ಅಗತ್ಯ ಬಿದ್ದರೆ ಪೊಲೀಸ್ ಬಲ ಬಳಸಿ  ಕೋವಿಡ್ ಕೇರ್ ಸೆಂಟರ್‍ಗೆ ಸ್ಥಳಾಂತರಿಸಿ
ಮೈಸೂರು

ಅಗತ್ಯ ಬಿದ್ದರೆ ಪೊಲೀಸ್ ಬಲ ಬಳಸಿ ಕೋವಿಡ್ ಕೇರ್ ಸೆಂಟರ್‍ಗೆ ಸ್ಥಳಾಂತರಿಸಿ

July 10, 2021

ಮೈಸೂರು, ಜು.9(ಆರ್‍ಕೆಬಿ)- ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕಿತರಾಗಿ ಹೋಂ ಐಸೊಲೇಷನ್‍ನಲ್ಲಿ (ಮನೆಯಲ್ಲೇ ಪ್ರತ್ಯೇಕವಾಗಿ) ಇರುವವರನ್ನು ಕೋವಿಡ್ ಕೇಂದ್ರ ಅಥವಾ ತಾಲೂಕು ಆಸ್ಪತ್ರೆ ಗಳಿಗೆ ಕಳುಹಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಇಂದಿಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿ ದರು. ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗ ಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ (ಜಲಜೀವನ್ ಮಿಷನ್), ಎಂ.ನರೇಗಾ, ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ವೇಳೆ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಮಾಹಿತಿ ತಿಳಿದು ಆತಂಕ ವ್ಯಕ್ತಪಡಿಸಿದರು. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕಿತ 1,335 ಮಂದಿ ಹೋಂ ಐಸೋಲೇಷನ್‍ನಲ್ಲಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದಾಗ ಆತಂಕ ವ್ಯಕ್ತಪಡಿಸಿದ ಅವರು, ಇಡೀ ರಾಜ್ಯದಲ್ಲಿ ಇಷ್ಟೊಂದು ಮಂದಿ ಹೋಂ ಐಸೋಲೇಷನ್‍ನಲ್ಲಿ ಇಲ್ಲ. ಇಲ್ಲಿ ಜಾಸ್ತಿಯಾಗಿದೆ. ಸೋಂಕಿತರು ಹೋಂ ಐಸೋಲೇಷನ್‍ನಲ್ಲಿದ್ದರೆ ಮನೆಯಲ್ಲಿನ ಇತರರಿಗೂ ಸೋಂಕು ತಗಲುವ ಸಾಧ್ಯತೆ ಇದೆ. ಹೀಗಾಗಿ ಅವರನ್ನು ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆಗಳಿಗೆ ಕಳುಹಿಸುವಂತೆ ಸೂಚಿಸಿದರು. ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆಗೆ ಹೋಗಲು ಅವರು ಒಪ್ಪುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರಿಗೆ ಒಪ್ಪಿಸಲು ಪ್ರಯತ್ನಿಸಬೇಕು. ಆ ರೋಗಿಗಳು ಸರ್ಕಾರಿ ಸೌಲಭ್ಯಗಳಿಗೆ ಹೋಗಲು ಒಪ್ಪದಿದ್ದರೆ, ಬಲವಂತವಾಗಿ ಅವರನ್ನು ಪೊಲೀಸ್ ಬಲ ಪಡೆದು ಕೋವಿಡ್ ಕೇರ್ ಸೆಂಟರ್, ಆಸ್ಪತ್ರೆಗಳಿಗೆ ಕಳುಹಿಸಬೇಕು ಎಂದು ಸೂಚನೆ ನೀಡಿದರು.

ಅವರೆಲ್ಲರೂ 14 ದಿನಗಳನ್ನು ಕೋವಿಡ್ ಕೇರ್ ಸೆಂಟರ್‍ಗಳಲ್ಲೇ ಪ್ರತ್ಯೇಕವಾಗಿ ಕಳೆಯಬೇಕು. ಅದಕ್ಕೂ ಮೊದಲು ಮನೆಗೆ ಕಳುಹಿಸಬಾರದು ಎಂದು ಸೂಚಿಸಿದರು.

