ಬಿಜೆಪಿ ಚಾಣಕ್ಯನಿಗೆ `ಗೃಹ’ ಬಲ
ಮೈಸೂರು

ಬಿಜೆಪಿ ಚಾಣಕ್ಯನಿಗೆ `ಗೃಹ’ ಬಲ

June 1, 2019

ನವದೆಹಲಿ: ನಿನ್ನೆಯಷ್ಟೇ ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿಯವರು ತಮ್ಮ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಬಿಜೆಪಿಯ ಚಾಣಕ್ಯ ಎಂದೇ ಕರೆಯಲ್ಪಡುವ ಅಮಿತ್ ಶಾ ಅವರಿಗೆ ಮಹತ್ವದ ಗೃಹ ಖಾತೆಯನ್ನು ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಸಿಬ್ಬಂದಿ, ಸಾರ್ವಜನಿಕ ಕುಂದು-ಕೊರತೆ ಮತ್ತು ಪಿಂಚಣಿ, ಪರಮಾಣು ಶಕ್ತಿ, ಬಾಹ್ಯಾಕಾಶ, ಎಲ್ಲಾ ಪ್ರಮುಖ ನೀತಿಗಳ ನಿರ್ವಹಣೆ ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.

ಕರ್ನಾಟಕದಿಂದ ಕೇಂದ್ರ ಸಂಪುಟ ಸೇರಿರುವ ಡಿ.ವಿ.ಸದಾನಂದಗೌಡರಿಗೆ ಕಳೆದ ಅವಧಿಯಲ್ಲಿ ದಿವಂಗತ ಅನಂತ ಕುಮಾರ ನಿರ್ವಹಿಸುತ್ತಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ದೊರೆತಿದೆ. ಪ್ರಹ್ಲಾದ್ ಜೋಷಿ ಅವರಿಗೆ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿಗಾರಿಕೆ ಖಾತೆ ದೊರೆತರೆ, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಮಹತ್ವದ ಹಣಕಾಸು, ಕಾರ್ಪೊರೇಟ್ ವ್ಯವಹಾರಗಳ ಖಾತೆ ನೀಡಲಾಗಿದೆ. ರಾಜ್ಯ ಸಚಿವರಾಗಿರುವ ಸುರೇಶ್ ಅಂಗಡಿ ಅವರಿಗೆ ರೈಲ್ವೆ ರಾಜ್ಯಖಾತೆ ವಹಿಸಲಾಗಿದೆ.

ಇನ್ನುಳಿದಂತೆ ರಾಜಾನಾಥ್ ಸಿಂಗ್ ಅವರಿಗೆ ರಕ್ಷಣಾ ಇಲಾಖೆ, ನಿತಿನ್ ಗಡ್ಕರಿ ಅವರಿಗೆ ಸಾರಿಗೆ, ಹೆದ್ದಾರಿ ಸಚಿವಾಲಯ, ಸಣ್ಣ-ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಖಾತೆ, ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ನರೇಂದ್ರ ಸಿಂಗ್ ತೋಮರ್ ಅವರಿಗೆ ಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರವಿಶಂಕರ್ ಪ್ರಸಾದ್ ಅವರಿಗೆ ಕಾನೂನು ಮತ್ತು ನ್ಯಾಯಾಂಗ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಹರ್ಸೀಮೃತ್ ಕೌರ್ ಅವರಿಗೆ ಆಹಾರ ಸಂರಕ್ಷಣೆ, ತಾವರ್ ತಂದ್ ಗೆಹ್ಲೂಟ್ ಅವರಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯನ್ನು ನೀಡಲಾಗಿದೆ.

ಎಸ್.ಜೈಶಂಕರ್ ಅವರಿಗೆ ವಿದೇಶಾಂಗ ಇಲಾಖೆ, ರಮೇಶ್ ಪೋಕ್ರಿಯಲ್ ಅವರಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, ಅರ್ಜುನ್ ಮುಂಡಾ ಅವರಿಗೆ ಬುಡಕಟ್ಟು ವ್ಯವಹಾರ, ಸ್ಮøತಿ ಇರಾನಿ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಜವಳಿ ಇಲಾಖೆ, ಡಾ. ಹರ್ಷವರ್ಧನ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ಇಲಾಖೆ, ಪ್ರಕಾಶ್ ಜಾವ್ಡೇಕರ್ ಅವರಿಗೆ ಪರಿಸರ, ಅರಣ್ಯ, ಹವಾಮಾನ ಬದಲಾವಣೆ, ಮಾಹಿತಿ ಮತ್ತು ಪ್ರಸಾರ ಇಲಾಖೆ, ಪಿಯೂಷ್ ಗೋಯಲ್ ಅವರಿಗೆ ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕೆ, ಧರ್ಮೇಂದ್ರ ಪ್ರಧಾನ್ ಅವರಿಗೆ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಉಕ್ಕು, ಮುಖ್ತಾರ್ ಅಬ್ಬಾಸ್ ನಕ್ವಿ ಅವರಿಗೆ ಅಲ್ಪಸಂಖ್ಯಾತ ವ್ಯವಹಾರ, ಮಹೇಂದ್ರನಾಥ್ ಪಾಂಡೆ ಅವರಿಗೆ ಕೌಶಲ್ಯಾಭಿವೃದ್ಧಿ, ಹೊಸ ಉದ್ಯಮ, ಅರವಿಂದ ಗಣಪತ್ ಸಾವನ್ ಅವರಿಗೆ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯನ್ನು ನೀಡಲಾಗಿದೆ.

Translate »