ಶಿರಾಡಿ ಘಾಟ್ ರಸ್ತೆ ಸಂಚಾರಕ್ಕೆ ಮುಕ್ತ
ಮೈಸೂರು

ಶಿರಾಡಿ ಘಾಟ್ ರಸ್ತೆ ಸಂಚಾರಕ್ಕೆ ಮುಕ್ತ

July 16, 2018

ಮೈಸೂರು: ಕಾಂಕ್ರಿಟೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಸಂಚಾರ ಸ್ಥಗಿತಗೊಂಡಿದ್ದ ಶಿರಾಡಿ ಘಾಟ್ ರಸ್ತೆಯನ್ನು ಇಂದು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ರಾಜಧಾನಿ ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆಯನ್ನು ಸಕಲೇಶಪುರ ತಾಲೂಕು ಕೆಂಪುಹೊಳೆ ಜಂಕ್ಷನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಲೋಕಾರ್ಪಣೆ ಮಾಡಿದರು.

ತೀವ್ರ ಹದಗೆಟ್ಟಿದ್ದ ಶಿರಾಡಿ ಘಾಟ್ ರಸ್ತೆಯ 2ನೇ ಹಂತದ 12.38 ಕಿ.ಮೀ. ಉದ್ದದ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯನ್ನು ಕಳೆದ ಜನವರಿ 20ರಂದು ಕೈಗೆತ್ತಿಕೊಳ್ಳಲಾಗಿತ್ತು. ಈ ಕಾಮಗಾರಿಗಾಗಿ 77 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೊದಲ ಹಂತದ ಕಾಮಗಾರಿಯಲ್ಲಿ 13 ಕಿ.ಮೀ. ರಸ್ತೆಯನ್ನು ಕಳೆದ ಮೂರು ವರ್ಷಗಳ ಹಿಂದೆ ಕಾಂಕ್ರಿಟೀಕರಣಗೊಳಿಸಲಾಗಿತ್ತು. ಈ ಕಾಮಗಾರಿಯು ಮುಗಿದಿರುವ ಹಿನ್ನೆಲೆಯಲ್ಲಿ ಶಿರಾಡಿ ಘಾಟ್‍ನ ಒಟ್ಟು 26 ಕಿ.ಮೀ. ರಸ್ತೆ ಸಂಪೂರ್ಣವಾಗಿ ಬಳಕೆಗೆ ಮುಕ್ತವಾದಂತಾಗಿದೆ.

ಸಂಚಾರಕ್ಕೆ ರಸ್ತೆ ಮುಕ್ತವಾಗಿದ್ದರೂ ಕೆಲವೆಡೆ ತಡೆಗೋಡೆ ನಿರ್ಮಾಣ, ಸೂಚನಾ ಫಲಕಗಳ ಅಳವಡಿಕೆ ಹಾಗೂ ರಸ್ತೆ ಅಂಚಿನಲ್ಲಿ ಮಣ್ಣು ಹಾಕುವುದು ಮುಂತಾದ ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಇರುವುದರಿಂದ ಸದ್ಯಕ್ಕೆ ಲಘು ವಾಹನಗಳ ಸಂಚಾರಕ್ಕೆ ಮಾತ್ರ ರಸ್ತೆಯನ್ನು ಮುಕ್ತಗೊಳಿಸಲಾಗಿದೆ. ಉಳಿದ ಕಾಮಗಾರಿಯನ್ನು 15 ದಿನಗಳ ಒಳಗಾಗಿ ಪೂರ್ಣಗೊಳಿಸಿ ಭಾರೀ ವಾಹನಗಳ ಸಂಚಾರಕ್ಕೂ ಅನುವು ಮಾಡಿಕೊಡಬೇಕೆಂದು ಸಚಿವರು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಈ ರಸ್ತೆ ಬಂದ್ ಆಗಿದ್ದರಿಂದ ಬೆಂಗಳೂರಿನಿಂದ ಮಂಗಳೂರು, ಧರ್ಮಸ್ಥಳ ಮುಂತಾದ ಕಡೆಗೆ ಹೋಗುವ ಪ್ರಯಾಣಿಕರು ಸುತ್ತಿ ಬಳಸಿ ಹೋಗಬೇಕಾಗಿತ್ತು. ಕೊನೆಗೂ ಕಾಮಗಾರಿ ಪೂರ್ಣಗೊಂಡು ಸದ್ಯಕ್ಕೆ ಲಘು ವಾಹನಗಳಲ್ಲಿ ತೆರಳುವ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

