಿದಂತೆ ಎಲ್ಲಾ ವಸ್ತುಗಳು ಇಲ್ಲಿ ಶೇಖರಣೆಯಾಗಿದೆ, ನಾವು ನೆಲಸಿರುವ ಮಠ ನದಿಗಿಂತ ಬಹಳ ಎತ್ತರ ಪ್ರದೇಶದಲ್ಲಿದೆ ಯಾರು ಆತಂಕ ಪಡುವುದುಬೇಡ ಎಂದು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿ, ನಂತರ ಮಠದಿಂದ ಹೊರ ಬಂದು ಕೈ ಬೀಸುವ ಮೂಲಕ ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದರು.

ನದಿಯ ಮಧ್ಯಭಾಗದಲ್ಲಿರುವ ಸ್ವಾಮೀಜಿ ಹೊರ ಬರಲು ಒಪ್ಪದ ಕಾರಣ ಜಿಲ್ಲಾಡಳಿತದ ಪ್ರಯತ್ನಪಟ್ಟು ಖುದ್ದು ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬಂದು ದೂರವಾಣಿ ಮೂಲಕ ಸ್ವಾಮಿಜಿ ಅವರನ್ನು ಸಂಪರ್ಕಿಸಿ ಬೋಟ್ ಮೂಲಕ ಹೇಗಾದರೂ ಹೊರ ಕರೆತರಬೇಕು ಎಂದು ಪ್ರಯತ್ನಪಟ್ಟರೂ ಪ್ರಯೋಜನವಾಗದಿದ್ದರಿಂದ ಜಿಲ್ಲಾಡಳಿತಕ್ಕೆ ತಲೆ ನೋವಾದ ಪರಿಸ್ಥಿತಿ ನಿರ್ಮಾಣವಾಗಿ, ಮತ್ತೆ ನದಿಯಲ್ಲಿ ನೀರು ಹೆಚ್ಚಳವಾದರೆ ಸಮಸ್ಯೆ ಉಲ್ಬಣವಾಗಬಹುದು ಎಂದು ಜಿಲ್ಲಾಡಳಿತ ಆತಂಕದಲ್ಲಿದೆ.

ಈ ವೇಳೆ ತಹಸೀಲ್ದಾರ್ ನಾಗೇಶ್, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಜೊತೆಯಲ್ಲಿದ್ದರು.

Translate »