ಕಲಾಮಂದಿರದ ಬಳಿ ಬೆಂಕಿ
ಮೈಸೂರು

ಕಲಾಮಂದಿರದ ಬಳಿ ಬೆಂಕಿ

March 5, 2021

ಮೈಸೂರು, ಮಾ.4(ಆರ್‍ಕೆ)-ಮೈಸೂರಿನ ಕಲಾಮಂದಿರದ ಪಕ್ಕದಲ್ಲಿ ಗಿಡ-ಗಂಟಿಗಳಿಗೆ ಬೆಂಕಿ ತಗುಲಿ ಸುಟ್ಟು ಹೋಗಿರುವ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಜಿಲ್ಲಾಧಿಕಾರಿ ನಿವಾಸದೆದುರು ಕುಕ್ಕರಹಳ್ಳಿ ಕೆರೆಗೆ ಹೊಂದಿ ಕೊಂಡಂತಿರುವ ಕಲಾಮಂದಿರದ ಪಕ್ಕದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸರಸ್ವತಪುರಂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

ಘಟನೆಯಿಂದ ಒಣ ಗಿಡ-ಗಂಟಿ, ಮರದಿಂದ ಉದುರಿದ್ದ ತರಗೆಲೆ ಹಾಗೂ ಸಣ್ಣ ಸಣ್ಣ ಮರಗಳ ಕೊಂಬೆಗಳು ಸುಟ್ಟು ಹೋಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳ ಕಾರ್ಯಾಚರಣೆಯಿಂದಾಗಿ ಸಂಭವಿಸಬಹುದಾದ ಭಾರೀ ಅಗ್ನಿ ಅವಘಡ ತಪ್ಪಿದಂತಾಗಿದೆ. ಜಯಲಕ್ಷ್ಮಿಪುರಂ ಠಾಣೆ ಪೊಲೀಸರು, ಮೈಸೂರು ವಿಶ್ವವಿದ್ಯಾನಿಲಯದ ಅಧಿಕಾರಿಗಳೂ ಸಹ ಸ್ಥಳಕ್ಕೆ ಭೇಟಿ ನೀಡಿದ್ದರು.

Translate »