ನಂಜನಗೂಡು ನಗರಸಭೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ
ಮೈಸೂರು

ನಂಜನಗೂಡು ನಗರಸಭೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ

June 1, 2019

ಮೈಸೂರು: ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳ ಒಂದು ನಗರ ಸಭೆ, 6 ಪುರಸಭೆ ಮತ್ತು 4 ಪಟ್ಟಣ ಪಂಚಾಯ್ತಿಗಳ ಫಲಿತಾಂಶ ಹೊರಬಿದ್ದಿದ್ದು, ಮೈಸೂರು ಜಿಲ್ಲೆಯಲ್ಲಿ ಚುನಾವಣೆ ನಡೆದ ಏಕೈಕ ನಗರ ಸಭೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ಜೆಡಿಎಸ್ 2, ಕಾಂಗ್ರೆಸ್, ಬಿಜೆಪಿ ತಲಾ ಒಂದು ಪುರಸಭೆಯ ಆಡಳಿತದ ಚುಕ್ಕಾಣಿ ಹಿಡಿದಿವೆ. 2 ಪುರಸಭೆಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ. 4 ಪಟ್ಟಣ ಪಂಚಾಯ್ತಿಗಳ ಪೈಕಿ ಒಂದರಲ್ಲಿ ಕಾಂಗ್ರೆಸ್ ಅಧಿಪತ್ಯ ಸಾದಿಸಿದರೆ, ಉಳಿದ 3 ಪಪಂಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ.

ಮೈಸೂರು ಜಿಲ್ಲೆಯ ನಂಜನಗೂಡು ನಗರ ಸಭೆಯ 31 ವಾರ್ಡ್ ಗಳಿಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು, ಅದು 15 ಸ್ಥಾನ ಪಡೆದರೆ, ಕಾಂಗ್ರೆಸ್ 10, ಜೆಡಿಎಸ್ ಮತ್ತು ಪಕ್ಷೇತರರಿಗೆ ತಲಾ 3 ಸ್ಥಾನಗಳು ದೊರೆತಿವೆ. ಈ ನಗರ ಸಭೆಯ ಆಡಳಿತದ ಚುಕ್ಕಾಣಿ ಹಿಡಿಯಲು 16 ಸ್ಥಾನಗಳು ಬೇಕಾಗಿದ್ದು, ಇಲ್ಲಿ ಅತಂತ್ರ ಫಲಿತಾಂಶ ಬಂದಿದೆ. ತಿ.ನರಸೀಪುರ ತಾಲೂಕು ಬನ್ನೂರು ಪುರಸಭೆ 23 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 12 ಸ್ಥಾನಗಳನ್ನು ಪಡೆಯುವ ಮೂಲಕ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಉಳಿದಂತೆ ಕಾಂಗ್ರೆಸ್‍ಗೆ 7, ಬಿಜೆಪಿಗೆ 2 ಮತ್ತು ಇಬ್ಬರು ಪಕ್ಷೇತರರಿಗೆ ಸ್ಥಾನ ದೊರಕಿದೆ. ಕೆ.ಆರ್.ನಗರ ಪುರಸಭೆಯ 23 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 14 ಸ್ಥಾನಗಳನ್ನು ಪಡೆದು ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದರೆ, ಜೆಡಿಎಸ್ 8 ಮತ್ತು ಬಿಜೆಪಿ 1 ಸ್ಥಾನವನ್ನು ಪಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ಪುರಸಭೆಯ 23 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ 9, ಕಾಂಗ್ರೆಸ್ 5, ಬಿಜೆಪಿ 2 ಸ್ಥಾನ ಪಡೆದಿದ್ದರೆ, ಪಕ್ಷೇತರರು 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಪುರಸಭೆಯಲ್ಲಿ ಅತಂತ್ರ ಫಲಿತಾಂಶ ಬಂದಿದೆ. ಕೆ.ಆರ್.ಪೇಟೆ ಪುರಸಭೆಯ 23 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ 11, ಕಾಂಗ್ರೆಸ್ 10, ಬಿಜೆಪಿ ಮತ್ತು ಪಕ್ಷೇತರರು ತಲಾ ಒಂದು ಸ್ಥಾನ ಪಡೆದಿದ್ದು, ಇಲ್ಲಿ ಅತಂತ್ರ ಫಲಿತಾಂಶ ಬಂದಿದೆ. ಶ್ರೀರಂಗಪಟ್ಟಣ ಪುರಸಭೆಯ 23 ಸ್ಥಾನಗಳಿಗೆ ನಡೆದ ಚುನಾವಣೆಗಳಲ್ಲಿ 12 ಸ್ಥಾನಗಳನ್ನು ಪಡೆದು ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದರೆ, ಕಾಂಗ್ರೆಸ್ 8, ಬಿಜೆಪಿ 1 ಹಾಗೂ ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ಚಾಮರಾಜನಗರ ಗುಂಡ್ಲುಪೇಟೆ ಪುರಸಭೆಯ 23 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 13 ಸ್ಥಾನ ಪಡೆದಿರುವ ಬಿಜೆಪಿ ಅಧಿಕಾರದ ಗದ್ದುಗೆ ಏರಿದರೆ, ಕಾಂಗ್ರೆಸ್‍ಗೆ 8, ಎಸ್‍ಡಿಪಿಐ ಮತ್ತು ಪಕ್ಷೇತರರಿಗೆ ತಲಾ ಒಂದು ಸ್ಥಾನ ಲಭಿಸಿದೆ. ಯಳಂದೂರು ಪಟ್ಟಣ ಪಂಚಾಯ್ತಿಯ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 10 ಸ್ಥಾನ ಪಡೆದು ಕಾಂಗ್ರೆಸ್ ಅಧಿಕಾರ ಹಿಡಿದರೆ, ಉಳಿದ ಒಂದು ಸ್ಥಾನ ಬಿಜೆಪಿ ಪಾಲಾಗಿದೆ. ಹನೂರು ಪಟ್ಟಣ ಪಂಚಾಯ್ತಿಯ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ 6, ಕಾಂಗ್ರೆಸ್ 4 ಮತ್ತು ಬಿಜೆಪಿ 3 ಸ್ಥಾನಗಳನ್ನು ಪಡೆದಿದ್ದು, ಇಲ್ಲಿ ಅತಂತ್ರ ಫಲಿತಾಂಶ ಬಂದಿದೆ. ಹಾಸನ ಜಿಲ್ಲೆ ಅರಕಲಗೂಡು ಪಟ್ಟಣ ಪಂಚಾಯ್ತಿಯ 17 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ತಲಾ 6 ಸ್ಥಾನ ಪಡೆದರೆ, ಕಾಂಗ್ರೆಸ್‍ಗೆ 5 ಸ್ಥಾನ ಲಭಿಸಿದೆ. ಇಲ್ಲಿ ಅತಂತ್ರ ಫಲಿತಾಂಶ ಬಂದಿದೆ. ಆಲೂರು ಪಟ್ಟಣ ಪಂಚಾಯ್ತಿಗೆ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ 5, ಬಿಜೆಪಿ 2, ಕಾಂಗ್ರೆಸ್‍ಗೆ 1 ಸ್ಥಾನ ಲಭಿಸಿದರೆ, ಮೂವರು ಪಕ್ಷೇತರರು ಗೆಲುವು ಸಾಧಿಸಿದ್ದು, ಇಲ್ಲಿ ಅತಂತ್ರ ಫಲಿತಾಂಶ ಬಂದಿದೆ.

Translate »