ಮೈಸೂರು, ಜು.23-(ಆರ್‍ಕೆ)-ಸರ್ಕಾರದ ಸೂಚನೆಯಂತೆ ಸೆಪ್ಟೆಂಬರ್ ತಿಂಗಳೊಳಗಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ಅಂತಿಮ ವರ್ಷದ ಪರೀಕ್ಷೆಗಳನ್ನು ಮುಗಿಸುವುದಾಗಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ ಕುಮಾರ್ ತಿಳಿಸಿದ್ದಾರೆ.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಯಲ್ಲಿ ಅಗತ್ಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಿ ಎಂದು ಕೇಂದ್ರ ಮಾನವ ಸಂಪ ನ್ಮೂಲ ಅಭಿವೃದ್ಧಿ ಸಚಿವಾಲಯದ ನಿರ್ದೇಶನದಂತೆ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ ಎಂದು ತಿಳಿಸಿದರು.
ದೇಶದ 900 ವಿಶ್ವವಿದ್ಯಾನಿಲಯಗಳ ಪೈಕಿ 760 ವಿಶ್ವ ವಿದ್ಯಾನಿಲಯಗಳು ಪರೀಕ್ಷೆ ನಡೆಸಲು ಒಪ್ಪಿಕೊಂಡಿವೆ. ಇದೀಗ ರಾಜ್ಯ ಸರ್ಕಾರ ತೆಗದುಕೊಂಡ ನಿರ್ಧಾರದಂತೆ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಸೆಪ್ಟೆಂಬರ್ ತಿಂಗಳೊಳ ಗಾಗಿ ಪೂರ್ಣಗೊಳಿಸಬೇಕಾಗಿದೆ ಎಂದು ಪ್ರೊ. ಹೇಮಂತ ಕುಮಾರ್ ನುಡಿದರು. ಈ ಸಂಬಂಧ ಎಲ್ಲಾ ವಿಭಾಗಗಳ ಮುಖ್ಯಸ್ಥರು ಪರೀಕ್ಷಾಂಗ ಕುಲಸಚಿವರೊಂದಿಗೆ ಚರ್ಚಿಸಿ ಸೋಮವಾರದೊಳಗೆ ಅಂತಿಮ ನಿರ್ಧಾರ ಕೈಗೊಂಡು ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.