ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ‘ಕೈ’ ಮೇಲುಗೈ
ಮೈಸೂರು

ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ‘ಕೈ’ ಮೇಲುಗೈ

June 1, 2019

ಬೆಂಗಳೂರು: ರಾಷ್ಟ್ರದ ಏಕತೆ ಮತ್ತು ಸಮಗ್ರತೆ ದೃಷ್ಟಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ ಕರ್ನಾಟಕದ ಪ್ರಜ್ಞಾವಂತ ಮತದಾರರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ.

ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೆ ಮೇ 29ರಂದು ರಾಜ್ಯದ 61 ಸ್ಥಳೀಯ ಸಂಸ್ಥೆ ಗಳಿಗೆ ನಡೆದ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿ, ಕಾಂಗ್ರೆಸ್ ಮೊದಲ ಸಾಲಿನಲ್ಲಿದ್ದರೆ, ನಂತರದ ಸ್ಥಾನವನ್ನು ಬಿಜೆಪಿ ಮತ್ತು ಜೆಡಿಎಸ್ ಪಡೆದುಕೊಂಡಿವೆ.

61 ನಗರ ಸ್ಥಳೀಯ ಸಂಸ್ಥೆಗಳು ನಗರಸಭೆಯ 248, ಪಟ್ಟಣ ಪಂಚಾಯ್ತಿಯ 330 ಹಾಗೂ ಪುರಸಭೆಯ 783 ಸೇರಿದಂತೆ ಒಟ್ಟು 1,361 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ ಬೆರಳೆಣಿಕೆಯಷ್ಟು ಸಂಸ್ಥೆಗಳ ಮತ ಎಣಿಕೆ ಜೂನ್ 3 ರಂದು ನಡೆಯಲಿದೆ. ಇಂದು 217 ನಗರಸಭೆ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು, ಇದರಲ್ಲಿ ಕಾಂಗ್ರೆಸ್ 90, ಬಿಜೆಪಿ 56 ಮತ್ತು ಜೆಡಿಎಸ್ 38, ಬಿಎಸ್‍ಪಿ 2 ಹಾಗೂ ಪಕ್ಷೇತರರು 31 ಸ್ಥಾನ ಗಳಿಸಿಕೊಂಡಿದ್ದಾರೆ.

ಪುರಸಭೆಯ 714 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದ್ದು, ಇದರಲ್ಲಿ ಕಾಂಗ್ರೆಸ್ 322, ಬಿಜೆಪಿ 184, ಜೆಡಿಎಸ್ 102, ಪಕ್ಷೇತರರು ಮತ್ತು ಇತರರು 106 ಕ್ಷೇತ್ರಗಳಲ್ಲಿ ಜಯ ಗಳಿಸಿದ್ದಾರೆ. 290 ಪಟ್ಟಣ ಪಂಚಾಯಿತಿ ಕ್ಷೇತ್ರ ಗಳಲ್ಲಿ ಬಿಜೆಪಿ 126, ಕಾಂಗ್ರೆಸ್ 97, ಜೆಡಿಎಸ್ 34, ಪಕ್ಷೇತರರು 33 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದಾರೆ.

ಒಟ್ಟಾರೆ 1361 ಕ್ಷೇತ್ರಗಳ ಪೈಕಿ 1221 ಕ್ಷೇತ್ರಗಳ ಫಲಿ ತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ 509, ಬಿಜೆಪಿ 366, ಜೆಡಿಎಸ್ 174 ಮತ್ತು ಪಕ್ಷೇತರರು 172 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಲೋಕಸಭಾ ಚುನಾವಣೆ ಯಲ್ಲಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದರೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು.

ಪ್ರತ್ಯೇಕವಾಗಿ ಸ್ಪರ್ಧಿಸಿದ್ದೇ ಕಾಂಗ್ರೆಸ್‍ಗೆ ಲಾಭವಾದಂತಿದೆ. ಚುನಾವಣೆ ನಡೆದ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದರೂ, ಬಹುತೇಕ ಸಂಸ್ಥೆ ಅತಂತ್ರ ಸ್ಥಿತಿಗೆ ಬಂದಿವೆ. ಪಕ್ಷೇತರರು ಹಾಗೂ ಸರ್ಕಾರದಲ್ಲಿನ ಮಿತ್ರಪಕ್ಷವಾದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಶೇ 70 ರಷ್ಟು ಸಂಸ್ಥೆಗಳನ್ನು ಕಾಂಗ್ರೆಸ್ ಅಧಿಕಾರ ಹಿಡಿಯ ಬಹುದಾಗಿದೆ. ಮತ್ತೆ ಕೆಲವೆಡೆ ರಾಜಕೀಯ ಪಕ್ಷಗಳನ್ನು ಬದಿಗಿರಿಸಿ ಪಕ್ಷೇತರರು ಒಂದಾಗಿ ಸುಮಾರು 15 ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ
ಹಿಡಿಯುವ ಹಂತಕ್ಕೆ ಬಂದಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆದು, ಕಳೆದ 23 ರಂದು ಫಲಿತಾಂಶ ಪ್ರಕಟಗೊಂಡು ಬಿಜೆಪಿ 25 ಸ್ಥಾನಗಳನ್ನು ಗಳಿಸಿದರೆ, ಇನ್ನುಳಿದ ಮೂರು ಸ್ಥಾನವನ್ನು ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರು ತಲಾ ಒಂದನ್ನು ಸಮನಾಗಿ ಹಂಚಿಕೊಂಡಿದ್ದಾರೆ.

ಫಲಿತಾಂಶ ಪ್ರಕಟಗೊಂಡ ನಂತರ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜ್ಯದ ಪ್ರಜ್ಞಾವಂತ ಮತದಾರರು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ ಮತ ಹಾಕಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿ, ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಕಳೆದ ಮೂರು ದಿನಗಳಿಂದ ಕಸರತ್ತು ನಡೆಸುತ್ತಿರುವ ಬೆನ್ನ ಹಿಂದೆಯೇ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಅವರಿಗೆ ಒಂದಷ್ಟು ನೆಮ್ಮದಿ ತಂದಿದೆ. ಅಲ್ಪ ಅಂತರದಲ್ಲೇ ರಾಜ್ಯದ ಜನತೆ ಇಂತಹ ಫಲಿತಾಂಶ ನೀಡಿರುವುದು ಬಿಜೆಪಿಗೆ ಆಶ್ಚರ್ಯವುಂಟು ಮಾಡಿದೆ. ಮತದಾರರು ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಮಟ್ಟಕ್ಕೆ ಅನುಗುಣವಾಗಿ ತಮ್ಮ ಮತ ಚಲಾಯಿಸುತ್ತಿದ್ದಾರೆ ಎಂದು ಈ ಫಲಿತಾಂಶದಿಂದ ಸಾಬೀತಾಗಿದೆ. ನಗರ ಪಾಲಿಕೆ ಚುನಾವಣೆಯಲ್ಲಿ ಕೆಲವು ಕಡೆ ಮತದಾರರು ಒಂದೇ ಪಕ್ಷಕ್ಕೆ ಸ್ಪಷ್ಟ ಜನಾದೇಶ ನೀಡಿದ್ದರೆ, ಇನ್ನೂ ಕೆಲವು ಕಡೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

Translate »