ಲಾಕ್‍ಡೌನ್ ನಡುವೆಯೇ ಬೆಂಗಳೂರಿನಿಂದ ಆಗಮಿಸಿದ್ದ ಐವರು ಕ್ವಾರಂಟೈನ್‍ಗೆ ದಾಖಲು
ಕೊಡಗು

ಲಾಕ್‍ಡೌನ್ ನಡುವೆಯೇ ಬೆಂಗಳೂರಿನಿಂದ ಆಗಮಿಸಿದ್ದ ಐವರು ಕ್ವಾರಂಟೈನ್‍ಗೆ ದಾಖಲು

April 20, 2020

ಮಡಿಕೇರಿ, ಏ.19- ಬೆಂಗಳೂರಿನಲ್ಲಿ ಸುಳ್ಳು ಮಾಹಿತಿ ನೀಡಿ ವೈದ್ಯಕೀಯ ಪಾಸ್ ಪಡೆದು ಕೊಡಗು ಪ್ರವೇಶಿಸಿ ಹೋಂ ಸ್ಟೇ ಒಂದರಲ್ಲಿ ವಾಸ್ತವ್ಯ ಹೂಡಿದ್ದ ಬೆಂಗಳೂರು ಹಾಗೂ ತುಮಕೂರು ಮೂಲದ ಐವರು ಹಾಗೂ ಹೋಂ ಸ್ಟೇ ಮಾಲೀಕನ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲಾ ಆರೋಪಿಗಳನ್ನು ಜಿಲ್ಲಾ ಕ್ವಾರಂಟೈನ್‍ನಲ್ಲಿ ದಾಖಲಿಸಲಾಗಿದೆ.

ಪ್ರಕರಣ ಹಿನ್ನಲೆ: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೊದ್ದೂರು ಗ್ರಾಮ ಪಂಚಾಯಿತಿಗೆ ಒಳಪಡುವ ಹೋಂ ಸ್ಟೇಗೆ 15 ದಿನಗಳ ಹಿಂದೆ ತುಮಕೂರು ಮೂಲದ ಇಬ್ಬರು ಬೆಂಗಳೂರಿನಿಂದ ಬಂದು ವಾಸ್ತವ್ಯ ಹೂಡಿರುವುದು ಕಂಡು ಬಂದಿತ್ತು. ಬಳಿಕ ಅವರನ್ನು ಹೋಂ ಸ್ಟೇನಲ್ಲಿಯೇ ಕ್ವಾರಂಟೈನ್ ಮಾಡಿ ಹೋಂ ಸ್ಟೇ ಮಾಲಿಕರಿಗೆ ಎಚ್ಚರಿಕೆ ನೀಡಲಾಗಿತ್ತು.

ಇದಾದ ಬಳಿಕ ಏ.17ರಂದು ಬೆಂಗಳೂರು ಮೂಲದ ಓರ್ವ ಮಹಿಳೆ ಬೆಂಗಳೂರು ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ ವೈದ್ಯಕೀಯ ಪಾಸ್ ಪಡೆದು ತುಮಕೂರು ಮೂಲದ ಓರ್ವ ವ್ಯಕ್ತಿ ಹಾಗೂ ಮಹಿಳೆಯೊಂದಿಗೆ ಹೋಂಸ್ಟೇಗೆ ಬಂದು ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತದನಂತರ ಡಿಸಿಐಬಿ ಪೊಲೀಸರು, ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಫೀಸರ್ ಅನನ್ಯ, ಹೊದ್ದೂರು ಪಿಡಿಓ ನೇತೃತ್ವದಲ್ಲಿ ದಾಳಿ ನಡೆಸಿ ಅನಧಿಕೃತವಾಗಿ ವಾಸ್ತವ್ಯ ಹೂಡಿದ್ದ ಐವರು ಹಾಗೂ ಹೋಂ ಸ್ಟೇ ಮಾಲಿಕರನ್ನು ವಶಕ್ಕೆ ಪಡೆದು ಸ್ಟ್ಯಾಂಪ್ ಮಾಡಿ ಜಿಲ್ಲಾ ಕ್ವಾರಂಟೈನ್‍ಗೆ ಸೇರಿಸಲಾಗಿದೆ. ಪ್ರಕರಣ ನಡೆದ ರಾತ್ರಿಯೇ ಹೋಂ ಸ್ಟೇಯನ್ನು ಸೀಲ್ ಮಾಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಹಾಗೂ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯಿದೆ ಪ್ರಕಾರ ಪ್ರಕರಣ ದಾಖಲಾಗಿದೆ.

ರಾಜ್ಯದ ಇತರೆಡೆಗಳಿಂದ ಬಂದು ಕೊಡಗಿನ ಹೋಂ ಸ್ಟೇ ರೆಸಾರ್ಟ್‍ಗಳಲ್ಲಿ ವಾಸ್ತವ್ಯ ಹೂಡುವ ಬಗ್ಗೆ ಕೆಲವು ವ್ಯಕ್ತಿಗಳು ಪ್ರಯತ್ನಿಸುತ್ತಿರುವ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆಗೆ ಮಾಹಿತಿ ಲಭಿಸಿದೆ. ಇದಕ್ಕೆ ಅವಕಾಶ ನೀಡುವ ಹೊಟೇಲ್, ರೆಸಾರ್ಟ್, ಹೋಂ ಸ್ಟೇ ಮಾಲಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗು ವುದು. ಇಂತಹ ಚಟುವಟಿಕೆಗಳ ಬಗ್ಗೆ ಕೊಡಗು ಪೊಲೀಸ್ ತೀವ್ರ ನಿಗಾ ವಹಿಸಿದೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ತಿಳಿಸಿದ್ದಾರೆ.

Translate »