ರಸ್ತೆ ಉದ್ಘಾಟನೆ ನಂತರ ಗುಂಡ್ಯಾದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಶಿರಾಡಿ ಘಾಟ್ ರಸ್ತೆಯನ್ನು 2 ಹಂತಗಳಲ್ಲಿ ಕಾಂಕ್ರಿಟೀಕರಣ ಮಾಡಲಾಗಿದೆ. ಈ ರಸ್ತೆಯಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲು ಈ ಹಿಂದೆಯೇ ಯೋಜನೆ ರೂಪಿಸಲಾಗಿದೆ. ಅದಕ್ಕೆ 12 ಸಾವಿರ ಕೋಟಿ ಅಗತ್ಯವಿದ್ದು, ಕೇಂದ್ರ ಸರ್ಕಾರ ಸಹಕಾರ ನೀಡಿದರೆ ಸುರಕ್ಷಿತವಾದ ಸುರಂಗ ಮಾರ್ಗದ ಕನಸು ನನಸಾಗಲಿದೆ. ಶಿರಾಡಿ ರಸ್ತೆ ಸಂಚಾರಕ್ಕೆ ಮುಕ್ತವಾಗಿರುವುದರಿಂದ ಇಂದು ರಾತ್ರಿಯಿಂದಲೇ ಮಂಗಳೂರು, ಧರ್ಮಸ್ಥಳ ಮುಂತಾದ ಕಡೆಗೆ ತೆರಳುವ ಪ್ರಯಾಣಿಕರು ಈ ಮಾರ್ಗದಲ್ಲಿಯೇ ಸಂಚರಿಸಬಹುದಾಗಿದೆ. ಆದರೆ ರಸ್ತೆ ಬದಿಯಲ್ಲಿ ತಡೆಗೋಡೆ ಸೇರಿದಂತೆ ಸಣ್ಣಪುಟ್ಟ ಕಾಮಗಾರಿ ಬಾಕಿ ಇರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಸತಿ ಸಚಿವ ಯು.ಟಿ.ಖಾದರ್, ಸಂಸದ ನಳೀನ್ ಕುಮಾರ್ ಕಟೀಲ್, ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಮುಂತಾದವರು ಭಾಗವಹಿಸಿದ್ದರು.

ರಸ್ತೆ ಉದ್ಘಾಟನೆಗೂ ವಾಸ್ತು ನೋಡಿದ ರೇವಣ್ಣ…!

ವಾಸ್ತು ಮೇಲೆ ಅಪಾರ ನಂಬಿಕೆ ಇಟ್ಟಿರುವ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಇಂದು ಶಿರಾಡಿ ಘಾಟ್ ರಸ್ತೆ ಉದ್ಘಾಟನೆ ವೇಳೆಯೂ ವಾಸ್ತು ಪ್ರಕಾರವೇ ಟೇಪ್ ಕತ್ತರಿಸಿದರು.

