ಹಾಸನ/ಶ್ರೀರಂಗಪಟ್ಟಣ: ಹಾಸನ ಮತ್ತು ಶ್ರೀರಂಗ ಪಟ್ಟಣದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪತ್ನಿಯರೇ ತಮ್ಮ ಪತಿಯರನ್ನು ಹತ್ಯೆ ಮಾಡಿದ್ದು, ಪೊಲೀಸರಿಂದ ಬಂಧನ ಕ್ಕೊಳಗಾಗಿದ್ದಾರೆ. ಗ್ರಾನೈಟ್ ಉದ್ಯಮಿಯಾಗಿದ್ದ ಪತಿ ಎರಡನೇ ಮದುವೆಯಾದಾಗ ಆತನ ಆಸ್ತಿಗಾಗಿ ಮೊದಲ ಪತ್ನಿ ಸುಪಾರಿ ಪತಿಯನ್ನು ಹತ್ಯೆ ಮಾಡಿದ್ದರೆ, ಶ್ರೀರಂಗ ಪಟ್ಟಣ ತಾಲೂಕು ಅರಕೆರೆ ಗ್ರಾಮದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಯನ್ನು ಪ್ರಿಯಕರ ಮತ್ತಿತರರೊಡನೆ ಸೇರಿ ಪತ್ನಿಯೇ ಕೊಂದಿದ್ದಾಳೆ.
ಶ್ರೀರಂಗಪಟ್ಟಣ ವರದಿ: ಯುವಕನೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಗೃಹಿಣಿ, ತನ್ನ ಈ ಸಂಬಂಧಕ್ಕೆ ಅಡ್ಡಿಯಾ ಗಿದ್ದನೆಂಬ ಕಾರಣಕ್ಕಾಗಿ ಪತಿಯನ್ನು ಪ್ರಿಯಕರನೊಡಗೂಡಿ ಹತ್ಯೆ ಮಾಡಿ ಕೆರೆ ಬಳಿ ಹೂತು ಹಾಕಿದ್ದಲ್ಲದೇ, ಪತಿ ನಾಪತ್ತೆ ಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದಿಂದ ವರದಿಯಾಗಿದೆ.
ಗ್ರಾಮದ ವ್ಯಾಪಾರಿ ಸತೀಶ್ (40) ಅವರು ಪತ್ನಿ ಕಾವ್ಯ (35) ಹಾಗೂ ಆಕೆಯ ಪ್ರಿಯಕರ ಮತ್ತಿತ್ತರರಿಂದ ಹತ್ಯೆಗೀಡಾಗಿದ್ದಾರೆ. ಕಾವ್ಯಳಿಗೆ ಅದೇ ಗ್ರಾಮದ ಮಂಜು ಎಂಬ ಯುವಕ ನೊಂದಿಗೆ ಅಕ್ರಮ ಸಂಬಂಧವಿತ್ತು ಎಂದು ಹೇಳಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಪತಿ ಸತೀಶ್, ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಗ್ರಾಮದಲ್ಲಿ ಪಂಚಾಯಿತಿಯೂ ನಡೆದು ಕಾವ್ಯಳು ಮತ್ತೆ ಪ್ರಿಯಕರ ಮಂಜನ ಸಹವಾಸ ಮಾಡುವುದಿಲ್ಲ ಎಂದು ಮಾತು ಕೊಟ್ಟಿದ್ದಳು ಎಂದು ಹೇಳಲಾಗಿದೆ. ಆದರೆ ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಹತ್ಯೆ ಮಾಡಿದರೆ ಆತನದೇ ಆಸ್ತಿಯನ್ನಿಟ್ಟು ಕೊಂಡು ಪ್ರಿಯಕರ ಮಂಜು ಜೊತೆ ಐಷಾರಾಮಿ ಜೀವನ ನಡೆಸಬಹುದೆಂದು ಚಿಂತನೆ ಮಾಡಿ ಪತಿಯನ್ನು ಹತ್ಯೆ ಮಾಡಲು ಪ್ರಿಯಕರನೊಡಗೂಡಿ ಸಂಚು ರೂಪಿಸಿದ್ದಾಳೆ. ಇವರ ಸಂಚಿನಂತೆ ಕಾವ್ಯಳ ಪ್ರಿಯಕರ ಮಂಜು, ಆತನ ಸ್ನೇಹಿತರಾದ ಶ್ರೀಕಾಂತ್, ಗುರು ಮತ್ತಿತರರು ಹತ್ಯೆಗೀಡಾದ ಸತೀಶ್‍ನನ್ನು ಗ್ರಾಮದ ಹೊರ ವಲಯಕ್ಕೆ ಕರೆದೊಯ್ದು, ಪಾರ್ಟಿ ನಡೆಸಿದ್ದಾರೆ. ಈ ವೇಳೆ ಸತೀಶನಿಗೆ ಮದ್ಯದ ಜೊತೆ ನಿದ್ರೆ ಮಾತ್ರೆಗಳನ್ನು ಬೆರೆಸಿ ಕೊಟ್ಟಿದ್ದಾರೆ. ಆತ ನಿದ್ರೆಗೆ ಜಾರಿದಾಗ ಉಸಿರುಗಟ್ಟಿಸಿ ಸತೀಶ್‍ನನ್ನು ಕೊಲೆ ಮಾಡಿ ಗ್ರಾಮದ ಕೆರೆ ಬಳಿ ಮೃತದೇಹವನ್ನು ಹೂತು ಹಾಕಿದ್ದಾರೆ. ಈ ಘಟನೆ ನಡೆದ ಒಂದು ವಾರದ ಬಳಿಕ ಕಾವ್ಯ ತನ್ನ ಪತಿ ನಾಪತ್ತೆಯಾಗಿದ್ದಾನೆ ಎಂದು ಮೇ 23ರಂದು ಅರಕೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾಳೆ. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಪೊಲೀಸರಿಗೆ ಈಕೆಯ ಅಕ್ರಮ ಸಂಬಂಧದ ಬಗ್ಗೆ ತಿಳಿದಿದೆ. ಅಲ್ಲದೇ ಸತೀಶ್ ನಾಪತ್ತೆಯಾಗಿರುವುದರ ಹಿಂದೆ ಕಾವ್ಯಳ ಕೈವಾಡವಿರಬಹುದೆಂಬ ಮಾತುಗಳು ಗ್ರಾಮದಲ್ಲಿ ಕೇಳಿಬರುತ್ತಿರುವುದನ್ನೂ ಗಮನಿಸಿದ ಪೊಲೀಸರು, ಆಕೆಯ ಪ್ರಿಯಕರ ಮಂಜುವನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಹತ್ಯಾ ಪ್ರಕರಣ ಬಯಲಾಗಿದೆ. ಕಾವ್ಯಳ ಪ್ರಿಯಕರ ಮಂಜು ಆತನ ಸ್ನೇಹಿತರಾದ ಶ್ರೀಕಾಂತ್ ಮತ್ತು ಗುರು ಎಂಬು ವರನ್ನು ಬಂಧಿಸಿರುವ ಪೊಲೀಸರು, ಉಳಿದವರ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ಹಾಸನ ವರದಿ: ಹಾಸನದ ಸುಭಾಷ್ ನಗರದಲ್ಲಿರುವ ಗ್ರಾನೈಟ್ ಉದ್ಯಮಿ ಅಪ್ಪಣ್ಣಗೌಡ ಅವರನ್ನು ಮೇ 15ರಂದು ರಾತ್ರಿ ಅವರ ಬೆಡ್‍ರೂಂನಲ್ಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈಯ್ದಿದ್ದರು. ಈ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾತ್ರಿ ಮನೆಯಲ್ಲಿ ಮಲಗಿದ್ದ ಗ್ರಾನೈಟ್ ಉದ್ಯಮಿಯನ್ನು ಕೊಲೆ ಮಾಡಲು ಹಂತಕರು ಮನೆ ಪ್ರವೇಶಿಸಿದ್ದು ಹೇಗೆ? ಎಂಬ ಪ್ರಶ್ನೆ ಉದ್ಭವವಾಗಿತ್ತು. ಹತ್ಯೆಗೀಡಾದ ಅಪ್ಪಣ್ಣಗೌಡರ ಹಿನ್ನೆಲೆ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರಿಗೆ ಅವರು ಇಬ್ಬರನ್ನು ಮದುವೆಯಾಗಿದ್ದಾರೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆಯೇ ತಮ್ಮ ತನಿಖೆಯನ್ನು ಅವರ ಪತ್ನಿಯರಿಂದಲೇ ಆರಂಭಿಸಿದರು.
