ಜಿಲ್ಲಾಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಪತ್ರ
ಅವಶ್ಯಕ ಕಾಮಗಾರಿಗಷ್ಟೇ ಬಳಸಲು ಕ್ರಮ ವಹಿಸಿ
ಮೈಸೂರು, ಸೆ.8(ಪಿಎಂ)- ಕೇಂದ್ರ ಸರ್ಕಾರದ 15ನೇ ಹಣಕಾಸು ಯೋಜನೆಯಡಿ ಮೈಸೂರು ಮಹಾನಗರ ಪಾಲಿಕೆಗೆ ಬಿಡುಗಡೆಯಾಗಿರುವ 69.39 ಕೋಟಿ ರೂ. ಅನುದಾನವನ್ನು ಅತ್ಯಾವಶ್ಯಕ ಕಾಮಗಾರಿಗಳಿಗಷ್ಟೇ ಬಳಸಲು ಕ್ರಮ ವಹಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಮಂಗಳವಾರ ಪತ್ರ ಬರೆದಿದ್ದಾರೆ. 15ನೇ ಹಣಕಾಸು ಯೋಜನೆಯಡಿಯ 69.39 ಕೋಟಿ ರೂ. ಅನುದಾನದಲ್ಲಿ ನಿಯಮಾವಳಿಯಂತೆ ಶೇ.25ರಷ್ಟು ಹಣವನ್ನು ಘನತ್ಯಾಜ್ಯ ನಿರ್ವಹಣೆಗೆ ಹಾಗೂ ಶೇ.25ರಷ್ಟು ಹಣವನ್ನು ನೀರು ಪೂರೈಕೆ ಕಾಮಗಾರಿಗೆ ಬಳಸಲು ಅವಕಾಶವಿದೆ. ಅದರಂತೆ ವಿದ್ಯಾರಣ್ಯ ಪುರಂ, ರಾಯನಕೆರೆ ಹಾಗೂ ಕೆಸರೆ ಘನತ್ಯಾಜ್ಯ ಘಟಕಗಳು ಹಾಗೂ ಪ್ರಗತಿಯಲ್ಲಿರುವ ಮೇಗಳಾಪುರ ಮತ್ತು ಹೊಂಗಳ್ಳಿ ಜಲಶುದ್ಧೀಕರಣ ಕಾಮಗಾರಿಗೆ ಈ ಅನುದಾನವನ್ನು ಸಂಪೂರ್ಣ ಸದ್ಬಳಕೆ ಮಾಡಬೇಕು ಎಂದು ಪ್ರತಾಪ್ ಸಿಂಹ ಅವರು ಪತ್ರದಲ್ಲಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.
ಇದರಲ್ಲಿ ಇನ್ನುಳಿದ ಶೇ.50ರಷ್ಟು ಅನುದಾನ ಹಾಗೂ 14ನೇ ಹಣಕಾಸು ಯೋಜನೆಯ ಉಳಿಕೆಯಾಗಿರುವ 9.30 ಕೋಟಿ ರೂ. ಅನುದಾನವನ್ನು ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ನಿಯಮಾವಳಿ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಪಾಲಿಕೆ ಸದಸ್ಯರ ಅಭಿಪ್ರಾಯ ಪಡೆದು ವಿನಿಯೋಗ ಮಾಡಬೇಕು. ಇದರ ಹೊರತಾಗಿ ಕೇಂದ್ರ ಸರ್ಕಾರದ ಅನುದಾನವನ್ನು ಯಾವುದೇ ಕಾರಣಕ್ಕೂ ವೃತ್ತಗಳು, ಸ್ಮಶಾನದ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿ, ಪೋಲು ಮಾಡಬಾರದು ಎಂದು ಪತ್ರದಲ್ಲಿ ಸಂಸದರು ಉಲ್ಲೇ ಖಿಸಿದ್ದಾರೆ. ಈ ಹಿಂದಿನಿಂದ ಮೇಯರ್, ಉಪಮೇಯರ್, ವಕ್ರ್ಸ್ ಸಮಿತಿ ಸದಸ್ಯರು, ಮಾಜಿ ಮೇಯರ್‍ಗಳು ಹಾಗೂ ಪಕ್ಷದ ಮುಖಂಡರು ನಿಯಮಾವಳಿಗಳನ್ನು ಉಲ್ಲಂಘಿಸಿ, ಹೊಂದಾಣಿಕೆ ರಾಜಕಾರಣದ ಮೂಲಕ ಸಿಂಹಪಾಲನ್ನು ಪಡೆದುಕೊಳ್ಳುವಂತಹ ಅನಧಿಕೃತ ವ್ಯವಸ್ಥೆ ಪಾಲಿಸಿಕೊಂಡು ಬರುತ್ತಿದ್ದಾರೆ. ಇಂತಹ ಹೊಂದಾಣಿಕೆ ವ್ಯವಸ್ಥೆಯನ್ನು ಅಂತ್ಯ ಗೊಳಿಸಬೇಕು ಎಂದು ಪತ್ರದಲ್ಲಿ ಸಂಸದರು ತಿಳಿಸಿದ್ದಾರೆ.