ಸಕಲೇಶಪುರ ತಾಲೂಕು ಕೆಂಪುಹೊಳೆ ಜಂಕ್ಷನ್‍ನಿಂದ ಮಂಗಳೂರು ಕಡೆಗೆ ತೆರಳುವ ರಸ್ತೆ ಉದ್ಘಾಟನೆಗೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದರು. ಉದ್ಘಾಟನೆಗೆ ಆಗಮಿಸಿದ ರೇವಣ್ಣ ಅವರು, ಪಶ್ಚಿಮಾಭಿಮುಖವಾಗಿ ನಿಂತು ಟೇಪ್ ಕಟ್ ಮಾಡಬೇಕಾಗಿತ್ತು. ಅದನ್ನು ಕಂಡ ರೇವಣ್ಣ, `ಶುಭ ಕಾರ್ಯಗಳನ್ನು ಪೂರ್ವಾಭಿಮುಖವಾಗಿ ನಿಂತು ಮಾಡಬೇಕು’ ಎಂದು ಹೇಳುತ್ತಾ, ಟೇಪ್‍ನ ಕೆಳಗೆ ನುಸುಳಿ ಇತ್ತ ಬಂದು ಎಲ್ಲರನ್ನೂ ಪೂರ್ವಾಭಿಮುಖವಾಗಿ ನಿಲ್ಲುವಂತೆ ಸೂಚಿಸಿದರು. ರೇವಣ್ಣ ವರ್ತನೆಯಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಕ್ಕಾಬಿಕ್ಕಿಯಾದರೂ, ರೇವಣ್ಣ ಸೂಚನೆಯಂತೆ ಪೂರ್ವಾಭಿಮುಖವಾಗಿ ನಿಲ್ಲಲು ಆರಂಭಿಸಿದರು. ರೇವಣ್ಣ ದಿಕ್ಕು ಬದಲಿಸಿದ್ದರಿಂದ ನೂಕು-ನುಗ್ಗಲು ಉಂಟಾಯಿತು. ಕೊನೆಗೂ ತಾವು ನಂಬಿರುವ ವಾಸ್ತು ಪ್ರಕಾರ ರೇವಣ್ಣ ಅವರು ಶಿರಾಡಿ ಘಾಟ್ ರಸ್ತೆ ಉದ್ಘಾಟಿಸಿದರು.

ಗುತ್ತಿಗೆದಾರರಿಗೆ ಸನ್ಮಾನ ಮಾಡಲು ನಿರಾಕರಣೆ

ಯಾವುದೇ ಕಾಮಗಾರಿ ಪೂರ್ಣಗೊಂಡರೂ ಅದರ ಗುತ್ತಿಗೆದಾರರನ್ನು ಸನ್ಮಾನಿಸುವುದು ಸಂಪ್ರದಾಯ. ಅದರಂತೆ ಶಿರಾಡಿ ಘಾಟ್ ರಸ್ತೆ ಕಾಮಗಾರಿ ನಡೆಸಿದ ಗುತ್ತಿಗೆದಾರನನ್ನು ಸನ್ಮಾನಿಸುವಂತೆ ವಸತಿ ಸಚಿವ ಯು.ಟಿ.ಖಾದರ್ ಅವರು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಸೂಚಿಸಿದರಾದರೂ, ರೇವಣ್ಣ ಅವರು ಗುತ್ತಿಗೆದಾರನ ಸನ್ಮಾನಿಸಲು ನಿರಾಕರಿಸಿದರು.

ವಾಸ್ತು, ಜ್ಯೋತಿಷ್ಯದಲ್ಲಿ ಅಪಾರ ನಂಬಿಕೆ ಹೊಂದಿರುವ ರೇವಣ್ಣ ಅವರು ಗುತ್ತಿಗೆದಾರನನ್ನು ಸನ್ಮಾನಿಸಲು ನಿರಾಕರಿಸಿರುವುದರ ಹಿಂದೆ ಯಾವುದಾದರೂ ವಿಶೇಷ ಕಾರಣವಿದೆಯೇ? ಗುತ್ತಿಗೆದಾರನನ್ನು ಸನ್ಮಾನಿಸಬಾರದು ಎಂದು ಯಾವುದಾದರೂ ಜ್ಯೋತಿಷ್ಯರು ರೇವಣ್ಣ ಅವರಿಗೆ ಹೇಳಿರಬಹುದೇ? ಎಂಬ ಗುಸು ಗುಸು ಕೇಳಿಬಂತು. ಆದರೆ ರೇವಣ್ಣ ಗುತ್ತಿಗೆದಾರನ ಸನ್ಮಾನಿಸಲು ನಿರಾಕರಿಸಿದ್ದು ಯಾಕೆ? ಎಂಬ ಗುಟ್ಟು ಮಾತ್ರ ಕೊನೆವರೆಗೂ ರಟ್ಟಾಗಲಿಲ್ಲ.

Translate »