ಹತ್ಯೆಗೀಡಾದ ಅಪ್ಪಣ್ಣಗೌಡರ ಮೊದಲ ಪತ್ನಿ ಎಂ.ಎಸ್.ವಿಜಯ, ಹಂತಕರಿಗೆ 10 ಲಕ್ಷ ರೂ.ಗಳಿಗೆ ಸುಪಾರಿ ನೀಡಿ ಪತಿಯನ್ನು ಹತ್ಯೆ ಮಾಡಿಸಿದ್ದಾರೆ ಎಂಬುದು ಬಯಲಾಯಿತು. ತನ್ನ ಪತಿ ಎರಡನೇ ಮದುವೆಯಾಗಿದ್ದರಿಂದ ಬೇಸರಗೊಂಡಿದ್ದ ವಿಜಯ, ಪತಿಯ ಎಲ್ಲಾ ಆಸ್ತಿಗೂ ತಾನೇ ಒಡತಿಯಾಗಬೇಕೆಂದು ನಿರ್ಧರಿಸಿದ್ದಾಳೆ. ಪತಿ ಸಾವನ್ನಪ್ಪಿದರೆ, ಅವರ ಹೆಸರಿನಲ್ಲಿರುವ ಎಲ್ಲಾ ಆಸ್ತಿ ಕಾನೂನು ಪ್ರಕಾರ ತನಗೇ ದೊರೆಯುತ್ತದೆ ಎಂದು ಯೋಚಿಸಿದ್ದ ಆಕೆ, ಪತಿಯನ್ನು ಹತ್ಯೆ ಮಾಡಲು 10 ಲಕ್ಷ ರೂ.ಗಳಿಗೆ ಸುಪಾರಿ ನೀಡಿ ಮುಂಗಡವಾಗಿ 5 ಲಕ್ಷ ರೂ.ಗಳನ್ನು ಕೊಟ್ಟಿದ್ದಳು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.
ಈ ಸಂಬಂಧ ಹತ್ಯೆಗೀಡಾದ ಅಪ್ಪಣ್ಣಗೌಡರ ಮೊದಲ ಪತ್ನಿ ಎಂ.ಎಸ್.ವಿಜಯ ಕಡುಗಿನ ಹೊಸಹಳ್ಳಿ ನಿವಾಸಿ ಕಾರು ಚಾಲಕ ಸುನೀಲ್ ಕುಮಾರ್(42), ಹೆಗ್ಗತ್ತೂರು ಗ್ರಾಮದ ಶಾಮಿಯಾನ ಅಂಗಡಿ ಕೆಲಸಗಾರ ಸುನೀಲ್ (23), ಹೊಡೆನೂರು ಗ್ರಾಮದ ಲಾರಿ ಚಾಲಕ ಪುನೀತ್‍ಗೌಡ (23), ಶಂಭುನಾಥಪುರದ ಲಾರಿ ಚಾಲಕ ಪುಟ್ಟರಾಜು ಅಲಿಯಾಸ್ ಡಿಚ್ಚಿ ಪುಟ್ಟ (41), ಹಾಸನ ವಿಜಯನಗರ ಬಡಾವಣೆಯ ಜಿಮ್‍ಕೋಚ್ ರಾಘವೇಂದ್ರ ಅಲಿಯಾಸ್ ರಾಘು ಅಲಿಯಾಸ್ ಮೋಹನ್ (28), ಚೆನ್ನರಾಯಪಟ್ಟಣ ಲಾರಿ ಚಾಲಕ ರಮೇಶ ಅಲಿಯಾಸ್ ರಾಮು ಅಲಿಯಾಸ್ ಕೋವಿ ರಾಮು (25) ಸೇರಿದಂತೆ 7 ಮಂದಿಯನ್ನು ಬಂಧಿಸಿರುವ ಪೊಲೀಸರು, ಹತ್ಯೆಗೆ ಬಳಸಿದ ಮಾರಕಾಸ್ತ್ರ, ವಾಹನಗಳು ಹಾಗೂ 50 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಪತಿಯನ್ನು ಕೊಲೆ ಮಾಡಲು ಸುಪಾರಿ ನೀಡಿದ್ದ ವಿಜಯ, ಹಂತಕರಿಗೆ ತನ್ನ ಮನೆಯ ಒಂದು ಕೀಲಿಯನ್ನು ನೀಡಿದ್ದಳು. ಹಂತಕರು ಪತ್ತೆಯಾಗಬಾರದೆಂಬ ಕಾರಣಕ್ಕಾಗಿ ಮನೆಯಲ್ಲಿದ್ದ ಸಿಸಿ ಕ್ಯಾಮರಾಗಳನ್ನು ತೆರವು ಮಾಡಲಾಗಿತ್ತು. ಹತ್ಯೆ ನಡೆದ ಮೇ 15ರಂದು ರಾತ್ರಿ ಅಪ್ಪಣ್ಣಗೌಡ ಮನೆಗೆ ಬರುವ ಮುನ್ನವೇ ಹಂತಕರು ಮನೆ ಪ್ರವೇಶಿಸಿ ಒಂದು ಕೋಣೆಯಲ್ಲಿ ಬಚ್ಚಿಟ್ಟುಕೊಂಡಿದ್ದರು. ಅಪ್ಪಣ್ಣಗೌಡ ಊಟ ಮಾಡಿ, ನಿದ್ರಿಸುತ್ತಿದ ವೇಳೆ ತಡ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಅವರನ್ನು ಕೊಲೆ ಮಾಡಲಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.