ನೆಲೆಗಾಗಿ ಕಾದಾಟ: ಹುಲಿ ಬಲಿ
ಮೈಸೂರು

ನೆಲೆಗಾಗಿ ಕಾದಾಟ: ಹುಲಿ ಬಲಿ

July 10, 2021

ಹೆಚ್.ಡಿ.ಕೋಟೆ, ಜು.9(ಎಂಟಿವೈ, ಮಂಜು)- ನೆಲೆ ಕಂಡುಕೊಳ್ಳಲು 2 ಹುಲಿಗಳ ನಡುವೆ ನಡೆದ ಭೀಕರ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 5 ವರ್ಷ ಗಂಡು ಹುಲಿಯನ್ನು ಸೆರೆ ಹಿಡಿದು ಚಿಕಿತ್ಸೆಗಾಗಿ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ ಗುಂಡ್ರೆ ವಲಯದ ನಾಯಳ್ಳ ಗಸ್ತಿನ ಹಾದಿಯಲ್ಲಿ ಸುತ್ತನಹಳ್ಳ ಸಮೀಪ ಹಿನ್ನೀರಿನ ಬಳಿ ಗಂಭೀರ ವಾಗಿ ಗಾಯಗೊಂಡಿದ್ದ ಹುಲಿ ಪತ್ತೆಯಾಗಿತ್ತು. ಎನ್‍ಟಿಸಿಎ (ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ) ಅನುಮತಿ ಪಡೆದು ಶುಕ್ರವಾರ ಬೆಳಗ್ಗೆ ಸುರಕ್ಷತಾ ಕ್ರಮದೊಂದಿಗೆ ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿ, ಮಧ್ಯಾಹ್ನ 12 ಗಂಟೆ ವೇಳೆಗೆ ಸೆರೆ ಹಿಡಿಯಲಾಗಿತ್ತು. ಕಾಲು, ಪಕ್ಕೆ, ಮುಖ, ಹೊಟ್ಟೆ, ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಹುಲಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬನ್ನೇರುಘಟ್ಟ ಬಯೋ ಲಾಜಿಕಲ್ ಪಾರ್ಕ್‍ಗೆ ಕೊಂಡೊಯ್ಯುವ ವೇಳೆ ಮೈಸೂ ರಿನ ಬಳಿ ಹುಲಿ ಮೃತಪಟ್ಟಿದೆ. ಕೂಡಲೇ ಹುಲಿ ಕಳೇಬರ ವನ್ನು ಮತ್ತೆ ಗುಂಡ್ರೆ ವಲಯಕ್ಕೆ ಕೊಂಡೊಯ್ದು ಸಂಜೆ ವೇಳೆಗೆ ನಿಯಮಾನುಸಾರ ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಕ್ರಿಯೆ ನೆರವೇರಿಸಲಾಯಿತು.

ಭೀಕರ ಕಾಳಗ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರಸಂತೆ ವಲಯ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್‍ನಲ್ಲಿ 2020ರಲ್ಲಿ ಸೆರೆ ಸಿಕ್ಕಿದ್ದ 5 ವರ್ಷದ ಗಂಡು ಹುಲಿ ನೆಲೆ ಕಂಡುಕೊಳ್ಳಲು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ವಲಯಕ್ಕೆ ಬಂದಾಗ ಈ ಕಾದಾಟ ನಡೆದಿದೆ. ಸುಮಾರು 10 ದಿನದ ಹಿಂದೆಯೇ ಕಾದಾಟ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಆ ಭಾಗದಲ್ಲಿದ್ದ ಪ್ರಬಲ ಗಂಡು ಹುಲಿಯೊಂದಿಗೆ ಕಾಳಗಕ್ಕೆ ಇಳಿದು ಗಂಭೀರ ವಾಗಿ ಗಾಯಗೊಂಡಿದೆ.

