ಮೈಸೂರು, ಆ.23(ಆರ್‍ಕೆಬಿ)- ನಂಜನಗೂಡು ತಾಲೂಕು ಆರೋ ಗ್ಯಾಧಿಕಾರಿ ಡಾ.ಎಸ್.ಆರ್.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂ ಧಿಸಿ ಮೈಸೂರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ವಿರುದ್ಧ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಡಾ.ನಾಗೇಂದ್ರ ಅವರ ತಂದೆ ರಾಮಕೃಷ್ಣ ನೀಡಿದ ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 306ರನ್ವಯ ಎಫ್‍ಐಆರ್ ದಾಖಲಿಸಿದ್ದಾರೆ.
ಸಿಇಓ ವರ್ಗಾವಣೆ: ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರಿಗೆ ಕಿರುಕುಳ ನೀಡಿ, ಅವರ ಸಾವಿಗೆ ಕಾರಣರಾದರು ಎಂಬ ಆರೋಪಕ್ಕೆ ಗುರಿ ಯಾಗಿರುವ ಮೈಸೂರು ಜಿಪಂ ಸಿಇಒ ಪಿ.ಕೆ.ಮಿಶ್ರಾ ಅವರನ್ನು ರಾಜ್ಯ ಸರ್ಕಾರ ವರ್ಗಾ ಯಿಸಿದ್ದು, ಈವರೆಗೂ ಯಾವುದೇ ಸ್ಥಳ ತೋರಿಸಿಲ್ಲ. ಜಿಪಂ ಸಿಇಒ ಜವಾಬ್ದಾರಿಯನ್ನು ಸರ್ಕಾರ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರಿಗೆ ಹೆಚ್ಚುವರಿಯಾಗಿ ವಹಿಸಿದೆ.
ಜಿಪಂ ಸಿಇಓ ವರ್ಗಾವಣೆ ತಡೆಗೆ ಪಿಡಿಓಗಳ ಸಂಘ ಆಗ್ರಹ
ಮೈಸೂರು,ಆ.23(ಆರ್‍ಕೆಬಿ)-ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣದಲ್ಲಿ ಜಿಪಂ ಸಿಇಒ ಪ್ರಶಾಂತ್‍ಕುಮಾರ್ ಮಿಶ್ರಾ ಅವರ ಹೆಸರನ್ನು ಎಳೆದು ತಂದು ಅನಗತ್ಯವಾಗಿ ವರ್ಗಾ ಯಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಕ್ಷೇಮಾಭಿವೃದ್ಧಿ ಸಂಘದ ಮೈಸೂರು ಜಿಲ್ಲಾ ಘಟಕ ಆಕ್ಷೇಪ ವ್ಯಕ್ತಪಡಿಸಿದೆ.
ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಕೆಟ್ಟ ಪದಗಳಿಂದ ನಿಂದಿಸುತ್ತಿರುವುದು ಸರಿಯಲ್ಲ. ಮಿಶ್ರಾ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿರುವ, ಅವರ ಮಾನವೀಯ ಗುಣಗಳನ್ನು ಹತ್ತಿರದಿಂದ ನೋಡಿರುವ ನಮ್ಮ ಇಲಾಖೆಯ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಈ ನಿಂದನೆ ತುಂಬಾ ನೋವುಂಟು ಮಾಡಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎಂ.ಡಿ.ಮಾಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಡಾ.ನಾಗೇಂದ್ರ ಅವರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಖಂಡಿತ ಕಾನೂನಿನಡಿ ಕ್ರಮ ಜರುಗಿಸಲಿ. ಇದಕ್ಕೆ ಯಾರ ವಿರೋಧವಿಲ್ಲ. ಆದರೆ ಕಾರಣ ತಿಳಿಯದೇ ಏಕಾಏಕಿಯಾಗಿ ಒಬ್ಬ ನಿಷ್ಟಾವಂತ, ದಕ್ಷ ಹಾಗೂ ಪ್ರಾಮಾಣಿಕ ವ್ಯಕ್ತಿಯ ತೇಜೋವಧೆ ಮಾಡುವುದು ಸರಿಯಲ್ಲ. ಸರ್ಕಾರದ ಆದೇಶ ಪಾಲಿಸಿ, ಇಲಾಖೆಯನ್ನು ಪ್ರಗತಿಯತ್ತ ಕೊಂಡೊಯ್ಯಲು ಹಗಲು ರಾತ್ರಿ ಶ್ರಮಿಸುತ್ತಿರುವ ಸಿಇಒ ಅಂತಹ ಅಧಿಕಾರಿಗೆ ಅವಮಾನ ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ. ತನಿಖೆಗೆ ಒಳಪಡಿಸಿ, ವರದಿ ಬರುವ ಮೊದಲೇ ಹೊರಡಿಸಿರುವ ವರ್ಗಾವಣೆ ಆದೇಶವನ್ನು ತಡೆ ಹಿಡಿಯಬೇಕು. ತನಿಖಾ ವರದಿ ಬಂದ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ. ಧಕ್ಷ, ಪ್ರಾಮಾಣಿಕ ಅಧಿಕಾರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಿ ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗೆ ಮನವಿ: ನಿಷ್ಠಾವಂತ ಅಧಿಕಾರಿಯಾದ ಜಿಪಂ ಸಿಇಒ ಮಿಶ್ರಾ ಅವರ ವರ್ಗಾವಣೆ ಸರಿಯಲ್ಲ. ಆ ಆದೇಶವನ್ನು ತಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಎಂ.ಡಿ.ಮಾಯಪ್ಪ ತಿಳಿಸಿದ್ದಾರೆ.