ನಗರ ಪ್ರದೇಶಗಳಲ್ಲಿ ಕೋವಿಡ್ ಸಕಾರಾತ್ಮಕ ಪ್ರಕರಣಗಳು ಕಡಿಮೆಯಾಗುತ್ತಿವೆ. ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿತ್ತು. ಹಳ್ಳಿಗಳಲ್ಲಿ ಈ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು, ಮನೆಯಲ್ಲಿ ಸೌಲಭ್ಯಗಳ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೋಂ ಐಸೋಲೇಷನ್ ಅನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಹೆಚ್ಚಿನ ಸಂಖ್ಯೆಯ ಜನರು ಹೋಂ ಐಸೋಲೇಷನ್‍ಗೆ ಅವಕಾಶ ಮಾಡಿಕೊಟ್ಟರೆ ಗ್ರಾಮೀಣ ಪ್ರದೇಶದಲ್ಲಿ ಪಾಸಿಟಿವ್ ಪ್ರಕರಣಗಳು ಇನ್ನೂ ಹೆಚ್ಚುತ್ತವೆ ಎಂದು ಹೇಳಿದರು. ಕೋವಿಡ್ ಲಸಿಕೀಕರಣ ಕುರಿತು ಮಾಹಿತಿ ನೀಡಿದ ಡಿಹೆಚ್‍ಓ ಡಾ.ಕೆ.ಹೆಚ್.ಪ್ರಸಾದ್, ಈಗಾಗಲೇ 50 ಲಕ್ಷ ಡೋಸ್ ಲಸಿಕೆ ಅವಶ್ಯಕತೆ ಇದೆ. 13 ಲಕ್ಷ ಲಸಿಕೆ ಬಂದಿದೆ. ಒಂದೂವರೆ ಲಕ್ಷ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಬೇಕಾಗಿದೆ. ಇದುವರೆಗೆ 40,000 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗಿದೆ. ಉಳಿದವರಿಗೆ ಆದಷ್ಟು ಶೀಘ್ರ ಲಸಿಕೆ ನೀಡುವ ಕಾರ್ಯ ಪೂರೈಸಲಾಗುವುದು ಎಂದರು. ಕೋವಿಡ್-19 ಸಾಂಕ್ರಾಮಿಕ ರೋಗದ 3ನೇ ಅಲೆಯನ್ನು ಎದುರಿಸಲು ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಆರೋಗ್ಯ ಇಲಾಖೆ ಸಜ್ಜಾಗಿದೆ. ವೈದ್ಯಕೀಯ ತಜ್ಞರ ಶೇ.12ರಷ್ಟು ಮಕ್ಕಳಿಗೆ ಬರಬಹುದು ಎಂದು ಹೇಳಲಾಗಿದೆ ಎಂದು ಡಿಹೆಚ್‍ಓ, ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅತೀಕ್ ಅಹಮದ್, ಶಾಸಕರಾದ ಸಾ.ರಾ.ಮಹೇಶ್, ಅಶ್ವಿನ್‍ಕುಮಾರ್, ಕೆ.ಮಹದೇವು, ಡಾ.ಯತೀಂದ್ರ, ಜಿಪಂ ಸಿಇಓ ಎ.ಎಂ.ಯೋಗೇಶ್, ಆರ್ಟ್ ಆಫ್ ಲಿವಿಂಗ್‍ನ ನಾಗರಾಜು ಉಪಸ್ಥಿತರಿದ್ದರು.
ಜಲಜೀವನ್ ಮಿಷನ್ ಕಾಮಗಾರಿ ಶೀಘ್ರ ಕೈಗೊಳ್ಳಲು ತಾಕೀತು: ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಜಲಜೀವನ್ ಮಿಷನ್‍ನಲ್ಲಿ ಮೈಸೂರು ಜಿಲ್ಲೆಯಲ್ಲಿ 2021-2022ನೇ ಸಾಲಿಗೆ 753 ಕಾಮಗಾರಿಗಳನ್ನು ಕೈಗೊಳ್ಳಲು 294.36 ಕೋಟಿ ರೂ. ಇದ್ದರೂ ಕಾಮಗಾರಿ ವಿಳಂಬವಾಗಿರುವ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳನ್ನು ಪ್ರಶ್ನಿಸಿದರು. ಗುತ್ತಿಗೆದಾರರಿಗೆ ಶೇ.10ರಷ್ಟು ಕೂಡ ನೀಡದೆ ಇಟ್ಟುಕೊಂಡರೆ ಕಾಮಗಾರಿ ಮುಗಿಯುವುದಾದರೂ ಹೇಗೆ? ಕೆಲಸ ಮಾಡದೆ ಗುತ್ತಿಗೆದಾರ ಹಣ ಕೇಳಲಾಗುವುದಿಲ್ಲ. ಈಗ ನಮ್ಮಲ್ಲಿ ಹಣ ಇದ್ದರೂ ಕೊಡದಿದ್ದರೆ ಗುತ್ತಿಗೆದಾರ ಕೆಲಸ ಮಾಡುವುದಿಲ್ಲ. ಹೀಗಾದರೆ ಕಾಮಗಾರಿ ಪೂರ್ಣಗೊಳಿಸುವುದಾದರೂ ಹೇಗೆ? ಆದಷ್ಟು ಶೀಘ್ರ ಕಾಮಗಾರಿ ಕೈಗೊಂಡು ಪೂರ್ಣಗೊಳಿಸಲು ಸೂಚಿಸಿದರು.

ಜಲಜೀವನ್ ಮಿಷನ್‍ನಲ್ಲಿ ಕೇಂದ್ರದಿಂದ 10,000 ಕೋಟಿ ರೂ. ಹಣ ಬಂದಿದೆ. ಇಷ್ಟೊಂದು ಹಣ ನಾವೆಂದೂ ನೋಡಿಲ್ಲ. ಸಮರ್ಪಕವಾಗಿ ಜನಪ್ರತಿನಿಧಿಗಳು, ಜಿಪಂ, ಗ್ರಾಪಂ ಅಧಿಕಾರಿಗಳೆಲ್ಲರೂ ಸಜ್ಜಾಗಬೇಕಾಗುತ್ತದೆ. ತಾಲೂಕು ಇಓಗಳೊಂದಿಗೆ ಜಿಪಂ ಸಿಇಓ ಸಭೆ ನಡೆಸಿ, ಚರ್ಚಿಸಿ, ಪರಿಣಾಮಕಾರಿಯಾಗಿ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

Translate »