ಮೈಸೂರು: ಕೇರಳದ ವೈನಾಡು ಹಾಗೂ ಕಾವೇರಿ ಕಣಿವೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕೆಆರ್‍ಎಸ್‍ಗೆ ಒಳಹರಿವು ಹೆಚ್ಚಿ ಆ.16ರಂದು ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್ಸ್ ನೀರು ನದಿಗೆ ಬಿಟ್ಟಿದ್ದ ಹಿನ್ನೆಲೆಯಲ್ಲಿ ಉಂಟಾಗಿದ್ದ ನೆರೆಯಿಂದಾಗಿ ಕೊಚ್ಚಿ ಹೋಗಿದ್ದ ರಂಗನ ತಿಟ್ಟು ಪಕ್ಷಿಧಾಮವನ್ನು ಪುನಶ್ಚೇತನಗೊಳಿ ಸುವುದಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಸಾವಿರಾರು ಮರಳು ಮೂಟೆಗಳನ್ನು ಬಳಸಿ ದ್ವೀಪಗಳಿಗೆ ಹೊಸ ರೂಪ ನೀಡಲಾಗುತ್ತಿದೆ.
ಜೀವನದಿ ಕಾವೇರಿಯಲ್ಲಿ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಹರಿದ ಭಾರಿ ಪ್ರಮಾಣದ ನೀರು ರಂಗನ ತಿಟ್ಟು ಪಕ್ಷಿಧಾಮವನ್ನು ಬಹುತೇಕ ತೊಳೆದು ಹಾಕಿತ್ತು. ಪಕ್ಷಿಧಾಮದಲ್ಲಿದ್ದ ಪ್ರಮುಖ ಆರೇಳು ದ್ವೀಪಗಳಿಗೆ ಭಾರಿ ಪ್ರಮಾಣದ ಹಾನಿ ಮಾಡಿದ್ದ ನೆರೆ, ಪಕ್ಷಿ ಸಂಕುಲಕ್ಕ್ಕೂ ಗಂಡಾಂತರ ಉಂಟು ಮಾಡಿತ್ತು. ನೀರಿನ ರಭಸಕ್ಕೆ ದ್ವೀಪದಲ್ಲಿ ಮಣ್ಣು ಕೊಚ್ಚಿ ಹೋಗಿದ್ದು, ಕೆಲವು ಮರಗಳು ಬುಡ ಮೇಲಾಗಿ ನೀರು ಪಾಲಾಗಿದ್ದವು. ಹಲವು ಪಕ್ಷಿಗಳು ಮರಗಳ ಬುಡದಲ್ಲಿ ಗೂಡು ಕಟ್ಟಿ ಸಂತಾನಾಭಿವೃದ್ಧಿ ಮಾಡುವುದರಿಂದ ಇದೀಗ ದ್ವೀಪಗಳ ಬುಡಗಳನ್ನು ಭದ್ರ ಪಡಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ಎಚ್ಚರಿಕೆ ಹೆಜ್ಜೆ: ಡಿಸಿಎಫ್ ಸಿದ್ರಾಮಪ್ಪ ಚಳ್ಕಾಪುರೆ ನೇತೃತ್ವದಲ್ಲಿ ಆರ್‍ಎಫ್‍ಒ ಅನನ್ಯ ಕುಮಾರ್, ಡಿಆರ್‍ಎಫ್ ಎಂ.ಪುಟ್ಟ ಮಾದೇಗೌಡ ಹಾಗೂ ಸಿಬ್ಬಂದಿ ರಂಗನ ತಿಟ್ಟು ಪಕ್ಷಿಧಾಮಕ್ಕೆ ಹೊಸ ರೂಪ ನೀಡುವ ಹೊಣೆಯನ್ನು ಹೊತ್ತುಕೊಂಡು ಕೆಲಸ ಆರಂಭಿಸಿದ್ದಾರೆ. ರಂಗನತಿಟ್ಟಿನಲ್ಲಿ 120ಕ್ಕೂ ಹೆಚ್ಚು ಮೊಸಳೆಗಳಿವೆ. ಈ ಹಿನ್ನೆಲೆಯಲ್ಲಿ ದುರಸ್ತಿ ಕಾಮಗಾರಿ ನಡೆಸು ವಾಗ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾ ಗಿದೆ. ಕಾವಲು ಇಟ್ಟು, ವಿಶೇಷ ಪರಿಣತಿ ಹೊಂದಿರುವ ನೌಕರರ ಬಳಸಿಕೊಂಡು ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಕೆಲ ವೊಮ್ಮೆ ದ್ವೀಪದ ಮೇಲೆ ನಿಂತು, ಕೆಲವೊಮ್ಮೆ ನೀರಿನಲ್ಲಿ ಇಳಿದು ಕೆಲಸ ಮಾಡಬೇಕಾ ಗುತ್ತದೆ. ಈ ವೇಳೆ ಮೊಸಳೆ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ.