ಎದುರಾಳಿ ಹುಲಿ ಹೊಡೆತಕ್ಕೆ ಸೊಂಟದ ಮೂಳೆ, ಕಾಲು ಮುರಿದಿದೆ. ಮುಖದ ಭಾಗದಲ್ಲಿ ಪಂಚಿನ ಏಟಿಗೆ ಆಳವಾದ ಗಾಯವಾಗಿದೆ. ಪಕ್ಕೆ, ಬೆನ್ನೆಲುಬು, ಮುಂಗಾಲು, ಕತ್ತಿಗೂ ತೀವ್ರ ಗಾಯವಾಗಿದೆ. ಗುಂಡ್ರೆ ವಲಯ ವ್ಯಾಪ್ತಿಯ ಕಬಿನಿ ಹಿನ್ನೀರಿನಲ್ಲಿ ತೆವಳುತ್ತಲೇ ಬಂದ ಈ ಹುಲಿ 3 ದಿನದಿಂದ ಗಾಯದ ನೋವು ತಾಳಲಾರದೇ ನೀರಿನಲ್ಲೇ ಇತ್ತು. ಗಸ್ತಿಗೆ ತೆರಳಿದ್ದ ಸಿಬ್ಬಂದಿ ಹಿನ್ನೀರಿನಲ್ಲಿದ್ದ ಹುಲಿಗೆ ಗಾಯವಾಗಿರುವುದನ್ನು ಗಮನಿಸಿದ್ದರು. ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲು ಅವಕಾಶವಿಲ್ಲದ ಕಾರಣ, ಎರಡು ದಿನದಿಂದ ಹುಲಿ ಮೇಲೆ ನಿಗಾ ಇಟ್ಟಿದ್ದರು. ಗಂಭೀರತೆ ಹಿನ್ನೆಲೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹಿರಿಯ ಅಧಿಕಾರಿಗಳು ಎನ್‍ಟಿಸಿಎಗೆ ಮಾಹಿತಿ ನೀಡಿದ್ದರು. ಹುಲಿ ಸೆರೆಗೆ ಬೋನ್ ಇಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಒಂದು ಬೋನ್ ಇಟ್ಟು, ಅದರೊಳಗೆ ಮೇಕೆಯೊಂದನ್ನು ಕಟ್ಟಿ ಹಾಕಿ ಹುಲಿ ಸಮೀಪದಲ್ಲಿದ್ದ ಪೊದೆಯೊಂದರ ಬಳಿ ಇಡಲಾಗಿತ್ತು. ಮೇಲೆದ್ದು ಬೋನ್ ಬಳಿಯೂ ಹೋಗಲಾರದಷ್ಟು ನಿಶಕ್ತಿಯಾಗಿದ್ದ ಹುಲಿಯನ್ನು ಇಂದು ಬೆಳಗ್ಗೆ ಪಶುವೈದ್ಯ ಡಾ.ವಸೀಂ ಮಿರ್ಜಾ ಅರವಳಿಕೆ ಡಾಟ್ ನೀಡಿದರು. ಬಳಿಕ ಹುಲಿ ಪ್ರಜ್ಞೆ ತಪ್ಪಿದ ನಂತರ ಬಲೆಯಲ್ಲಿ ಸುತ್ತಿಕೊಂಡು ವಾಹನದ ಮೇಲೆ ಇಡಲಾಗಿದ್ದ ಬೋನ್‍ನಲ್ಲಿರಿಸಿ ಬೆಂಗಳೂರಿನ ಬನ್ನೇರುಘಟ್ಟಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಹುಲಿ ಅಸುನೀಗಿದೆ.

ಹುಲಿ ಸೆರೆ ಹಾಗೂ ಮರಣೋತ್ತರ ಪರೀಕ್ಷೆ ವೇಳೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್.ಆರ್. ನಟೇಶ್, ಹೆಡಿಯಾಲ ಉಪ ವಿಭಾಗದ ಎಸಿಎಫ್ ಎಂ.ಎಸ್.ರವಿ ಕುಮಾರ್, ಎನ್‍ಟಿಸಿಎ ಪ್ರತಿನಿಧಿ ಹಾಗೂ ವನ್ಯಜೀವಿ ಪರಿಪಾಲಕರಾದ ಕೃತಿಕಾ ಆಲನಹಳ್ಳಿ, ಗುಂಡ್ರೆ ವಲಯ ಆರ್‍ಎಫ್‍ಓ ಶಶಿಧರ್, ಎನ್.ಬೇಗೂರು ಆರ್‍ಎಫ್‍ಓ ಸಚಿನ್, ಎ.ಎಂ ಗುಡಿ ಆರ್‍ಎಫ್‍ಓ ಷಣ್ಮುಗ, ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿ ಉಪಸ್ಥಿತರಿದ್ದರು.

Translate »