ಭಾರಿ ಹಾನಿಯಾಗಿತ್ತು: ರಂಗನತಿಟ್ಟು ಪಕ್ಷಿಧಾಮದಲ್ಲಿ 35 ದ್ವೀಪಗಳಿದ್ದು, ಅವುಗಳಲ್ಲಿ ವಿವಿಧ ಜಾತಿಯ ಪಕ್ಷಿಗಳು ವಾಸಿ ಸುತ್ತಿದ್ದ 10 ದ್ವೀಪಗಳು ನೆರೆಯಲ್ಲಿ ಕೊಚ್ಚಿ ಹೋಗಿವೆ. ಪ್ರಮುಖವಾಗಿ ಓಪನ್‍ಬಿಲ್ಡ್ ಸ್ಟಾರ್ಕ್, ಪರ್ಪಲ್ ಹೆರಾನ್ ದ್ವೀಪ, ಕಾಡುಣಸೆ ದ್ವೀಪ, ಕಾರ್ಮೋರೆಂಟ್ ದ್ವೀಪ ಸೇರಿದಂತೆ 10 ದ್ವೀಪಗಳ ಸುತ್ತಲೂ ಮರಳಿನ ಮೂಟೆ ಇಟ್ಟು, ನಂತರ ದ್ವೀಪದ ಮೇಲ್ಭಾಗಕ್ಕೆ ಮಣ್ಣನ್ನು ಸುರಿದು ಗಟ್ಟಿಗೊಳಿ ಸಲಾಗುತ್ತಿದೆ. ಅಲ್ಲದೆ ದ್ವೀಪದಲ್ಲಿ ಹೊಳೆ ಮತ್ತಿ, ಆಲ, ನೀರಂಜಿ, ಕಾಡುಣಸೆ, ಅತ್ತಿ ಸೇರಿದಂತೆ ಸ್ಥಳೀಯ ಜಾತಿಯ ಗಿಡಗಳನ್ನು ನೆಡಲಾಗುತ್ತದೆ. ಇದುವರೆಗೂ 2 ಸಾವಿರ ನೀರಂಜಿ ಕಟಿಂಗ್ಸ್ ಅನ್ನು ನೆಡಲಾಗಿದೆ.
ಮುಂದಾಲೋಚನೆಯಿಂದಾಗಿ ಈ ಹಿಂದೆ ಇದ್ದ ದ್ವೀಪದ ವಿಸ್ತೀರ್ಣವನ್ನು ಹೆಚ್ಚಿಸ ಲಾಗುತ್ತಿದೆ. ನುರಿತ ಕೆಲಸಗಾರರು ನೀರಿ ನಲ್ಲಿ ಸುಮಾರು 6 ಅಡಿ ಮುಳುಗಿ ಮರಳು ಮೂಟೆಯನ್ನು ಸುಭದ್ರವಾಗಿ ಜೋಡಿ ಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
– ಎಂ.ಟಿ.ಯೋಗೇಶ್ ಕುಮಾರ್